ಬಿಗ್ ಬಾಸ್ ಮನೆಗೆ ಹೊರಗಿನವರಿಗೆ ಎಂಟ್ರಿ ಇಲ್ಲ. ಹೊರಗಿನ ವಿಚಾರಗಳು ಸಾಮಾನ್ಯವಾಗಿ ಸ್ಪರ್ಧಿಗಳಿಗೆ ಸಿಗೋದೂ ಇಲ್ಲ. ಆದ್ರೆ ಮನೆಗೆ ಆಗಮಿಸಿದ ಮೂವರು ಅತಿಥಿಗಳ ಪೈಕಿ ಇಬ್ಬರಿಂದ ಎರಡು ವಿಚಾರಗಳ ಬಗ್ಗೆ ಮನೆಮಂದಿಗೆ ಗೊತ್ತಾಗಿದೆ. ಅದರಲ್ಲೊಂದು ಸ್ಪರ್ಧಿಗಳ ದುಃಖಕ್ಕೆ ಕಾರಣವಾಗಿದೆ. ಜೊತೆ ಜೊತೆಗೆ, ಮನಬಿಚ್ಚಿ ಮಾತನಾಡುವ ಕ್ಷಣವೊಂದರಲ್ಲಿ ಸ್ಪರ್ಧಿಗಳು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.
ನಿರೂಪಕ ಕಿಚ್ಚ ಸುದೀಪ್ ಅವರ ಅನುಪಸ್ಥಿತಿಯಲ್ಲಿ ಕಳೆದ ವಾರಾಂತ್ಯ ಖ್ಯಾತ ನಿರ್ದೆಶಕ ಯೋಗರಾಜ್ ಭಟ್ ಮತ್ತು ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ಅತಿಥಿಗಳಾಗಿ ಆಗಮಿಸಿ ಪಂಚಾಯ್ತಿ ಮತ್ತು ಎಲಿಮಿನೇಷನ್ ಪ್ರಕ್ರಿಯೆ ನಡೆಸಿಕೊಟ್ಟರು. ಸೃಜನ್ ಅವರ ಆಗಮನ ಧರ್ಮ ಕೀರ್ತಿರಾಜ್ ಅವರಿಗೆ ಬಹಳ ಖುಷಿ ಕೊಟ್ಟಿತ್ತು. ಏಕೆಂದರೆ ಈ ಇಬ್ಬರೂ ಈಗಾಗಲೇ ಒಟ್ಟಿಗೆ ಕೆಲಸ ಮಾಡಿದ್ದಾರೆ.
ಬಿಗ್ ಬಾಸ್ಗೆ ಎಂಟ್ರಿಯಾಗುತ್ತಿದ್ದಂತೆ ಮಾತಿನ ಮಲ್ಲ ಸೃಜನ್ ಲೋಕೇಶ್ ತಮಗೆ ಯಾರೆಲ್ಲಾ ಪರಿಚಯ ಇದ್ದಾರೆ ಎಂಬುದನ್ನು ಹೇಳಿಕೊಂಡರು. ಧರ್ಮ ಅವರ ಬಳಿ ನಿಮಗೊಂದು ಗುಡ್ ನ್ಯೂಸ್ ಇದೆ. ನವಗ್ರಹ ಸಿನಿಮಾ ರೀ ರಿಲೀಸ್ ಆಗುತ್ತಿದೆ ಎಂದು ತಿಳಿಸಿದರು. ಇದನ್ನು ಕೇಳಿ ಧರ್ಮ ಬಹಳ ಸಂತಸಗೊಂಡರು. ಈ ಮೂಲಕ ಅಪಾರ ಸಂಖ್ಯೆಯ ದಚ್ಚು ಅಭಿಮಾನಿ ಬಳಗ ಮಾತ್ರವಲ್ಲದೇ ಅಭಿನಯ ಚಕ್ರವರ್ತಿ ಸುದೀಪ್ ಅವರು ನಡೆಸಿಕೊಡುವ ಬಿಗ್ ಬಾಸ್ ಮನೆಯೊಳಗೂ ನಟ ದರ್ಶನ್ ಮುಖ್ಯಭೂಮಿಕೆಯ 'ನವಗ್ರಹ' ಚಿತ್ರದ ಮರು ಬಿಡುಗಡೆ ಬಗ್ಗೆ ಚರ್ಚೆ ಆಗಿದೆ.
ನವೆಂಬರ್ 8ಕ್ಕೆ ಮರು ಬಿಡುಗಡೆ ಆಗಲು ಸಜ್ಜಾಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮುಖ್ಯಭೂಮಿಕೆಯ ನವಗ್ರಹ ಸಿನಿಮಾದಲ್ಲಿ ಶರ್ಮಿಳಾ ಮಾಂಡ್ರೆ, ತರುಣ್ ಸುಧೀರ್, ಧರ್ಮ ಕೀರ್ತಿರಾಜ್, ಸೃಜನ್ ಲೋಕೇಶ್ ಸೇರಿದಂತೆ ಹಲವರು ಕಾಣಿಸಿಕೊಂಡಿದ್ದರು. 16 ವರ್ಷಗಳ ಹಿಂದೆ, 2008ರ ನವೆಂಬರ್ 7ರಂದು ಈ ಚಿತ್ರ ಬಿಡುಗಡೆ ಆಗಿತ್ತು.
ಕಳೆದ ವಾರಾಂತ್ಯದ ಎಪಿಸೋಡ್ಗಳನ್ನು ನಡೆಸಿಕೊಡಬೇಕಾದರೆ ಸುದೀಪ್ ಅವರಿಗೆ ಒಂದು ಮುಖ್ಯ ಕರೆ ಬರುತ್ತದೆ. ಅವರ ತಾಯಿ ಐಸಿಯುನಲ್ಲಿರುತ್ತಾರೆ. ಪರಿಸ್ಥಿತಿ ಗಂಭೀರ ಎಂಬ ವಿಷಯ ಅವರನ್ನು ತಲುಪುತ್ತದೆ. ಅದಾಗ್ಯೂ, ತಾವು ಒಪ್ಪಿಕೊಂಡ ಕೆಲಸವನ್ನು ಪೂರ್ಣ ಮಾಡಿಯೇ ಹೊರಡುತ್ತಾರೆ. ನಂತರ ಅವರಿಂದ ಬಿಗ್ ಬಾಸ್ ತಂಡಕ್ಕೆ ತಾಯಿ ಇನ್ನಿಲ್ಲ ಎಂಬ ಸಂದೇಶ ಸಿಗುತ್ತದೆ. ಈ ಎಲ್ಲಾ ವಿಚಾರಗಳನ್ನು ತಿಳಿಸಿದ ನಿರ್ದೇಶಕ ಯೋಗರಾಜ್ ಭಟ್, ಕೆಲಸದ ಮೇಲಿನ ಸುದೀಪ್ ಅವರ ಬದ್ಧತೆಯನ್ನು ಒತ್ತಿ ಹೇಳಿದರು. ನಂತರ ಮನೆ ಮಂದಿ ಸುದೀಪ್ ಅವರನ್ನು ನೆನೆದು ಕಣ್ಣೀರಿಟ್ಟಿದ್ದಾರೆ.
ಇದನ್ನೂ ಓದಿ: ಜಿಮ್ ಟ್ರೇನರ್ಗೆ ಅಮೆರಿಕದಿಂದ ಪುನೀತ್ ತರಿಸಿದ್ದರು ಈ ಸ್ಪೆಷಲ್ ಗಿಫ್ಟ್: ಇಲ್ಲಿದೆ ಎಕ್ಸ್ಕ್ಲ್ಯೂಸಿವ್ ಸಂದರ್ಶನ
'ಕಣ್ಣೀರ ಕಡಲಲ್ಲಿ ಸದಸ್ಯರು; ಪರಸ್ಪರ ನೋವಿನ ಭಾರಕ್ಕೆ ಹೆಗಲಾಗ್ತಾರಾ ಸ್ಪರ್ಧಿಗಳು?' ಎಂಬ ಕ್ಯಾಪ್ಷನ್ನೊಂದಿಗೆ ಬಿಗ್ ಬಾಸ್ ಹೊಸ ಪ್ರೋಮೋ ಒಂದನ್ನು ಅನಾವರಣಗೊಳಿಸಿದ್ದಾರೆ. ಅದರಲ್ಲಿ ಮನೆ ಮಂದಿ ಗಳಗಳನೇ ಕಣ್ಣೀರು ಸುರಿಸಿರೋದನ್ನು ಕಾಣಬಹುದು.
ಇದನ್ನೂ ಓದಿ: ನ.8ಕ್ಕೆ ದರ್ಶನ್ ಮುಖ್ಯಭೂಮಿಕೆಯ 'ನವಗ್ರಹ' ಮರು ಬಿಡುಗಡೆ: ಹಬ್ಬ ಆಚರಿಸಲು ಅಭಿಮಾನಿಗಳು ಸಜ್ಜು
ಪ್ರೋಮೋದಲ್ಲಿ, ಸದಸ್ಯರು ಯಾರ ಬಳಿಯೂ ಹಂಚಿಕೊಳ್ಳದ ಒಂದು ಘಟನೆಯನ್ನು ಹೇಳಿಕೊಳ್ಳಬಹುದು ಎಂದು ಸ್ಪರ್ಧಿಗಳಲ್ಲಿ ಬಿಗ್ ಬಾಸ್ ತಿಳಿಸಿದ್ದಾರೆ. 'ಒಂದು ವರ್ಷ ನಾನು ಯಾರದ್ದೋ ಮನೆಯಲ್ಲಿ ಮುಸುರೆ ತಿಕ್ಕುತ್ತಿದ್ದೆ' ಎಂದು ಹೇಳುತ್ತಾ ಚೈತ್ರಾ ಕುಂದಾಪುರ ಕಣ್ಣೀರು ಸುರಿಸಿದ್ದಾರೆ. ಐಶ್ವರ್ಯಾ ಮಾತನಾಡಿ, ನನ್ನ ಅಮ್ಮ ಹಾಸಿಗೆ ಹಿಡಿದಿದ್ದರು. ಆಗ ಸಂಬಂಧಿಕರು ಅಮ್ಮನ ತಲೆ ತುಂಬುತ್ತಿದ್ದರು. ಅಮ್ಮನ ಮೇಲೆ ತುಂಬಾನೇ ಕಿರುಚಾಡಿದ್ದೆ. ಮಾತನಾಡಿಸಿ ಕೆಲ ದಿನಗಳಾದ ನಂತರ ಅವರು ನನ್ನ ಜೊತೆ ಇರಲ್ಲ ಎಂದು ಹೇಳುತ್ತಾ ಗಳಗಳನೇ ಕಣ್ಣೀರು ಸುರಿಸಿದ್ದಾರೆ. ಹೀಗೆ ಒಬ್ಬೊಬ್ಬರ ನೋವು ಒಂದೊಂದು ರೀತಿ ಎಂಬುದು ಗೊತ್ತಾಗಿದೆ. ಇಡೀ ಮನೆ ಕಣ್ಣೀರಿಟ್ಟಿದೆ.