'ಇಬ್ಬನಿ ತಬ್ಬಿದ ಇಳೆಯಲಿ', ಹಾಡುಗಳಿಂದಲೇ ಚಂದನವನದಲ್ಲಿ ಗಮನ ಸೆಳೆದಿರೋ ಚಿತ್ರ. ವಿಹಾನ್, ಅಂಕಿತಾ ಅಮರ್ ಮತ್ತು ಮಯೂರಿ ನಟರಾಜ್ ಅಭಿನಯಿಸಿರುವ ಸುಂದರ ದೃಶ್ಯ ಕಾವ್ಯದ ಟ್ರೇಲರ್ ಇತ್ತೋಚೆಗಷ್ಟೇ ಬಿಡುಗಡೆಯಾಗಿ ಸಖತ್ ಸದ್ದು ಮಾಡುತ್ತಿದೆ. ಕನ್ನಡದ ಬಹುನಿರೀಕ್ಷಿತ ಚಿತ್ರದ ಟ್ರೇಲರ್ಗೆ ಮೆಚ್ಚುಗೆ ಹರಿದು ಬರುತ್ತಿದೆ. ಟ್ರೇಲರ್ ಹಾಗೂ ಹಾಡುಗಳನ್ನು ಮೆಚ್ಚಿಕೊಂಡಿರುವ ಪ್ರೇಕ್ಷಕರು ಚಿತ್ರಮಂದಿರಗಳಿಗೂ ಬಂದು ತಮ್ಮ ಸಿನಿಮಾ ವೀಕ್ಷಿಸಿ ಪ್ರೋತ್ಸಾಹಿಸುತ್ತಾರೆ ಎಂಬ ಭರವಸೆ ಚಿತ್ರತಂಡಕ್ಕಿದೆ. ಟ್ರೇಲರ್ ಬಿಡುಗಡೆಗೂ ಮುನ್ನ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರನ್ನು ಸ್ಮರಿಸಿದ್ದು ಗಮನ ಸೆಳೆಯಿತು.
![Ibbani Tabbida Ileyali film team](https://etvbharatimages.akamaized.net/etvbharat/prod-images/24-08-2024/kn-bng-06-vihan-ankithage-award-baruthie-rakshith-shetty-bhavishyya-7204735_23082024195159_2308f_1724422919_739.jpg)
ನಿರ್ಮಾಪಕ ರಕ್ಷಿತ್ ಶೆಟ್ಟಿ ಮಾತನಾಡಿ, ''ನಿರ್ದೇಶಕ ಚಂದ್ರಜಿತ್ ಅವರು 9 ವರ್ಷಗಳ ಹಿಂದೆ ಬ್ಲಾಗ್ನಲ್ಲಿ ಮೆಸೇಜ್ ಮಾಡಿದ್ದರು. ಅವರ ಲಿಂಕ್ ಒಪನ್ ಮಾಡಿದೆ. ಬರವಣಿಗೆ ವಿಶೇಷ ಎನಿಸಿತು. ನಂತರ ಚಂದ್ರಜಿತ್ ಅವರು ಭೇಟಿಯಾದರು. ಅವರು ಬರೆದ ಕಥೆ ಸಿನಿಮಾವಾಗಿ ರೂಪಾಂತರವಾಯಿತು. ಕನ್ನಡದಲ್ಲಿ ಈ ಕಥೆಯನ್ನು ಹೋಲುವ ಚಿತ್ರಗಳು ಬಂದಿರಬಹುದು. ಆದರೆ ಈ ರೀತಿಯ ನಿರೂಪಣೆ ಇರುವ ಸಿನಿಮಾ ಬಂದಿಲ್ಲ. ನಾನು ಈಗಾಗಲೇ ಮೂರು ಬಾರಿ ಈ ಚಿತ್ರ ವೀಕ್ಷಿಸಿದ್ದೇನೆ. ಟ್ರೇಲರ್ ಹಾಗೂ ಸಿನಿಮಾ ಎರಡೂ ಬಹಳ ಇಷ್ಟವಾಗಿದೆ. ವಿಹಾನ್ ಹಾಗೂ ಅಂಕಿತಾ ಇಬ್ಬರದ್ದೂ ಕೂಡಾ ಪ್ರಶಸ್ತಿ ಬರುವಂತಹ ಅಭಿನಯ. ಮುಯೂರಿ ಕೆಲವೇ ಸನ್ನಿವೇಶದಲ್ಲಿ ಕಾಣಿಸಿಕೊಂಡರೂ ಎಲ್ಲರ ಗಮನ ಸೆಳೆಯಲಿದ್ದಾರೆ'' ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಬಳಿಕ ನಿರ್ದೇಶಕ ಚಂದ್ರಜಿತ್ ಬೆಳ್ಳಿಯಪ್ಪ ಮಾತನಾಡಿ, ನಾನು ಯಾವುದಕ್ಕೂ ಬೇಗ ಕಾಂಪ್ರಮೈಸ್ ಆಗುವುದಿಲ್ಲ. ಆದರೆ ನನ್ನ ತಂಡ ಟ್ರೇಲರ್ ಅನ್ನು ಎರಡೇ ದಿನಗಳಲ್ಲಿ ಸಿದ್ಧ ಮಾಡಿತು. ನನಗೂ ಟ್ರೇಲರ್ ನೋಡಿ ಖುಷಿಯಾಯಿತು. ನಿರ್ಮಾಪಕ ರಕ್ಷಿತ್ ಶೆಟ್ಟಿ ಸೇರಿದಂತೆ ಇಡೀ ತಂಡದ ಸಹಕಾರದಿಂದ ಚಿತ್ರ ಕೂಡಾ ಚೆನ್ನಾಗಿ ಮೂಡಿ ಬಂದಿದೆ. ವಿಹಾನ್, ಅಂಕಿತಾ ಅಮರ್ ಹಾಗೂ ಮಯೂರಿ ಅವರ ಜೊತೆಗೆ ಈ ಚಿತದಲ್ಲಿ ಗೀತಾಂಜಲಿ ಚಿತ್ರದ ಖ್ಯಾತಿಯ ಗಿರಿಜಾ ಶೆಟ್ಟರ್ ಅಭಿನಯಿಸಿದ್ದಾರೆ. 20 ವರ್ಷಗಳ ನಂತರ ಅವರು ಮತ್ತೆ ನಮ್ಮ ಚಿತ್ರದಲ್ಲಿ ನಟಿಸಿದ್ದು, ಬಹಳ ಖುಷಿಯಾಗಿದೆ ಎಂದು ತಿಳಿಸಿದರು.
![Ibbani Tabbida Ileyali film team](https://etvbharatimages.akamaized.net/etvbharat/prod-images/24-08-2024/22283530_sdgjfv.jpg)
ನಟ ವಿಹಾನ್ ಮಾತನಾಡಿ, ''ಹಾಡುಗಳು ಎಲ್ಲರಿಗೂ ಇಷ್ಟವಾಗಿದೆ. ಸಿನಿಮಾ ಕೂಡಾ ಇಷ್ಟವಾಗಲಿದೆ. ಸಿನಿಮಾ ವೀಕ್ಷಿಸಿದವರು ಇನ್ನಷ್ಟು ಜನರನ್ನು ಚಿತ್ರಮಂದಿರಕ್ಕೆ ಕರೆತರುತ್ತಾರೆ ಎಂಬ ಭರವಸೆ ಇದೆ. ನಿರ್ದೇಶಕರು ಹೇಳಿದ ಕಥೆ ಆಸಕ್ತಿಕರವಾಗಿತ್ತು. ಪ್ರತಿಭೆ ನೋಡಿ ಆಯ್ಕೆ ಮಾಡಿಕೊಳ್ಳುವಲ್ಲಿ ರಕ್ಷಿತ್ ಶೆಟ್ಟಿ ಕೂಡಾ ಒಬ್ಬರು. ಸಿನಿಮಾಗೆ ಆಯ್ಕೆಯಾದ ಮೇಲೆ ಅವರಿಗೆ ಮೆಸೇಜ್ ಮಾಡಿ ಧನ್ಯವಾದ ತಿಳಿಸಿದ್ದೆ'' ಎಂದರು.
ನಟಿ ಅಂಕಿತಾ ಅಮರ್ ಮಾತನಾಡಿ , ಪ್ರತಿಯೊಬ್ಬರಿಗೂ ಸಾಕಷ್ಟು ಕನಸುಗಳಿವೆ. ಕನಸು, ಹೊಂಬಿಸಲಾಗಿ ಬಂದ ಚಿತ್ರ ಈ ಇಬ್ಬನಿ ತಬ್ಬಿದ ಇಳೆಯಲಿ. ಸಿನಿಮಾ ಒಂದು ರೀತಿ ಮ್ಯಾಜಿಕ್ ಕ್ರಿಯೇಟ್ ಮಾಡಿದೆ. ಚಿತ್ರದಲ್ಲಿ ಸಂದರ್ಭ ಖಳನಾಯಕ. ಸಂದರ್ಭಕ್ಕೆ ಅನುಸಾರವಾಗಿ ಪಾತ್ರಗಳ ಪರಿಚಯ ಮಾಡಿಸಿದ್ದಾರೆ. ಕಲಾವಿದರಿಗೆ ನಿರ್ದೇಶಕ ಎನ್ನುವ ರೋಲ್ ಬಹು ಮುಖ್ಯ. ಪ್ರತಿಯೊಂದು ನಿರ್ದೇಶಕ ಚಂದ್ರಜಿತ್ ಅವರಿಂದ ಆಗಿರುವುದು. ಪ್ರೀತಿಯ ಆಚರಣೆಯನ್ನು ಸಂಗೀತ ಮತ್ತು ವಿಶುವಲ್ ಮೂಲಕ ಕಟ್ಟಿ ಕೊಡಲಾಗಿದೆ. ಈ ಆಚರಣೆಗೆ ಮತ್ತಷ್ಟು ಕಳೆ ಬರಬೇಕಂದ್ರೆ ಚಿತ್ರಮಂದಿರಕ್ಕೆ ಬಂದು ಎಲ್ಲರೂ ಸಿನಿಮಾ ನೋಡಬೇಕು. ಈ ಮೂಲಕ ಹೊಸ ಕಲಾವಿದರು ಹಾಗೂ ತಂತ್ರಜ್ಞರಿಗೆ ಪ್ರೋತ್ಸಾಹ ನೀಡಿ ಎಂದು ಕೇಳಿಕೊಂಡರು.
![Ibbani Tabbida Ileyali film team](https://etvbharatimages.akamaized.net/etvbharat/prod-images/24-08-2024/22283530_sgfry3weu.jpg)
ನಟಿ ಮಯೂರಿ ನಟರಾಜ್ ಮಾತನಾಡಿ, ಟ್ರೇಲರ್ ಬಿಡುಗಡೆಯಾಗಿರುವುದು ಖುಷಿ ಕೊಟ್ಟಿದೆ. ಕಣ್ಣಲ್ಲೇ ಅಭಿನಯಿಸಬೇಕು ಎನ್ನುವುದು ಸವಾಲಾಗಿತ್ತು. ಹೊಸಬರ ಚಿತ್ರವನ್ನು ಈ ಮಟ್ಟದಲ್ಲಿ ತೆರೆಗೆ ತರುವುದು ದೊಡ್ಡ ವಿಷಯ. ಸಿನಿಮಾ ಯಶಸ್ಸು ಕಾಣಲಿ ಎಮದು ತಿಳಿಸಿದರು.
ಕನ್ನಡದ ಚಿತ್ರರಂಗದ ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆ 'ಪರಂವಃ ಸಂಸ್ಥೆ'ಯ ಸಿಇಓ ಶ್ರೀನಿಶ್ ಶೆಟ್ಟಿ ಮಾತನಾಡಿ, ಇಬ್ಬನಿ ತಬ್ಬಿದ ಇಳೆಯಲಿ ಕನ್ನಡದಲ್ಲಿ ಮತ್ತೊಂದು ಬ್ಲಾಕ್ ಬ್ಲಸ್ಟರ್ ಚಿತ್ರವಾಗಲಿದೆ. ಚಿತ್ರ ನೋಡಿದ ತಂಡ ನಿರ್ದೇಶಕ ಚಂದ್ರಜಿತ್ ಅವರನ್ನು ತಬ್ಬಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದ್ದೇವೆ ಎಂದು ತಿಳಿಸಿದರು.
![Ibbani Tabbida Ileyali film team](https://etvbharatimages.akamaized.net/etvbharat/prod-images/24-08-2024/22283530_gsdryfey.jpg)
ಚಾರ್ಲಿ 777 ನಿರ್ದೇಶಕ ಕಿರಣ್ ರಾಜ್ ಮಾತನಾಡಿ, ಟ್ರೇಲರ್ ಚೆನ್ನಾಗಿ ಮೂಡಿಬಂದಿದೆ. ನಿರ್ದೇಶಕ ಚಂದ್ರಜಿತ್ ಹಾಗೂ ನಾನು ಕಿರಿಕ್ ಪಾರ್ಟಿಯಿಂದಲು ಜೊತೆಯಾಗಿ ಕೆಲಸ ಮಾಡಿದ್ದೇವೆ. ಈ ಚಿತ್ರದ ಟ್ರೇಲರ್ ನೋಡಿದ ಮೇಲೆ ಅವರನ್ನು ತಬ್ಬಿಕೊಳ್ಳಬೇಕು ಎನಿಸಿತು. ಗೆಲ್ಲಲು ಎಲ್ಲಾ ಅರ್ಹತೆಗಳಿರುವ ಸಿನಿಮಾವಿದು. ಚಿತ್ರದಲ್ಲಿ ನನಗೊಂದು ಪಾತ್ರ ನೀಡಿದ್ದಾರೆಂದು ಕೂಡಾ ತಿಳಿಸಿದರು.
ಪರಂವಃ ಸ್ಟುಡಿಯೋಸ್ ಲಾಂಛನದಲ್ಲಿ ಜಿ.ಎಸ್ ಗುಪ್ತಾ ಹಾಗೂ ರಕ್ಷಿತ್ ಶೆಟ್ಟಿ ಅವರು ನಿರ್ಮಿಸಿರುವ ಈ ಚಿತ್ರಕ್ಕೆಗಗನ್ ಬಡೇರಿಯಾ ಸಂಗೀತ ನೀಡಿದ್ದು, ಶ್ರೀವತ್ಸನ್ ಸೆಲ್ವರಾಜನ್ ಅವರ ಛಾಯಾಗ್ರಾಹಣವಿದೆ. ರಕ್ಷಿತ್ ಕಾಪು ಅವರ ಸಂಕಲನ ಈ ಚಿತ್ರಕ್ಕಿದೆ. ಟ್ರೇಲರ್ನಿಂದಲೇ ಸದ್ದು ಮಾಡುತ್ತಿರುವ ಈ ಚಿತ್ರ ಸೆಪ್ಟೆಂಬರ್ 5ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ.