ಬೆಂಗಳೂರು: ಕರ್ನಾಟಕದ ಕುಳ್ಳ ಅಂತಾನೇ ಫೇಮಸ್ ಆಗಿದ್ದ ಹಿರಿಯ ನಟ, ನಿರ್ಮಾಪಕ, ನಿರ್ದೇಶಕ ದ್ವಾರಕೀಶ್ ಅವರು ಎಲೆಕ್ಟ್ರಾನಿಕ್ ಸಿಟಿಯಲ್ಲಿನ ಸ್ಮೈಲ್ ಗ್ರೀನ್ಸ್ ವಿಲ್ಲಾದಲ್ಲಿ ಇಂದು ಇಹಲೋಕ ತ್ಯಜಿಸಿದ್ದಾರೆ. ಈ ಕುರಿತು ಅವರ ಮಗ ಯೋಗೀಶ್ ಅವರು ಮಾಹಿತಿ ನೀಡಿದ್ದಾರೆ.
ರಾತ್ರಿ ನಾನು ಮತ್ತು ಅಪ್ಪ ಒಟ್ಟಿಗೆ ಮಲಗಿದ್ದೆವು. ರಾತ್ರಿ ಅವರಿಗೆ ಲೂಸ್ ಮೋಷನ್ ಆಯ್ತು. ಇದರಿಂದ ಅನ್ ಈಸಿ ಆಗಿ ಫೀಲ್ ಆದರು. ಬೆಳಗ್ಗೆ ಎದ್ದು ಕಾಫಿ ಬೇಕು ಅಂದ್ರು. ಕಾಪಿ ಕುಡಿದ ಬಳಿಕ ಎರಡು ತಾಸು ಮಲಗೋದಾಗಿ ಹೇಳಿದ್ರು. ಆದರೆ ಬಳಿಕ ಬೆಳಗ್ಗೆ 11 ಗಂಟೆಗೆ ನಿದ್ದೆಯಲ್ಲೇ ಇಹಲೋಕ ತ್ಯಜಿಸಿದ್ದಾರೆ ಎಂದು ದ್ವಾರಕೀಶ್ ಪುತ್ರ ಯೋಗೀಶ್ ಅವರು ತಿಳಿಸಿದ್ದಾರೆ.
ಚಾಮರಾಜಪೇಟೆಯ ಟಿಆರ್ಮಿಲ್ನಲ್ಲಿ ಬುಧವಾರ ಅಂತ್ಯಕ್ರಿಯೆ ನೆರವೇರಿಸುತ್ತೇವೆ. ಅಂತಿಮ ದರ್ಶನಕ್ಕಾಗಿ ರವೀಂದ್ರ ಕಲಾಕ್ಷೇತ್ರದಲ್ಲಿ ಪಾರ್ಥಿವ ಶರೀರ ಇರಿಸಲು ಮಾತುಕತೆ ನಡೆಸಲಾಗುತ್ತಿದೆ. ಸದ್ಯ ಸ್ಮೈಲ್ ಗ್ರೀನ್ಸ್ ವಿಲ್ಲಾದಲ್ಲೇ ಸಾರ್ವಜನಿಕರ ಅಂತ್ಯಕ್ರಿಯೆಗೆ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ಯೋಗೀಶ್ ಮಾಹಿತಿ ನೀಡಿದರು.
ಇದನ್ನೂ ಓದಿ: ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್ ಇನ್ನಿಲ್ಲ - Dwarakish passes away
1942ರ ಆಗಸ್ಟ್ 19ರಂದು ಹುಣಸೂರಿನಲ್ಲಿ ದ್ವಾರಕೀಶ್ ಜನಿಸಿದರು. ಚಿಕ್ಕಂದಿನಿಂದಲೇ ಸಿನಿಮಾ ಪ್ರೀತಿ ಬೆಳೆಸಿಕೊಂಡಿದ್ದ ಇವರಿಗೆ ಸಿ.ವಿ.ಶಂಕರ್ ನಿರ್ದೇಶನದಲ್ಲಿ 'ವೀರಸಂಕಲ್ಪ'ದಲ್ಲಿ ದ್ವ ಮೊದಲ ಅವಕಾಶ ಒಲಿದಿತ್ತು. ಬಳಿಕ ಸತ್ಯ ಹರಿಶ್ಚಂದ್ರ, ಕ್ರಾಂತಿ ವೀರ, ಮೇಯರ್ ಮುತ್ತಣ್ಣ, ದೂರದ ಬೆಟ್ಟ, ಗಾಂಧಿನಗರ, ಬಾಳು ಬೆಳಗಿತು, ಬಂಗಾರದ ಮನುಷ್ಯ, ಬಹದ್ದೂರ್ ಗಂಡು, ಏಜೆಂಟ್ ೦೦೦, ಭಾಗ್ಯವಂತರು, ಕಳ್ಳ ಕುಳ್ಳ, ಮನೆ ಮನೆ ಕಥೆ, ಇಂದಿನ ರಾಮಾಯಣ, ಕಿಟ್ಟು ಪುಟ್ಟು, ಸಿಂಗಾಪೂರದಲ್ಲಿ ರಾಜಾ ಕುಳ್ಳ, ಗುರು ಶಿಷ್ಯರು, ಆಪ್ತಮಿತ್ರ, ಆನಂದ ಭೈರವಿ ಸೇರಿದಂತೆ ಹಲವು ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ.
ದ್ವಾರಕೀಶ್ ಮತ್ತು ಸಾಹಸಿಂಗ ವಿಷ್ಣುವರ್ಧನ್ ಜೋಡಿ ಕನ್ನಡ ಚಿತ್ರರಂಗದಲ್ಲಿ ಹಲವು ಹಿಟ್ ಸಿನಿಮಾಗಳನ್ನು ನೀಡಿದ್ದು, ಈ ಜೋಡಿ ಪ್ರಸಿದ್ಧವಾಗಿತ್ತು. ಹಾಸ್ಯ ಕಲಾವಿದರಾಗಿ, ನಾಯಕ ನಟನಾಗಿ ನೂರಾರು ಸಿನಿಮಾಗಳಲ್ಲಿ ದ್ವಾರಕೀಶ್ ತಮ್ಮ ಮನೋಜ್ಞ ಅಭಿನಯದಿಂದ ಕನ್ನಡ ಅಭಿಮಾನಿಗಳ ಕುಳ್ಳನಾಗಿ ಪ್ರಸಿದ್ಧಿ ಪಡೆದಿದ್ದರು. ಕನ್ನಡದ ಜೊತೆಗೆ ತಮಿಳು, ಹಿಂದಿ ಸಿನಿಮಾಗಳನ್ನೂ ದ್ವಾರಕೀಶ್ ನಿರ್ಮಿಸಿದ್ದಾರೆ