'ದೇವರ ಪಾರ್ಟ್ 1' ಈ ಸಾಲಿನ ಬಹುನಿರೀಕ್ಷಿತ ಚಿತ್ರ. ಸೌತ್ ಸೂಪರ್ ಸ್ಟಾರ್ ಜೂನಿಯರ್ ಎನ್‌ಟಿಆರ್ ಹಾಗೂ ಬಾಲಿವುಡ್ ಬೆಡಗಿ ಜಾಹ್ನವಿ ಕಪೂರ್ ಮುಖ್ಯಭೂಮಿಕೆಯ ಈ ಆ್ಯಕ್ಷನ್ ಥ್ರಿಲ್ಲರ್ ಸೆಪ್ಟೆಂಬರ್ 27 ರಂದು ಚಿತ್ರಮಂದಿರ ಪ್ರವೇಶಿಸಲಿದೆ. ಬಿಡುಗಡೆಯ ದಿನಾಂಕ ಸಮೀಪಿಸುತ್ತಿದ್ದಂತೆ, ಚಿತ್ರ ತನ್ನ ಪ್ರಮೋಶನ್ ಚುರುಕುಗೊಳಿಸಿದೆ. ಸಿನಿಮಾ ಸುತ್ತಲಿನ ಅಪ್ಡೇಟ್ಸ್, ಅಂತೆಕಂತೆಗಳು ಅಭಿಮಾನಿಗಳ ಕುತೂಹಲ ಕೆರಳಿಸಿದೆ. ಇದೀಗ, ಚಿತ್ರದ ಎರಡನೇ ಹಾಡಿನ ಬಿಡುಗಡೆ ದಿನಾಂಕವನ್ನು ನಿರ್ಮಾಪಕರು ಬಹಿರಂಗಪಡಿಸಿದ್ದು, ಪ್ರೇಕ್ಷಕರ ಉತ್ಸಾಹ ಗರಿಗೆದರಿದೆ.
ಇಂದು ಜಾಹ್ನವಿ ಕಪೂರ್ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ನಲ್ಲಿ ಚಿತ್ರದ ಹೊಸ ಪೋಸ್ಟರ್ ಹಂಚಿಕೊಂಡಿದ್ದಾರೆ. ಪೋಸ್ಟರ್, ಜಾಹ್ನವಿ ಹಾಗೂ ಜೂನಿಯರ್ ಎನ್‌ಟಿಆರ್ ಅವರನ್ನೊಳಗೊಂಡಿದೆ. ಸಖತ್ ರೊಮ್ಯಾಂಟಿಕ್ ಭಂಗಿಯಲ್ಲಿ ಜೋಡಿ ಕಾಣಿಸಿಕೊಂಡಿದೆ. ಪೋಸ್ಟರ್ ಜೊತೆಗೆ, "ಬಹು ನಿರೀಕ್ಷಿತ ದೇವರ ಚಿತ್ರದ ಎರಡನೇ ಹಾಡು ಆಗಸ್ಟ್ 5 ರಂದು ಬಿಡುಗಡೆಯಾಗಲಿದೆ. ಸೆಪ್ಟೆಂಬರ್ 27ಕ್ಕೆ ಸಿನಿಮಾ ಬಿಡುಗಡೆ" ಎಂದು ಬರೆದುಕೊಂಡಿದ್ದಾರೆ. ಹುಬ್ಬೇರಿಸುವಂತಹ ಪೋಸ್ಟರ್ ಜೊತೆಗೆ ಸಾಂಗ್ ರಿಲೀಸ್ ಡೇಟ್ ಬಹಿರಂಗಪಡಿಸಿದ್ದು, ಅಭಿಮಾನಿಗಳ ಉತ್ಸಾಹ ದುಪ್ಪಟ್ಟಾಗಿದೆ.
ಈ ಹಿಂದೆ, 'ಫಿಯರ್' ಸಾಂಗ್ ಎಂಬ ಚಿತ್ರದ ಮೊದಲ ಹಾಡ ಬಿಡುಗಡೆಯಾಗಿತ್ತು. ಸಾಂಗ್ ರಿಲೀಸ್ ಸಂದರ್ಭ, ನಿರ್ಮಾಪಕ ನಾಗ ವಂಶಿ ಈ ಹಾಡು ಅನಿರುದ್ಧ್ ಸಂಯೋಜಿಸಿದ್ದ ಜೈಲರ್ ಚಿತ್ರದ ಜನಪ್ರಿಯ ಹುಕುಮ್ ಹಾಡು ಸಂಪಾದಿಸಿರುವ ಜನಪ್ರಿಯತೆಯನ್ನು ಮೀರಿಸುತ್ತದೆ ಎಂದು ಹೇಳುವ ಮೂಲಕ ಸಿನಿಪ್ರಿಯರ ಆಸಕ್ತಿಯನ್ನು ಕೆರಳಿಸಿದ್ದರು. ನಂತರ, ಫಿಯರ್ ಸಾಂಗ್ ದೊಡ್ಡ ಮಟ್ಟದಲ್ಲಿ ಹಿಟ್ ಆಗಿ ವಂಶಿ ಅವರ ಹೇಳಿಕೆ ನಿಜವೆಂದು ಸಾಬೀತುಪಡಿಸಿತು.
ಇದನ್ನೂ ಓದಿ: ಯುವ ರಾಜ್ಕುಮಾರ್ ಮುಂದಿನ ಸಿನಿಮಾ ನೋಡಲು ದೊಡ್ಮನೆ ಅಭಿಮಾನಿಗಳು ಕಾತರ - Yuva Rajkumar
ಸದ್ಯ ದೇವರ ಚಿತ್ರದ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದೆ. ಕೆಲವೇ ಕೆಲ ಹಾಡುಗಳ ಚಿತ್ರೀಕರಣ ಮಾತ್ರ ಬಾಕಿ ಇದೆ. ದೇವರ ಭಾಗ 1ರಲ್ಲಿ ಜಾಹ್ನವಿ ಕಪೂರ್ ಮಹಿಳಾ ನಾಯಕಿಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಬಾಲಿವುಡ್ ನಟಿಗಿದು ಚೊಚ್ಚಲ ಟಾಲಿವುಡ್ ಚಿತ್ರ. ಅಲ್ಲದೇ ಇದೇ ಮೊದಲ ಬಾರಿಗೆ ಆರ್ಆರ್ಅರ್ ಖ್ಯಾತಿಯ ಜೂನಿಯರ್ ಎನ್‌ಟಿಆರ್ ಜೊತೆ ತೆರೆಹಂಚಿಕೊಂಡಿದ್ದಾರೆ. ಇನ್ನೂ ಬಾಲಿವುಡ್ ಸ್ಟಾರ್ ಹಿರೋ ಸೈಫ್ ಅಲಿ ಖಾನ್ ಈ ಚಿತ್ರದಲ್ಲಿ ವಿಲನ್ ರೋಲ್ ನಿಭಾಯಿಸಿದ್ದಾರೆ. ಸಿನಿಮಾ ಸೆಪ್ಟೆಂಬರ್ ಕೊನೆಗೆ ತೆರೆಕಾಣಲಿದ್ದು, ಅಭಿಮಾನಿಗಳು ದೊಡ್ಡ ಮಟ್ಟದ ನಿರೀಕ್ಷೆಗಳನ್ನಿಟ್ಟುಕೊಂಡಿದ್ದಾರೆ.