ರಾಮಮಂದಿರದ ಉದ್ಘಾಟನೆಗೆ ಕ್ಷಣಗಣನೆ ಆರಂಭಗೊಂಡಿದೆ. ಐತಿಹಾಸಿಕ ಘಟನೆಗೆ ಇಡೀ ಭಾರತ ಎದುರು ನೋಡುತ್ತಿದ್ದು, ವಿದೇಶಗಳಿಂದಲೂ ಉತ್ಸಾಹ ವ್ಯಕ್ತವಾಗುತ್ತಿದೆ. ಜನವರಿ 22ರಂದು ಭಗವಾನ್ ಶ್ರೀರಾಮನ ಪ್ರಾಣ ಪ್ರತಿಷ್ಠಾಪನಾ ಸಮಾರಂಭ ನೆರವೇರಲಿದ್ದು, ಕಲಾವಿದರು, ಕ್ರಿಕೆಟಿಗರು, ಉದ್ಯಮಿಗಳು ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಭಾಗಿಯಾಗುವ ನಿರೀಕ್ಷೆಯಿದೆ. ಈಗಾಗಲೇ ಕೆಲವರು ಕಾರ್ಯಕ್ರಮಕ್ಕೆ ತೆರಳಿದ್ದಾರೆ. ಇದೀಗ ಬಾಲಿವುಡ್ ನಟಿ ಕಂಗನಾ ರಣಾವತ್ ಅಯೋಧ್ಯೆ ತಲುಪಿದ್ದಾರೆ. ತೆರಳುವ ಮುನ್ನ ಮತ್ತು ತಲುಪಿದ ನಂತರ ವಿಮಾನ ನಿಲ್ದಾಣಗಳಲ್ಲಿ ನಟಿ ಕಾಣಿಸಿಕೊಂಡಿದ್ದಾರೆ. ಏರ್ಪೋರ್ಟ್ಗಳಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಬಾಲಿವುಡ್ ನಟಿ, ಬಹುನಿರೀಕ್ಷಿತ ಸಮಾರಂಭದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಏರ್ಪೋರ್ಟ್ಗಳಿಂದ ವಿಡಿಯೋಗಳು ಹೊರಬರುತ್ತಿವೆ. ರಾಮಮಂದಿರದ ಮಹತ್ವದ ಬಗ್ಗೆ ಮಾತನಾಡಿದ ನಟಿ ಕಂಗನಾ ರಣಾವತ್, ಇದು ನವ ಯುಗದ ಪ್ರಾರಂಭವನ್ನು ಪ್ರತಿನಿಧಿಸುತ್ತದೆ ಎಂದು ಹೇಳಿದ್ದಾರೆ. ನಟಿಯ ಪ್ರಕಾರ, ರಾಮಮಂದಿರ ಕೇವಲ ಪ್ರತಿಮೆಯಲ್ಲ, ಬದಲಿಗೆ 'ಅಗಾಧ ಪ್ರಜ್ಞೆಯ ಸಾಕಾರ' ಕ್ಷಣ. ಹಾಗಾಗಿ ಈ ಘಳಿಗೆ 'ಭಾರತ'ದಲ್ಲಿ ಹೊಸ ಅಧ್ಯಾಯದ ಆರಂಭವನ್ನು ಸೂಚಿಸುತ್ತದೆ. ಇದು ಮಿತಿಯಿಲ್ಲದ ಸಂತಸ, ವರ್ಣನಾತೀತ ಸಂತೋಷ ಸೃಷ್ಟಿಸುತ್ತದೆ ಎಂದು ತಿಳಿಸಿದ್ದಾರೆ.
ಈ ಐತಿಹಾಸಿಕ ಸಂದರ್ಭಕ್ಕೆ ಆಹ್ವಾನಿಸಿದ್ದಕ್ಕಾಗಿ ತಮ್ಮ ಉತ್ಸಾಹ ವ್ಯಕ್ತಪಡಿಸಿದ ಕಂಗನಾ, ಭಗವಾನ್ ಶ್ರೀರಾಮನ ಮೇಲಿರುವ ತಮ್ಮ ಭಕ್ತಿಯನ್ನು ಬಹಿರಂಗಪಡಿಸಿದರು. ನಟಿಯ ದೃಷ್ಟಿಯಲ್ಲಿ, ಈ ಐತಿಹಾಸಿಕ ದಿನಕ್ಕೆ ಸಾಕ್ಷಿಯಾಗಲು ಸಾಧ್ಯವಾಗುವುದು ತಮ್ಮ ಹಿಂದಿನ ಜೀವನದ 'ಕರ್ಮ'ದ ಫಲವಾಗಿ. ಈ ಮಹತ್ವದ ದಿನವನ್ನು ತರಲು ದೇಶವು ಒಗ್ಗೂಡಿದ್ದು, ಇಡೀ ರಾಷ್ಟ್ರಕ್ಕಿದು ಅದೃಷ್ಟದ ಕ್ಷಣವೆಂದು ಭಾವಿಸಿದ್ದಾರೆ.
ಪಾಪರಾಜಿಗಳು ಹಂಚಿಕೊಂಡಿರುವ ಮತ್ತೊಂದು ವಿಡಿಯೋದಲ್ಲಿ, ಆಯೋಧ್ಯೆಯ ದರ್ಶನ ಪಡೆಯಲು ಹಲವು ಜನ್ಮಗಳ ಪುಣ್ಯ ಮಾಡಿರಬೇಕು. ನನಗಿದು ಸೌಭಾಗ್ಯದ ಕ್ಷಣ. ಕಾರ್ಯಕ್ರಮ ಪೂರ್ಣಗೊಳ್ಳುವವರೆಗೂ ಅಯೋಧ್ಯೆಯಲ್ಲೇ ಇರಲಿರುವೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: 'ಫೈಟರ್' ಅಡ್ವಾನ್ಸ್ ಟಿಕೆಟ್; ಭರ್ಜರಿ ವ್ಯವಹಾರ ನಡೆಸುತ್ತಿದೆ ಹೃತಿಕ್ - ದೀಪಿಕಾ ಜೋಡಿಯ ಸಿನಿಮಾ
ಕಂಗನಾ ರಣಾವತ್ ಅಲ್ಲದೇ, ಅಮಿತಾಭ್ ಬಚ್ಚನ್, ರಿಷಬ್ ಶೆಟ್ಟಿ, ರಾಮ್ ಚರಣ್, ರಜನಿಕಾಂತ್, ರಣ್ಬೀರ್ ಕಪೂರ್, ಆಲಿಯಾ ಭಟ್, ಅನುಷ್ಕಾ ಶರ್ಮಾ, ವಿರಾಟ್ ಕೊಹ್ಲಿ, ಜಾಕಿ ಶ್ರಾಫ್ ಫ್ಯಾಮಿಲಿ, ಆಯುಷ್ಮಾನ್ ಖುರಾನಾ ಸೇರಿದಂತೆ ವಿವಿಧ ಕ್ಷೇತ್ರಗಳ ಖ್ಯಾತನಾಮರಿಗೆ ರಾಮಮಂದಿರ ಉದ್ಘಾಟನಾ ಸಮಾರಂಭಕ್ಕೆ ಸಾಕ್ಷಿಯಾಗಲು ಆಹ್ವಾನಿಸಲಾಗಿದೆ.
ಇದನ್ನೂ ಓದಿ: ಬಿಗ್ ಬಾಸ್: ಮಾಜಿ ಸ್ಪರ್ಧಿಗಳ ವರ್ತನೆಗೆ ಸುದೀಪ್ ಗರಂ - ವಿಡಿಯೋ ನೋಡಿ
ಕಂಗನಾ ರಣಾವತ್ ಅವರ ಇತ್ತೀಚಿನ ಸಿನಿಮಾಗಳು ಗಲ್ಲಾಪೆಟ್ಟಿಗೆಯಲ್ಲಿ ನೀರಸ ಪ್ರದರ್ಶನ ನೀಡಿವೆ. ಕೊನೆಯ ಚಿತ್ರವಾದ 'ತೇಜಸ್' ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಸಾಧಿಸಿಲ್ಲ. ಸದ್ಯ 'ಎಮರ್ಜೆನ್ಸಿ' ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಇದು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಜೀವನವನ್ನು ಆಧರಿಸಿದೆ.