ಬಾಲಿವುಡ್ ತಾರಾ ಜೋಡಿ ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ ಬಚ್ಚನ್ ವಿಚ್ಛೇದನ ಪಡೆಯಲಿದ್ದಾರೆಂಬ ವದಂತಿ ಸಾಕಷ್ಟು ದಿನಗಳಿಂದ ಹರಿದಾಡುತ್ತಲೇ ಇದೆ. ಸದ್ಯಕ್ಕಿದು ಊಹೆಯಷ್ಟೇ. ಅಭಿಷೇಕ್ ತಮ್ಮ ಕುಟುಂಬದೊಂದಿಗೆ ಅಂಬಾನಿಯವರ ಅದ್ಧೂರಿ ವಿವಾಹ ಸಮಾರಂಭದಲ್ಲಿ ಭಾಗವಹಿಸಿದ್ದ ಸಂದರ್ಭ ಈ ರೂಮರ್ ಉಲ್ಬಣಗೊಂಡಿತ್ತು. ಐಶ್ವರ್ಯಾ ರೈ ಬಚ್ಚನ್ ಮಗಳು ಆರಾಧ್ಯ ಜೊತೆ ಪ್ರತ್ಯೇಕವಾಗಿ ಎಂಟ್ರಿಕೊಟ್ಟಿದ್ದರು. ಒಳಗೆ ದಂಪತಿ ಮಗಳೊಂದಿಗೆ ಒಟ್ಟಿಗೆ ಕಾಣಿಸಿಕೊಂಡರೂ ಕೂಡ ವದಂತಿ ನಿಲ್ಲಲಿಲ್ಲ. ನಂತರ ಬಂದ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿತ್ತು.
ವೈರಲ್ ವಿಡಿಯೋದಲ್ಲಿ, ಅಭಿಷೇಕ್ ಐಶ್ವರ್ಯಾರಿಂದ ವಿಚ್ಛೇದನ ಪಡೆಯುತ್ತಿದ್ದಾರೆ ಎಂಬುದಾಗಿ ಘೋಷಿಸಿದಂತಿತ್ತು. ಈ ಸ್ಟೇಟ್ಮೆಂಟ್ ಡಿವೋರ್ಸ್ ರೂಮರ್ಸ್ಗೆ ತುಪ್ಪ ಸುರಿದಂತಿತ್ತು. ಶರವೇಗದಲ್ಲಿ ವೈರಲ್ ಆದ ವಿಡಿಯೋ, ಅಭಿಮಾನಿಗಳನ್ನು ಗೊಂದಲಕ್ಕೆ ಸಿಲುಕಿಸಿತ್ತು. ಆದ್ರೆ ಅದು ಫೇಕ್ ವಿಡಿಯೋ. ಎ ಐ ಬಳಸಿ ಮಾಡಿರುವ ನಕಲಿ ವಿಡಿಯೋವಾಗಿದೆ.
ಹೌದು, ಎಐ ತಂತ್ರಜ್ಞಾನ ಬಳಸಿಕೊಂಡು ಮಾಡಲಾಗಿರೋ ಡೀಪ್‌ಫೇಕ್ ವಿಡಿಯೋದಲ್ಲಿ ಅಭಿಷೇಕ್, "ಈ ಜುಲೈನಲ್ಲಿ, ಐಶ್ವರ್ಯಾ ಮತ್ತು ನಾನು ವಿಚ್ಛೇದನ ಪಡೆಯಲು ನಿರ್ಧರಿಸಿದ್ದೇವೆ" ಎಂದು ಹೇಳುವಮತೆ ಚಿತ್ರಿಸಲಾಗಿತ್ತು. ಕಳಪೆ ಲಿಪ್ ಸಿಂಕ್ ಮತ್ತು ವಿಡಿಯೋ ಪ್ರೆಸೆಂಟ್ ಆದ ರೀತಿಯನ್ನು ನೋಡಿದ್ರೆ ಅದು ನಕಲಿ ದೃಶ್ಯ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ.
ಇದನ್ನೂ ಓದಿ: ಸ್ಟೈಲಿಶ್ ಲುಕ್ನಲ್ಲಿ ಕಾಣಿಸಿಕೊಂಡ ಸೂಪರ್ ಸ್ಟಾರ್ ಮಹೇಶ್ ಬಾಬು: ಅಭಿಮಾನಿಗಳ ಮನ ಗೆದ್ದ ಹೊಸ ಲುಕ್ - Mahesh Babu
ಐಶ್ವರ್ಯಾ ಅವರ ಅಭಿಮಾನಿಯೊಬ್ಬರು ಈ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಆದ್ರೆ ಸತ್ಯಾಸತ್ಯತೆ ಬಗ್ಗೆ ಡಿಸ್ಕ್ಲೈಮರ್ ಸೇರಿಸಿದ್ದಾರೆ. ಈಟಿವಿ ಭಾರತ ಮೂಲ ವಿಡಿಯೋವನ್ನು ಪತ್ತೆ ಹಚ್ಚಿದೆ. ಒರಿಜಿನಲ್ ವಿಡಿಯೋ ಅಭಿಷೇಕ್ ಬಚ್ಚನ್ ಅವರ ಇನ್‌ಸ್ಟಾಗ್ರಾಮ್ ಪೇಜ್ನಲ್ಲಿ ಲಭ್ಯವಿದೆ. 2022ರ ನವೆಂಬರ್ 7ರಂದು ಶೇರ್ ಮಾಡಲಾಗಿರುವ ವಿಡಿಯೋ ಬಳಸಿ ನಕಲಿ ದೃಶ್ಯ ತಯಾರಿಸಲಾಗಿದೆ. ಇದು 'ನನ್ಹಿ ಕಲಿ'ಯ ಭಾಗವಾಗಿದ್ದು, ಇದು ಭಾರತದಲ್ಲಿ ಹಿಂದುಳಿದ ಹುಡುಗಿಯರಿಗೆ ಶಿಕ್ಷಣ ಮತ್ತು ಘನತೆಯನ್ನು ಖಾತ್ರಿಪಡಿಸುವ ಗುರಿಯನ್ನು ಹೊಂದಿದೆ. ಮನ್ಮರ್ಜಿಯಾನ್‌ನ ಸಹನಟಿ ತಾಪ್ಸಿ ಪನ್ನು ಕೂಡ ಈ ಇನಿಶಿಯೇಟಿವ್ ಅನ್ನು ಬೆಂಬಲಿಸಿದ್ದಾರೆ. ಇನ್ನು ಸುಳ್ಳು ವಿಚ್ಛೇದನದ ವದಂತಿಗಳನ್ನು ಉತ್ತೇಜಿಸಲು ಇಂತಹ ವಿಡಿಯೋಗಳನ್ನು ಹೇಗೆ ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ ನೋಡಿ ಎಂದು ಸಾಮಾಜಿಕ ಮಾಧ್ಯಮದಲ್ಲಿ ಅನೇಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಸ್ಟಾರ್ ನಟರ ಸಿನಿಮಾಗಳಿಲ್ಲದೇ ಕಾರ್ಮಿಕರು ಸಂಕಷ್ಟದಲ್ಲಿ: ಚಿತ್ರಮಂದಿರದವರು ಹೇಳಿದ್ದಿಷ್ಟು - Theaters condition
ಇತ್ತೀಚೆಗೆ, ಅಭಿಷೇಕ್ ಹಾಗೂ ಐಶ್ವರ್ಯಾ ಅಂಬಾನಿ ಕುಟುಂಬದ ಅದ್ಧೂರಿ ವಿವಾಹ ಕಾರ್ಯಕ್ರಮಕ್ಕೆ ಪ್ರತ್ಯೇಕವಾಗಿ ಆಗಮಿಸಿದ್ದರು. ಇದು ಬಿರುಕು ವದಂತಿಗಳನ್ನು ಮತ್ತಷ್ಟು ಹೆಚ್ಚಿಸಿತು. ವಿಚ್ಛೇದನದ ಕುರಿತ ಪೋಸ್ಟ್‌ಗೆ ಅಭಿಷೇಕ್ ಲೈಕ್ ಮಾಡಿದ್ದು, ಊಹಾಪೋಹಗಳು ಉಲ್ಬಣಗೊಳ್ಳಲು ಮತ್ತೊಂದು ಕಾರಣವಾಯಿತು. ಆದ್ರೆ, ನಟನ ಈ ನಡೆ ಐಶ್ವರ್ಯಾ ರೈ ಬಚ್ಚನ್ ಅವರ ಆಪ್ತರಾದ ವೈದ್ಯರಿಗೆ ಕೊಟ್ಟ ಮೆಚ್ಚುಗೆಯಾಗಿದೆ ಎಂದು ನಂತರ ಸ್ಪಷ್ಟಪಡಿಸಲಾಯಿತು.