ಜೀವಮಾನದ ಸಾಧನೆಗಾಗಿ ಸಂಗೀತ ನಿರ್ದೇಶಕ ಹಂಸಲೇಖ ಹಾಗು ಹಿರಿಯ ನಿರ್ದೇಶಕ ಜೋಸೈಮನ್ ಅವರಿಗೆ "ದಾದಾಸಾಹೇಬ್ ಫಾಲ್ಕೆ ಅಚೀವರ್" ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಬೆಂಗಳೂರಿನ ಡಾ. ರಾಜ್ ಕುಮಾರ್ ಭವನದಲ್ಲಿ ನಿರ್ದೇಶಕ ಆದತ್ ನೇತೃತ್ವದಲ್ಲಿ ಈ ಪ್ರಶಸ್ತಿ ಕಾರ್ಯಕ್ರಮ ಜರುಗಿತು.
ಸಿನಿಮಾ ಜೊತೆಗೆ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವ ನಿರ್ದೇಶಕ ಆದತ್ ಅವರು, ಕೆಲ ಸ್ನೇಹಿತರ ಜೊತೆಗೂಡಿ ಸಿನಿಮಾ, ರಾಜಕೀಯ, ಕೃಷಿ, ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ 32 ಜನ ಸಾಧಕರಿಗೆ ಈ 'ದಾದಾಸಾಹೇಬ್ ಫಾಲ್ಕೆ ಅಚೀವರ್ ಪ್ರಶಸ್ತಿ' ನೀಡಿ ಗೌರವಿಸಿದ್ದಾರೆ. ನಾದಬ್ರಹ್ಮ ಹಂಸಲೇಖ, ಹಿರಿಯ ನಿರ್ದೇಶಕ ಜೋಸೈಮನ್, ಬಿಚ್ಚುಗತ್ತಿ ಸಿನಿಮಾ ಖ್ಯಾತಿಯ ರಾಜವರ್ಧನ್, ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಹಾಗು ಉದ್ಯಮಿ ಟಿ. ರಾಜು ದೀಪ ಅವರು ಬೆಳಗಿಸುವುದರ ಮೂಲಕ ಪ್ರಶಸ್ತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಲೆ, ಶಿಕ್ಷಣ ಹಾಗು ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸಾಧಕರಿಗೆ ಉದ್ಯಮಿಗಳಾದ ಮೌಲ ಶರೀಫ್, ಟಿ. ರಾಜ್ ಹಾಗು ಸಂಗೀತ ನಿರ್ದೇಶಕ ಹಂಸಲೇಖ ಅವರಿಂದ ಈ ಪ್ರಶಸ್ತಿಗಳನ್ನು ವಿತರಿಸಲಾಯಿತು. ಹಾಗೇ ಜೀವಮಾನದ ಸಾಧನೆಗಾಗಿ ಹಂಸಲೇಖ ಹಾಗೂ ಹಿರಿಯ ನಿರ್ದೇಶಕ ಜೋಸೈಮನ್ "ದಾದಾಸಾಹೇಬ್ ಫಾಲ್ಕೆ" ಅಚೀವರ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಕನ್ನಡ ಚಿತ್ರರಂಗದಲ್ಲಿ ನಾಲ್ಕು ದಶಕಗಳಿಂದ ನಟ, ನಿರ್ದೇಶಕ ಹಾಗು ನಿರ್ಮಾಪಕರಾಗಿ ಸೇವೆಯನ್ನು ಗುರುತಿಸಿ ಜೋಸೈಮನ್ ಅವರಿಗೆ ಪ್ರಶಸ್ತಿ ನೀಡಲಾಗಿದೆ. ಪ್ರಶಸ್ತಿ ಪಡೆದ ನಂತರ ಮಾತನಾಡಿದ ಹಿರಿಯ ನಿರ್ದೇಶಕ ಜೋಸೈಮನ್, "ಈ ಪ್ರಶಸ್ತಿ ನನಗೆ ಬಂದಿರುವುದು ತುಂಬಾ ಸಂತೋಷ ಆಗಿದೆ. ಅದರಲ್ಲಿ ನನ್ನ ನೆಚ್ಚಿನ ಗೆಳೆಯ ಹಂಸಲೇಖ ಅವರಿಂದ ಈ ಪ್ರಶಸ್ತಿ ಪಡೆದಿದ್ದು ಹೆಚ್ಚು ಖುಷಿಯಾಗಿದೆ" ಎಂದ ಅವರು 'ದಾದಾಸಾಹೇಬ್ ಫಾಲ್ಕೆ ಅಚೀವರ್ ಪ್ರಶಸ್ತಿ'ಯ ಆಯೋಜಕ ಆದತ್ ಹಾಗು ಅವರ ತಂಡಕ್ಕೆ ಕೃತಜ್ಞತೆ ತಿಳಿಸಿದರು.
ಬಳಿಕ, ಜೀವಮಾನ ಸಾಧನೆ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಹಂಸಲೇಖ ಅವರು, "ಸಿನಿಮಾಗೆ ಸರ್ವಶಾಸ್ತ್ರದ ಇತಿಹಾಸ ಇದೆ. ಅದರಲ್ಲಿ ಭಾರತೀಯ ಚಿತ್ರರಂಗದ ಪಿತಾಮಹ ಅಂತಾ ಕರೆಯಿಸಿಕೊಂಡಿರುವ ದಾದಾಸಾಹೇಬರ ಹೆಸರಲ್ಲಿ ಈ ಪ್ರಶಸ್ತಿಯನ್ನು ಪಡೆಯುವ ಅರ್ಹತೆ ಉಳ್ಳ ಸಾಧಕರು ಕರ್ನಾಟಕದಲ್ಲಿ ಸಾಕಷ್ಟು ಜನ ಇದ್ದಾರೆ. ಅವರನ್ನು ಬಿಟ್ಟು ನನಗೆ ಈ ಪ್ರಶಸ್ತಿ ಕೊಡುತ್ತಿದ್ದಾರೆ. ಹೀಗಾಗಿ ನಾನು ಈ ಪ್ರಶಸ್ತಿಯನ್ನು ಅವರ ಪರವಾಗಿ ಸ್ವೀಕರಿಸುತ್ತಿದ್ದೇನೆ ಎಂದು ಹರ್ಷ ವ್ಯಕ್ತಪಡಿಸಿದರು.
ಇದನ್ನೂ ಓದಿ: 'ಸೈಮಾ ಆವಾರ್ಡ್ಸ್ ಒಂದು ಸೆಲೆಬ್ರೆಷನ್': ಡಾಲಿ ಧನಂಜಯ್ - SIIMA 2024