ಬೆಂಗಳೂರು: ರಾಜ್ಯದಲ್ಲಿ ಮೊದಲ ಹಂತದ ಚುನಾವಣೆ ಮುಕ್ತಾಯದ ಹಂತ ತಲುಪಿದೆ. ಕನ್ನಡದ ಅನೇಕ ನಟ-ನಟಿಯರು ತಮ್ಮ ಮತಗಟ್ಟೆಗಳಿಗೆ ಆಗಮಿಸಿ ಮತ ಚಲಾಯಿಸಿದ್ದಾರೆ. ನಟ ಧ್ರುವ ಸರ್ಜಾ, ನಟಿ ಹರ್ಷಿಕಾ ಪೂಣಚ್ಚ, ನಟ ರಮೇಶ್ ಅರವಿಂದ್ ಮತದಾನ ಮಾಡುವುದರ ಜೊತೆಗೆ ತಮ್ಮ ಹಕ್ಕು ಚಲಾಯಿಸುವಂತೆ ಅಭಿಮಾನಿಗಳಿಗೆ ಕರೆ ಕೊಟ್ಟಿದ್ದಾರೆ.
ನಟ ಧ್ರುವ ಸರ್ಜಾ ಮಾತನಾಡಿ, ''ನಾನು ಯಾವಾಗಲೂ ಬನಶಂಕರಿಯಲ್ಲಿ ಮತದಾನ ಮಾಡೋದು. ಮತದಾನ ನಮ್ಮೆಲ್ಲರ ಕರ್ತವ್ಯ. ನಮ್ಮ ಬೂತ್ನಲ್ಲಿ ಹೆಚ್ಚು ಮತ ಚಲಾವಣೆ ಆಗಿದೆ. ಫಸ್ಟ್, ಲಾಸ್ಟ್ ಅಂತೇನಿಲ್ಲ. ವೋಟ್ ಮಾಡಬೇಕು. ರಜೆ ತೆಗೆದುಕೊಂಡು ಸುಮ್ಮನೆ ಇರಬಾರದು. ನಾನು ಸಿನಿಮಾದಲ್ಲಿ ಎಂದಿಗೂ ರಾಜಕೀಯದ ಬಗ್ಗೆ ಹೇಳಿಲ್ಲ. ನನ್ನ ಭಾರತದ ಕನಸು ಹೇಳಿದ್ರೆ ವಿವಾದವಾಗುತ್ತದೆ. ಮುಂದೆ ಸಮಯ ಬಂದಾಗ ಹೇಳುತ್ತೇನೆ. ಈಗ ಮತದಾನ ಮಾಡಿ" ಎಂದು ತಿಳಿಸಿದರು.
ರಾಮಮೂರ್ತಿನಗರದ ವಿದ್ಯಾನಿಕೇತನ ಶಾಲೆಯಲ್ಲಿ ನಟಿ ಹರ್ಷಿಕಾ ಪೂಣಚ್ಚ ಮತ ಚಲಾಯಿಸಿದರು. ಬಳಿಕ ಮಾತನಾಡಿದ ಅವರು, "ಎಲ್ಲರೂ ಮತದಾನ ಮಾಡಿ" ಎಂದು ಕೇಳಿಕೊಂಡರು.
ಮತದಾನದ ಬಳಿಕ ಮಾತನಾಡಿದ ನಟ ರಮೇಶ್ ಅರವಿಂದ್, "ಮತದಾನ ನಮ್ಮ ಜವಾಬ್ದಾರಿ. ಒಂದು ವೋಟ್ನಿಂದ ಏನಾಗುತ್ತೆ ಅನ್ನೋ ಪ್ರಶ್ನೆನೇ ಇಲ್ಲ. ಕೆಲ ಸನ್ನಿವೇಶಗಳಲ್ಲಿ ಕೇವಲ 36, 26, 17, 9 ಮತಗಳ ಅಂತರದಿಂದ ಗೆದ್ದ ಉದಾಹರಣೆಗಳಿವೆ. ಒಂದು ಕುಟುಂಬ ವೋಟ್ ಮಾಡಿಲ್ಲ ಅಂದ್ರೆ ಅದೊಂದು ವ್ಯತ್ಯಾಸ ಆಗಬಹುದು. ನಮ್ಮ ಕ್ಷೇತ್ರದಲ್ಲಿ ಹಾಗೇ ಆಗಬಾರದೆಂದರೆ ದಯವಿಟ್ಟು ಮತ ಚಲಾಯಿಸಿ. ಕೆಲವರು ಬಿಸಿಲಿನ ನೆಪ ಹೇಳುತ್ತಿದ್ದಾರೆಂದು ಕೇಳ್ಪಟ್ಟೆ. ನೆಪಗಳನ್ನು ದೂರವಿಡೋಣ. ನಿಮಗೋಸ್ಕರ, ನಿಮ್ಮ ಭವಿಷ್ಯಕ್ಕೋಸ್ಕರ ಮತ ಚಲಾಯಿಸಿ" ಎಂದು ಮನವಿ ಮಾಡಿದರು.
ಇದನ್ನೂ ಓದಿ: ನಟಿಯರಾದ ರಾಧಿಕಾ ಪಂಡಿತ್, ರಚಿತಾ ರಾಮ್ ವೋಟಿಂಗ್: ವಿಡಿಯೋ - Radhika Rachita Voting