ಬೆಂಗಳೂರು: ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸೇರಿ 13 ಮಂದಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ದಿನೇ ದಿನೇ ನೆಚ್ಚಿನ ಅಭಿಮಾನಿಗಳು ಠಾಣೆ ಮುಂದೆ ಜನರು ಜಮಾವಣೆ ಆಗುತ್ತಿರುವುದರಿಂದ ಮುಂಜಾಗ್ರತ ಕ್ರಮವಾಗಿ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯ 200 ಮೀಟರ್ವರೆಗೂ ನಿಷೇಧಾಜ್ಞೆ ವಿಧಿಸಲಾಗಿದೆ.
ನಟ ದರ್ಶನ್ ಬಂಧನ ಹಿನ್ನೆಲೆಯಲ್ಲಿ ಪ್ರತಿದಿನ ಠಾಣೆ ಮುಂದೆ ಅಭಿಮಾನಿಗಳು ಜಮಾಯಿಸಿ ಜೈಕಾರ ಕೂಗುತ್ತಿದ್ದಾರೆ. ಬೆಂಗಳೂರು ಸೇರಿ ವಿವಿಧ ಜಿಲ್ಲೆಗಳಿಂದ ಜನರು ದಾಂಗುಡಿ ಇಡುತ್ತಿದ್ದು, ಸ್ಥಳೀಯ ಸಾರ್ವಜನಿಕರಿಗೆ ಓಡಾಡಲು ತೊಂದರೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಕಾನೂನು ಸುವ್ಯವಸ್ಥೆ ಹದಗೆಡದಂತೆ ಮುಂಜಾಗ್ರತ ಕ್ರಮ ಕೈಗೊಂಡಿರುವ ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ಅವರು ಠಾಣೆಯ ಸುತ್ತಮುತ್ತ 200 ಮೀಟರ್ವರೆಗೂ ಜನರು ಗುಂಪುಗೂಡುವುದು, ಪ್ರತಿಭಟನೆ, ಧರಣಿ ಹಾಗೂ ಮೆರವಣಿಗೆ ಮಾಡದಂತೆ ಜೂನ್ 17ರ ತನಕ ಐದು ದಿನಗಳ ಕಾಲ ನಿಷೇಧಾಜ್ಞೆ ವಿಧಿಸಿ ಆದೇಶ ಹೊರಡಿಸಿದ್ದಾರೆ.
ಶವ ಸಾಗಣೆ ಮಾಡಿದ್ದ ಸ್ಕಾರ್ಪಿಯೊ ಕಾರಿನ ಮಾಲೀಕ ಪೊಲೀಸ್ ವಶಕ್ಕೆ: ರೇಣುಕಾಸ್ವಾಮಿ ಕೊಲೆ ಮಾಡಿ ಶವ ಸಾಗಿಸಿದ್ದ ಸ್ಕಾರ್ಪಿಯೋ ಕಾರಿನ ಮಾಲೀಕ ಪುನೀತ್ ಎಂಬಾತನನ್ನು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ವಶಕ್ಕೆ ಪಡೆದುಕೊಂಡು ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ.
ನಟ ದರ್ಶನ್ ಸೋಷಿಯಲ್ ಮೀಡಿಯಾ ಹ್ಯಾಂಡಲ್ ಮಾಡುತ್ತಿದ್ದ ಪುನೀತ್ ಎಂಬಾತನ ಕಾರಿನಲ್ಲಿ, ಆರೋಪಿಗಳು ರೇಣುಕಾಸ್ವಾಮಿ ಶವವನ್ನು ಪಟ್ಟಣಗೆರೆಯ ಶೆಡ್ನಿಂದ ಸಾಗಣೆ ಮಾಡಿಕೊಂಡು ಸುಮ್ಮನಹಳ್ಳಿ ಬ್ರಿಡ್ಜ್ ಬಳಿ ರಾಜಕಾಲುವೆಗೆ ಎಸೆದಿದ್ದರು. ಹತ್ಯೆಯಾಗಿರುವುದು ಪುನೀತ್ಗೆ ಗೊತ್ತಿತ್ತಾ? ಕೃತ್ಯದ ಹಿಂದೆ ಪರೋಕ್ಷವಾಗಿ ಪುನೀತ್ ಕೈವಾಡವಿದೆಯಾ? ರೇಣುಕಾಸ್ವಾಮಿ ಹಲ್ಲೆ ಮಾಡುವಾಗ ಸ್ಥಳದಲ್ಲೇ ಇದ್ದರಾ? ಎಂಬುದು ಸೇರಿದಂತೆ ಪೊಲೀಸರ ಹಲವು ಪ್ರಶ್ನೆಗಳಿಗೆ ಪುನೀತ್ ಉತ್ತರಿಸಬೇಕಿದೆ.
ಠಾಣೆಗೆ ಶಾಮಿಯಾನ: ನಟ ದರ್ಶನ್ ಸೇರಿ ಬಂಧಿತರನ್ನು ವಿಚಾರಣೆಗೊಳಪಡಿಸುವ ವೇಳೆ ಸಾರ್ವಜನಿಕರು ಠಾಣೆ ಬರದಂತೆ, ಹಾಗೂ ಹೊರಗಿನವರಿಗೆ ಕಾಣದಂತೆ ಶಾಮಿಯಾನ ಹಾಕಿ ಗೇಟ್ ಮುಚ್ಚಲಾಗಿದೆ. ಪೊಲೀಸರು ಯಾರನ್ನು ರಕ್ಷಣೆ ಮಾಡಲು ಶಾಮಿಯಾನ ಹಾಕಿದ್ರು ಎಂಬುದಾಗಿ ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ಪ್ರಕರಣದ ಹಿನ್ನೆಲೆ: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಜೂನ್ 9 ಕಾಮಾಕ್ಷಿಪಾಳ್ಯದ ಮೋರಿ ಪಕ್ಕದಲ್ಲಿ ಶವವಾಗಿ ಪತ್ತೆಯಾಗಿದ್ದರು. ಶವವನ್ನು ಗಮನಿಸಿದ್ದ ಅಪಾರ್ಟ್ಮೆಂಟ್ವೊಂದರ ಸೆಕ್ಯೂರಿಟಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದನ್ನಾಧರಿಸಿ ಪ್ರಕರಣ ದಾಖಲಿಸಿಕೊಂಡಿದ್ದ ಕಾಮಾಕ್ಷಿಪಾಳ್ಯ ಠಾಣೆಯ ಪೊಲೀಸರು ತನಿಖೆ ಕೈಗೊಂಡಿದ್ದರು. ಮೃತದೇಹದ ಮೇಲಿದ್ದ ಗಾಯಗಳನ್ನು ಗಮನಿಸಿದ ಪೊಲೀಸರು ಹತ್ಯೆ ಪ್ರಕರಣ ದಾಖಲಿಸಿಕೊಂಡಿದ್ದರು. ಪ್ರಕರಣದ ಆರಂಭದ ತನಿಖೆ ವೇಳೆ ನಾಲ್ವರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಹಣದ ವಿಚಾರವಾಗಿ ಕೊಲೆ ಮಾಡಿರುವುದಾಗಿ ಹೇಳಿದ್ದರು. ನಂತರ ಹೆಚ್ಚಿನ ತನಿಖೆ ಕೈಗೊಂಡಾಗ ಇನ್ನೂ ಕೆಲವು ಮಾಹಿತಿ ಹೊರ ಬಂದಿವೆ. ಈ ಹಿನ್ನೆಲೆಯಲ್ಲಿ ಕನ್ನಡದ ನಟ ದರ್ಶನ್, ನಟಿ ಪವಿತ್ರಾ ಗೌಡ ಸೇರಿ ಮತ್ತು ಇತರೆ 11 ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ನಟ ದರ್ಶನ್, ವಿನಯ್, ಕಿರಣ್, ಮಧು, ಲಕ್ಷ್ಮಣ್, ಆನಂದ್, ರಾಘವೇಂದ್ರ, ದರ್ಶನ್ ಅವರ ಸ್ನೇಹಿತೆ ಪವಿತ್ರಾ ಗೌಡ ಅವರನ್ನೂ ಪೊಲೀಸರು ಬಂಧಿಸಿದ್ದಾರೆ.