ಕನ್ನಡ ಚಿತ್ರರಂಗದಲ್ಲಿ 'ಕರ್ನಾಟಕದ ಕುಳ್ಳ' ಎಂದು ಕರೆಸಿಕೊಂಡಿದ್ದ ಏಕೈಕ ನಟ ದ್ವಾರಕೀಶ್. 1964ರಲ್ಲಿ 'ವೀರ ಸಂಕಲ್ಪ' ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ದ್ವಾರಕೀಶ್, ನಟರಾಗಿ, ಹಾಸ್ಯ ಕಲಾವಿದರಾಗಿ, ಪೋಷಕ ನಟನಾಗಿ ನೂರಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರು ನಟಿಸಿರುವ ಬಹುತೇಕ ಸಿನಿಮಾಗಳು ವಿಷ್ಣುವರ್ಧನ್ ಜೊತೆಗೇ ಎಂಬುದು ವಿಶೇಷ.
ಒಂದು ಕಾಲದಲ್ಲಿ ವಿಷ್ಣುವರ್ಧನ್ ಹಾಗೂ ದ್ವಾರಕೀಶ್ ಜೋಡಿ 'ಕಳ್ಳ ಕುಳ್ಳ' ಎಂದೇ ಫೇಮಸ್ ಆಗಿತ್ತು. ಇವರಿಬ್ಬರು ಉತ್ತಮ ಸ್ನೇಹಿತರಾಗಿದ್ದು, ಬಹುತೇಕ ಸಿನಿಮಾಗಳಲ್ಲಿ ಜೊತೆಯಾಗಿ ತೆರೆ ಹಂಚಿಕೊಂಡಿದ್ದಾರೆ.
ಕಿಟ್ಟು ಪುಟ್ಟು: 1977ರಲ್ಲಿ ತೆರೆಕಂಡ 'ಕಿಟ್ಟು ಪುಟ್ಟು' ಸಿನಿಮಾದಲ್ಲಿ ವಿಷ್ಣುವರ್ಧನ್ ಕಿಟ್ಟು ಪಾತ್ರದಲ್ಲಿ ಹಾಗೂ ದ್ವಾರಕೀಶ್ ಪುಟ್ಟು ಮತ್ತು ಕುಟ್ಟಿ ಎಂಬ ದ್ವಿಪಾತ್ರದಲ್ಲಿ ನಟಿಸಿದರು. ಮಂಜುಳಾ ನಾಯಕಿಯಾಗಿದ್ದರು. ಸಿನಿಮಾದಲ್ಲಿ ಶ್ರೀಮಂತ ಉದ್ಯಮಿಯ ಮಕ್ಕಳಾದ ಕಿಟ್ಟು ಮತ್ತು ಪುಟ್ಟುವಿಗೆ ಡಿಟೆಕ್ಟಿವ್ ಆಗಬೇಕೆನ್ನುವ ಆಸೆ ಇರುತ್ತದೆ. ಈ ನಡುವೆ ಪುಟ್ಟುವಿನ ಕಿಡ್ನಾಪ್ ಆಗಿ ಎಲ್ಲವೂ ಬದಲಾಗುತ್ತದೆ. ತಮಿಳಿನಿಂದ ರಿಮೇಕ್ ಆಗಿದ್ದ ವಿಷ್ಣುವರ್ಧನ್ ಹಾಗೂ ದ್ವಾರಕೀಶ್ ನಟನೆಯ ಈ ಚಿತ್ರ ಸೂಪರ್ ಹಿಟ್ ಆಗಿತ್ತು.
ಸಿಂಗಾಪುರದಲ್ಲಿ ರಾಜ ಕುಳ್ಳ: 1978ರಲ್ಲಿ ತೆರೆಕಂಡ 'ಸಿಂಗಾಪುರದಲ್ಲಿ ರಾಜ ಕುಳ್ಳ' ವಿದೇಶದಲ್ಲಿ ಚಿತ್ರೀಕರಣಗೊಂಡ ಮೊದಲ ಕನ್ನಡ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ವಿಷ್ಣುವರ್ಧನ್, ದ್ವಾರಕೀಶ್ ಹಾಗೂ ಮಂಜುಳ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದ ಈ ಸಿನಿಮಾ ಸೂಪರ್ ಹಿಟ್ ಆಗಿತ್ತು. ಬೆಳಗಾವಿಯಲ್ಲಿ 200ಕ್ಕೂ ಹೆಚ್ಚು ದಿನಗಳ ಕಾಲ ಓಡಿದ ಮೊದಲ ಸಿನಿಮಾ ಎನಿಸಿಕೊಂಡಿತ್ತು. ಚಿತ್ರದ ಯಶಸ್ಸಿನ ನಂತರ ಇದು ಸ್ವೀಟ್ ಸಿಂಗಪೂರ್ ಎಂಬ ಹೆಸರಿನಲ್ಲಿ ತಮಿಳಿಗೆ ಡಬ್ ಕೂಡ ಆಯಿತು.
ಕಿಲಾಡಿಗಳು: 1994ರಲ್ಲಿ ತೆರೆಕಂಡ 'ಕಿಲಾಡಿಗಳು' ಸಿನಿಮಾವನ್ನು ದ್ವಾರಕೀಶ್ ಅವರೇ ನಿರ್ದೇಶನ ಮಾಡಿದ್ದರು. ಚಿತ್ರದಲ್ಲಿ ವಿಷ್ಣುವರ್ಧನ್ ಹಾಗೂ ದ್ವಾರಕೀಶ್ ಇಬ್ಬರೂ ದ್ವಿಪಾತ್ರದಲ್ಲಿ ನಟಿಸಿದ್ದರು. ಚಿತ್ರದಲ್ಲಿ ಹರಿ (ದ್ವಾರಕೀಶ್) ಮತ್ತು ಕೃಷ್ಣ (ವಿಷ್ಣುವರ್ಧನ್)ನ ಚಿಕ್ಕಪ್ಪ ಅವರ ಬಳಿಯಿರುವ ಸಂಪತ್ತು ದೋಚಲು ತನ್ನ ಕುಟುಂಬದ ವಕೀಲ ಹಾಗೂ ಸ್ನೇಹಿತರ ಸಹಾಯದೊಂದಿಗೆ ಅವರನ್ನು ಕೊಲ್ಲಲು ಸಂಚು ರೂಪಿಸುತ್ತಾನೆ. ದಿವಾನ್ ಹಾಗೂ ವಕೀಲರು ಹರಿ ಮತ್ತು ಕೃಷ್ಣನ ಪ್ರಾಣ ಉಳಿಸಲು ಅವರಿಬ್ಬರ ಸ್ಥಾನದಲ್ಲಿ ಅವರನ್ನೇ ಹೋಲುವ ಕಿಟ್ಟಪ್ಪ ಹಾಗೂ ಪುಟ್ಟಪ್ಪ ಎಂಬವರನ್ನು ಬದಲಿಸುತ್ತಾರೆ. ನಂತರ ಏನಾಗುತ್ತದೆ ಎಂಬುದೇ ಸಿನಿಮಾ ಕಥೆ.
ಕಳ್ಳ ಕುಳ್ಳ: 'ಕಳ್ಳ ಕುಳ್ಳ' ಸಿನಿಮಾದಲ್ಲಿ ದ್ವಾರಕೀಶ್ ಮತ್ತು ವಿಷ್ಣುವರ್ಧನ್ ಸ್ನೇಹವನ್ನು ಸಿನಿರಸಿಕರು ಇಂದಿಗೂ ನೆನಪಿಸಿಕೊಳ್ಳುತ್ತಾರೆ. 1975ರಲ್ಲಿ ಬಿಡುಗಡೆಯಾದ ಈ ಸಿನಿಮಾದ ಕಥೆ ಹಾಗೂ ಹಾಡುಗಳು ಸಿಕ್ಕಾಪಟ್ಟೆ ಹಿಟ್ ಆಗಿತ್ತು. ಸಿನಿಮಾದಲ್ಲಿ ವಿಷ್ಣು ಅವರು ಮಹೇಶ್ ಎಂಬ ಕಳ್ಳನ ಪಾತ್ರದಲ್ಲಿ ಹಾಗೂ ದ್ವಾರಕೀಶ್ ರಮೇಶ್ ಎಂಬ ಕುಳ್ಳನ ಪಾತ್ರದಲ್ಲಿ ಮಿಂಚಿದ್ದರು. ಇದು ಕನ್ನಡದಲ್ಲಿ ಸೂಪರ್ ಹಿಟ್ ಆಗುತ್ತಿದ್ದಂತೆ ಹಿಂದಿಗೆ 'ಚೋರ್ ಕಾ ಭಾಯಿ ಚೋರ್' ಎಂಬ ಹೆಸರಿನಲ್ಲಿ ಡಬ್ ಆಯಿತು. ತೆಲುಗಿಗೂ ರಿಮೇಕ್ ಆಯಿತು.
ಆಪ್ತಮಿತ್ರ: 'ಆಪ್ತಮಿತ್ರ' ಸಿನಿಮಾದಲ್ಲಿ ವಿಷ್ಣುವರ್ಧನ್, ರಮೇಶ್, ಪ್ರೇಮಾ, ಸೌಂದರ್ಯ, ದ್ವಾರಕೀಶ್, ಸತ್ಯಜಿತ್, ಅವಿನಾಶ್, ಶಿವರಾಮ್, ಪ್ರೇಮಿಳಾ ಜೋಶೋಯ್ ಮೊದಲಾದವರ ತಾರಾಗಣವಿತ್ತು. 2004ರಲ್ಲಿ ಬಿಡುಗಡೆಯಾಗಿದ್ದ ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾ ಇದಾಗಿದ್ದು, ಮಲಯಾಳಂನ 'ಮಣಿಚಿತ್ರತ್ತಾಳ್' ರಿಮೇಕ್ ಆಗಿತ್ತು. ಕನ್ನಡದಲ್ಲಿ ಪಿ.ವಾಸು ನಿರ್ದೇಶನ ಮಾಡಿದ್ದರು. ಚಿತ್ರಮಂದಿರಗಳಲ್ಲಿ ಈ ಚಿತ್ರ ಒಂದು ವರ್ಷ ಪ್ರದರ್ಶನ ಕಂಡಿದ್ದು, ಐದು ಫಿಲ್ಮ್ ಫೇರ್ ಪ್ರಶಸ್ತಿಗಳನ್ನು ಪಡೆದಿದೆ.
ಇದನ್ನೂ ಓದಿ: ದ್ವಾರಕೀಶ್-ವಿಷ್ಣುವರ್ಧನ್ ಸ್ನೇಹ ಬಾಂಧವ್ಯ ಹೇಗಿತ್ತು ಗೊತ್ತಾ? ಒಂದು ನಿದರ್ಶನ! - Dwarakish And Vishnuvardhan