ಸಿನಿಮಾ ಎಂಬ ಗ್ಲ್ಯಾಮರ್ ಪ್ರಪಂಚದಲ್ಲಿ ಬಹಳ ಸಮಯದಿಂದ ಗುರುತಿಸಿಕೊಂಡಿರುವ ನಟ ಹರೀಶ್ ರಾಜ್. ಉತ್ತಮ ನಟನೆಯ ಮೂಲಕ ತಮ್ಮದೇ ಆದ ಅಭಿಮಾನಿ ಬಳಗವನ್ನೂ ಹೊಂದಿದ್ದಾರೆ. ಬಹು ಸಮಯದಿಂದ ಸಿನಿಪ್ರಿಯರನ್ನು ಮನರಂಜಿಸುತ್ತಾ ಬಂದಿರುವ ಹರೀಶ್ ರಾಜ್ ನಟನೆ ಜೊತೆ ನಿರ್ದೇಶನದಲ್ಲೂ ಸೈ ಎನಿಸಿಕೊಂಡವರು. ಸಿನಿಮಾ ಹಾಗೂ ರಿಯಾಲಿಟಿ ಶೋಗಳಲ್ಲೂ ಕಾಣಿಸಿಕೊಂಡಿರುವ ಇವರ ಸಿನಿ ಬದುಕಿಗೆ ಈಗಾಗಲೇ 25 ವರ್ಷಗಳು ಪೂರ್ಣಗೊಂಡಿವೆ.
ಸ್ಯಾಂಡಲ್ವುಡ್ನ ಕಲಾಕಾರ ಎಂದೇ ಹೆಸರು ಸಂಪಾದಿಸಿರುವ ಹರೀಶ್ ರಾಜ್ ನಟಿಸಿ, ನಿರ್ದೇಶಿಸುತ್ತಿರುವ ಹೊಸ ಚಿತ್ರದ ಮುಹೂರ್ತ ನೆರವೇರಿದೆ. ವೆಂಕಟೇಶಾಯ ನಮಃ ಈ ಪ್ರೊಜೆಕ್ಟ್ನ ಶೀರ್ಷಿಕೆ. ಬೆಂಗಳೂರಿನ ಆನಂದ ನಗರದಲ್ಲಿರುವ ವೆಂಕಟೇಶ್ವರ ದೇವಸ್ಥಾನದಲ್ಲಿ ಮುಹೂರ್ತ ನೆರವೇರಿತು. ಚಿತ್ರಕ್ಕೆ ಶ್ರೀ ಲಕ್ಷ್ಮಿ ಜನಾರ್ಧನ ಮೂವೀಸ್ ಬ್ಯಾನರ್ ಅಡಿ ಪಿ.ಜನಾರ್ಧನ ಬಂಡವಾಳ ಹೂಡುತ್ತಿದ್ದಾರೆ.
ಕಿರುತೆರೆ ಮತ್ತು ಹಿರಿತೆರೆಯಲ್ಲಿ ತಮ್ಮದೇ ಆದಂತಹ ಸುದೀರ್ಘ ಅನುಭವ ಹೊಂದಿರುವ ಹರೀಶ್ ರಾಜ್ ನಿರಂತರವಾಗಿ ನಟನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಲೇ ನಿರ್ದೇಶನವನ್ನೂ ಮಾಡುತ್ತಿರುವ ವಿಚಾರ ಎಲ್ಲರಿಗೂ ಗೊತ್ತಿರುವುದೇ. ತಮ್ಮ ನಿರ್ದೇಶನದ ವೆಂಕಟೇಶಾಯ ನಮಃ ಚಿತ್ರ ರೊಮ್ಯಾಂಟಿಕ್ ಕಾಮಿಡಿ ಅಂಶ ಹೊಂದಿದ್ದು, ಇದರಲ್ಲಿ ಪ್ರೀತಿ ಪ್ರೇಮದ ಜೊತೆಗೆ ಕೌಟುಂಬಿಕ ಅಂಶವೂ ಇರುತ್ತದೆ ಎಂಬುದು ಹರೀಶ್ ರಾಜ್ ಮಾತು.
ಇದನ್ನೂ ಓದಿ: 'ನಾನು ಯಾವಾಗಲು ಅಭಿಮಾನಿಗಳ ಪ್ರೀತಿಯ ಬುಲ್ ಬುಲ್': ಸೆಟ್ಟೇರಿತು ಅಯೋಗ್ಯ-2, ಅಶ್ವಿನಿ ಪುನೀತ್ರಾಜ್ಕುಮಾರ್ ಸಾಥ್
ಸುಮಾರು 45 ದಿನಗಳ ಒಂದೇ ಶೆಡ್ಯೂಲ್ನಲ್ಲಿ ಬಹುತೇಕ ಚಿತ್ರೀಕರಣವನ್ನು ಮುಗಿಸುವ ಯೋಜನೆಯನ್ನು ಚಿತ್ರತಂಡ ಹಾಕಿಕೊಂಡಿದೆ. ಚಿತ್ರದಲ್ಲಿ ಉಮಾಶ್ರೀ, ತಬಲಾ ನಾಣಿ ಅವರಂತಹ ಹಿರಿಯ ಕಲಾವಿದರ ಜೊತೆಗೆ ಬಹಳಷ್ಟು ಹೊಸ ಕಲಾವಿದರು ಕಾಣಿಸಿಕೊಳ್ಳಲಿದ್ದಾರೆ. ಹಾಡುಗಳಿಗೆ ಭರ್ಜರಿ ಚೇತನ್, ಪ್ರಮೋದ್ ಮರವಂತೆ ಸಾಹಿತ್ಯ ಒದಗಿಸುತ್ತಿದ್ದು, ಶ್ರೀನಿವಾಸ್ ಮೂರ್ತಿ ಸಂಗೀತ ನೀಡಲಿದ್ದಾರೆ. ಶಿವಶಂಕರ್ ಅವರ ಕ್ಯಾಮರಾ ಕೈಚಳಕವಿರಲಿದೆ. ಸಂತೋಷ್ ಸಿ.ಎಂ. ಸಹ ನಿರ್ದೇಶಕರಾಗಿ ಚಿತ್ರತಂಡದ ಭಾಗವಾಗಿದ್ದಾರೆ. ಜೀವನ್ ಪ್ರಕಾಶ್ ಸಂಕಲನ ನೋಡಿಕೊಂಡ್ರೆ, ವಸ್ತ್ರಾಲಂಕಾರದ ಜವಾಬ್ದಾರಿಯನ್ನು ಶ್ರೀನಿವಾಸ್ ನೀಡಲಿದ್ದಾರೆ. ಚಿತ್ರದ ಮತ್ತಷ್ಟು ಅಪ್ಡೇಟ್ಸ್ ಅನ್ನು ಹರೀಶ್ ರಾಜ್ ಶೀಘ್ರದಲ್ಲೇ ಒದಗಿಸಲಿದ್ದಾರೆ.
ಇದನ್ನೂ ಓದಿ: 15 ವರ್ಷಗಳ ಪ್ರೀತಿಗೆ ಮದುವೆಯ ಮುದ್ರೆ: ಶಾಸ್ತ್ರೋಕ್ತವಾಗಿ ಹಸೆಮಣೆ ಏರಿದ ನಟಿ ಕೀರ್ತಿ ಸುರೇಶ್
ಕಲಾಕಾರ್, ಗನ್, ಶ್ರೀ ಸತ್ಯನಾರಾಯಣ, ಕಿಲಾಡಿ ಪೊಲೀಸ್, ಪ್ರೇತ ಸೇರಿದಂತೆ ಕೆಲ ಸಿನಿಮಾಗಳನ್ನು ನಿರ್ದೇಶಿಸಿರುವ ಹರೀಶ್ ರಾಜ್ ಅವರೀಗ ಮತ್ತೊಮ್ಮೆ ಡೈರೆಕ್ಟರ್ ಕ್ಯಾಪ್ ಧರಿಸಿದ್ದಾರೆ.