ಸಿನಿಮಾವನ್ನೇ ಉಸಿರಾಗಿಸಿಕೊಂಡು ದುಡಿಮೆಯಿಂದ ಬಂದದ್ದನ್ನೆಲ್ಲಾ ಚಿತ್ರ ನಿರ್ಮಾಣಕ್ಕೆ ಖರ್ಚು ಮಾಡುತ್ತಿದ್ದ ಅಪ್ಪಟ ಸಿನಿಮಾ ಪ್ರೇಮಿ ದ್ವಾರಕೀಶ್. ಜೀವನದಲ್ಲಿ ಸಾಕಷ್ಟು ಗೆಲುವು ಸೋಲುಗಳನ್ನು ಎದುರಿಸಿದರೂ ಕೇವಲ 25 ವಯಸ್ಸಿಗೆ ಅತೀ ಕಿರಿಯ ನಿರ್ಮಾಪಕ ಅಂತಾ ಕರೆಯಿಸಿಕೊಂಡ ಮೊಟ್ಟ ಮೊದಲ ನಿರ್ಮಾಪಕ ಅಂದರೆ ಅದು ದ್ವಾರಕೀಶ್.

ಹೌದು "ಮೇಯರ್ ಮುತ್ತಣ್ಣ" ಚಿತ್ರದ ಮೂಲಕ, ನಿರ್ಮಾಪಕನ ಸ್ಥಾನವನ್ನು ಅಲಂಕರಿಸಿದ ದ್ವಾರಕೀಶ್ "ಮಮತೆಯ ಬಂಧನ" ಚಿತ್ರವನ್ನು ನಿರ್ಮಾಣ ಮಾಡಿದರು. ಮಮತೆಯ ಬಂಧನ ಜಯಂತಿ ಅಭಿನಯಿಸಿದ್ದ ಎರಡನೇ ಸಿನಿಮಾ ಆಗಿತ್ತು. ಮೇಯರ್ ಮುತ್ತಣ್ಣ ಚಿತ್ರದ ಮೂಲಕ ದ್ವಾರಕೀಶ್ ಸ್ವತಂತ್ರ ನಿರ್ಮಾಪಕರಾಗುತ್ತಾರೆ. ಅಂದು ಡಾ.ರಾಜ್ ಕುಮಾರ್ ಕಾಲ್ ಶೀಟ್ ಪಡೆಯಲು ದ್ವಾರಕೀಶ್ ಹರಸಾಹಸವನ್ನೇ ಮಾಡಿದ್ದರು. ಅದಾಗಲೇ ಡಾ.ರಾಜ್ ಕುಮಾರ್ ಅವರ ಜೊತೆ ತೆರೆ ಹಂಚಿಕೊಂಡಿದ್ದ ದ್ವಾರಕೀಶ್, ಡಾ.ರಾಜ್ ಕುಮಾರ್ ಎಲ್ಲಿಯೇ ಹೋದರು ಅವರ ಹಿಂದೆಯೇ ಹೋಗಲು ಶುರು ಮಾಡಿದರು. ಅವರು ಕುಂತರೂ, ನಿಂತರೂ ನನ್ನ ನಿರ್ಮಾಣದ ಚಿತ್ರಕ್ಕೆ ನೀವೇ ಹೀರೋ, ಕಾಲ್ ಶೀಟ್ ಕೊಡಿ ಎಂದು ದುಂಬಾಲು ಬಿದ್ದರು. ಕೇವಲ ಅಣ್ಣಾವ್ರನ್ನಷ್ಟೇ ಅಲ್ಲ ಡಾ.ರಾಜ್ ನೆರಳಾಗಿದ್ದ ವರದಪ್ಪನವರನ್ನೂ ದ್ವಾರಕೀಶ್ ಬೆನ್ನು ಹತ್ತಿದ್ದರು.

ಇದೇ ಸಮಯದಲ್ಲಿ ಕನ್ನಡದ ಸಾರ್ವಕಾಲಿಕ ಶ್ರೇಷ್ಠ ನಿರ್ದೇಶಕರಲ್ಲಿ ಒಬ್ಬರಾದ ಸಿದ್ದಲಿಂಗಯ್ಯ, ಆ ಕಾಲದ ಖ್ಯಾತ ನಿರ್ಮಾಪಕ ವಿಠ್ಠಲಾಚಾರ್ಯ ಅವರ ಕಂಪನಿಯಲ್ಲಿ ಅಸೊಸಿಯೇಟ್ ಡೈರೆಕ್ಟರ್ ಆಗಿ ಕೆಲಸವನ್ನು ಮಾಡುತ್ತಿದ್ದರು. ಡಾ.ರಾಜ್ ಅವರ ಅನೇಕ ಚಿತ್ರಗಳನ್ನು ಇವರು ನಿರ್ಮಾಣವನ್ನೂ ಮಾಡುತ್ತಿದ್ದರು. ಈ ಕಾರಣಕ್ಕೆ ಸಿದ್ಧಲಿಂಗಯ್ಯ ಹಾಗೂ ವರದಪ್ಪ ಅವರ ನಡುವೆ ಸ್ನೇಹ ಚಿಗುರೊಡೆದಿತ್ತು. ಇದನ್ನೇ ಬಳಸಿಕೊಂಡ ದ್ವಾರಕೀಶ್ ಲಗ್ನ ಪತ್ರಿಕೆ ಚಿತ್ರದ ಚಿತ್ರೀಕರಣ ಮೈಸೂರಿನಲ್ಲಿ ನಡೆಯುತ್ತಿದ್ದ ಸಮಯದಲ್ಲಿ ಸಿದ್ದಲಿಂಗಯ್ಯ ಅವರನ್ನು ಭೇಟಿಯಾದರು. ಸಿದ್ದಲಿಂಗಣ್ಣ ನೀನೇ ನನ್ನ ಮುಂದಿನ ಚಿತ್ರದ ನಿರ್ದೇಶಕ ಎಂದು ಕೂಡಲೇ ಒಂದು ರೂಪಾಯಿಯ ಅಡ್ವಾನ್ಸ್‌ನ್ನೂ ಅವರಿಗೆ ಕೊಟ್ಟಿದ್ದರು ದ್ವಾರಕೀಶ್.

ಆ ನಂತರ ಸೀದಾ ವರದಪ್ಪನವರ ಬಳಿ ತೆರಳಿದ ದ್ವಾರಕೀಶ್, ಸಿದ್ದಲಿಂಗಯ್ಯ ಕೈಯಲ್ಲಿ ಸಿನಿಮಾ ಮಾಡಿಸುತ್ತಿದ್ದೇನೆ ಎಂದು ಹೇಳಿದರು. ರಾಜ್ ಕುಮಾರ್ ಅವರ ಡೇಟ್ ಕೊಡಿಸಿ ಎಂದು ಕೇಳಿದರು. ಆ ಶ್ರೀರಾಮ ಚಂದ್ರನ ದರ್ಶನಕ್ಕೆ ಶಬರಿ ಕಾದಂತೆ ಡಾ.ರಾಜ್ ಕುಮಾರ್ಗಾಗಿ ದ್ವಾರಕೀಶ್ ಒಂದು ವರ್ಷ ಕಾದರು.
ಒಂದು ವರ್ಷದ ನಂತರ ಡಾ.ರಾಜ್ ಸಿನಿಮಾ ಮಾಡಲು ಒಪ್ಪಿದರು. ಆದರೆ ಡಾ.ರಾಜ್ ಹಾಗೂ ವರದಪ್ಪ ಇಬ್ಬರ ಹೃದಯವನ್ನು ಕಥೆ ಹೇಳಿ ಗೆಲ್ಲುವುದು ಆ ಕಾಲಕ್ಕೆ ಸುಲಭವಾಗಿರಲಿಲ್ಲ. ಈ ಕಾರಣಕ್ಕೆ ಬಾಸುಮಣಿ ಎಂಬ ಬರಹಗಾರರನ್ನು ಕರೆದುಕೊಂಡು ದ್ವಾರಕೀಶ್ ಬಂದಾಗ, ಕಣ್ಣಿಗೆ ಕಂಡಿದ್ದು ಒಂದು ಕ್ಯಾಲೆಂಡರ್. ಆ ಕ್ಯಾಲೆಂಡರ್ನಲ್ಲಿ ಹಳ್ಳಿಯ ಯುವಕ ಮೇಯರ್ ಆದ ಫೋಟೋ ಇತ್ತು. ಆ ಭಾವ ಚಿತ್ರವನ್ನೇ ಸ್ಫೂರ್ತಿಯನ್ನಾಗಿ ತೆಗೆದುಕೊಂಡ ದ್ವಾರಕೀಶ್ ನಂತರ ನಿರ್ಮಾಣ ಮಾಡಿದ ಸಿನಿಮಾವೇ "ಮೇಯರ್ ಮುತ್ತಣ್ಣ".
ಇನ್ನೂ ಆ ಕಾಲದಲ್ಲಿ ಡಾ.ರಾಜ್ ಕುಮಾರ್ ಮತ್ತು ಭಾರತಿ ಅವರದ್ದು ಬ್ಲಾಕ್ ಬಸ್ಟರ್ ಜೋಡಿ. ಕರುನಾಡಿನ ಮನೆ, ಮನವನ್ನೂ ಈ ಜೋಡಿ ತಲುಪಿತ್ತು. ಹೀಗಾಗಿ ಭಾರತಿ ಅವರನ್ನೇ ತಮ್ಮ ಚಿತ್ರಕ್ಕೆ ನಾಯಕಿಯನ್ನಾಗಿ ಆಯ್ಕೆ ಮಾಡಿದ ದ್ವಾರಕೀಶ್ ಆ ಕಾಲಕ್ಕೆ ಮೇಯರ್ ಮುತ್ತಣ್ಣ ಚಿತ್ರಕ್ಕೆ ಖರ್ಚು ಮಾಡಿದ್ದು ಒಂದು ಲಕ್ಷದ ಹತ್ತು ಸಾವಿರ ರೂಪಾಯಿಗಳನ್ನಷ್ಟೇ.
ಇಂಥ ಮೇಯರ್ ಮುತ್ತಣ್ಣ ಬಿಡುಗಡೆಗೂ ಮೊದಲೇ ಮಾರಾಟವಾದ ಮೊದಲ ಕನ್ನಡ ಚಿತ್ರ ಅನ್ನುವ ಹೆಗ್ಗಳಿಕೆಗೆ ಪಾತ್ರವಾಯಿತು. ವಿತರಕ ಮುತ್ತುಕೃಷ್ಣ ಅವರಿಗೆ 50 ಸಾವಿರ ಲಾಭದ ಜೊತೆ ದ್ವಾರಕೀಶ್ ಮಾರಿದರು. ಬಹುಶ ದ್ವಾರಕೀಶ್ ಮೊದಲು ಎಡವಿದ್ದು ಇಲ್ಲಿಯೇ. ಯಾಕೆಂದರೆ 50 ಸಾವಿರ ಲಾಭಕ್ಕಷ್ಟೇ ದ್ವಾರಕೀಶ್ ಆ ಚಿತ್ರವನ್ನು ಮಾರದೇ ಇದ್ದಿದ್ದರೆ, ಹಕ್ಕು ತಮ್ಮ ಬಳಿಯೇ ಇಟ್ಟುಕೊಂಡಿದ್ದರೆ ಕಡಿಮೆ ಅಂದರೂ ಹತ್ತು ಲಕ್ಷ ಹಣ ದ್ವಾರಕೀಶ್ ಕೈಯಲ್ಲಿ ಇರುತ್ತಿತ್ತು. ಯಾಕೆಂದರೆ ಮೇಯರ್ ಮುತ್ತಣ್ಣ, ಆ ಕಾಲದ ಬಹುದೊಡ್ಡ ಬ್ಲಾಕ್ ಬಸ್ಟರ್ ಸಿನಿಮಾ.
"ಮೇಯರ್ ಮುತ್ತಣ್ಣ" ಚಿತ್ರಕ್ಕೆ ಕನ್ನಡಿಗರು ಎಷ್ಟರ ಮಟ್ಟಿಗೆ ಮನಸೋತಿದ್ದರು ಅಂದರೆ ತ್ರಿವೇಣಿ ಚಿತ್ರಮಂದಿರದಲ್ಲಿ ತೆರೆಗೆ ಬಂದಾಗ ದ್ವಾರಕೀಶ್ ಅವರನ್ನು ಎತ್ತಿಕೊಂಡು ಮುದ್ದಾಡಿದ್ದರು.
ಇದನ್ನೂ ಓದಿ: ದ್ವಾರಕೀಶ್-ವಿಷ್ಣುವರ್ಧನ್ ಕಾಂಬಿನೇಷನ್‌ನಲ್ಲಿ ತೆರೆಕಂಡ ಸೂಪರ್ ಹಿಟ್ ಚಿತ್ರಗಳಿವು - Dwarakish Super Hit Films