ನೋಯ್ಡಾ(ಉತ್ತರ ಪ್ರದೇಶ): ಬಾಲಿವುಡ್ ಚಲನಚಿತ್ರ ನಿರ್ಮಾಪಕ ಬೋನಿ ಕಪೂರ್ ಮತ್ತು ರಿಯಲ್ ಎಸ್ಟೇಟ್ ಡೆವಲಪರ್ ಭೂತಾನಿ ಗ್ರೂಪ್ ಅವರ ಬೆಂಬಲದೊಂದಿಗೆ ಬೇವ್ಯೂ ಪ್ರಾಜೆಕ್ಟ್ಸ್, ಉತ್ತರ ಪ್ರದೇಶದ ನೋಯ್ಡಾ ಬಳಿ ಫಿಲ್ಮ್ ಸಿಟಿ ಅಭಿವೃದ್ಧಿಪಡಿಸುವ ಗುತ್ತಿಗೆ ಗೆದ್ದುಗೊಂಡಿದೆ. ಯುಪಿ ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುವ ಯಮುನಾ ಎಕ್ಸ್‌ಪ್ರೆಸ್‌ವೇ ಇಂಡಸ್ಟ್ರಿಯಲ್ ಡೆವಲಪ್‌ಮೆಂಟ್ ಅಥಾರಿಟಿ (ವೈಇಐಡಿಎ) ಮಂಗಳವಾರ ಮಧ್ಯಾಹ್ನ ಗ್ರೀನ್‌ಫೀಲ್ಡ್ ಯೋಜನೆಗೆ ಹಣಕಾಸು ಬಿಡ್ ಮಾಡಿತು. ಬೋನಿ ಕಪೂರ್ ಮತ್ತು ಭೂತಾನಿ ಗ್ರೂಪ್ ಈ ಫಿಲ್ಮ್ ಸಿಟಿಗಾಗಿ ಅತಿ ಹೆಚ್ಚು ಬಿಡ್ ಮಾಡಿದೆ ಎಂದು ವೈಇಐಡಿಎ ತಿಳಿಸಿದೆ.
15 ದಿನದಲ್ಲಿ ಸರ್ಕಾರದಿಂದ ಅನುಮೋದನೆ: ಯೋಜನೆಯ ಅಭಿವೃದ್ಧಿಗೆ ಭೂಮಿ ಮಂಜೂರು ಮಾಡುವ ಮೊದಲು ರಿಯಾಯಿತಿದಾರರ ಆಯ್ಕೆಯು ಯುಪಿ ಸರ್ಕಾರದಿಂದ ಅನುಮೋದನೆ ಪಡೆಯಬೇಕಿದೆ. ಮುಂದಿನ 15 ದಿನಗಳಲ್ಲಿ ಸಚಿವ ಸಂಪುಟದಿಂದ ಅನುಮೋದನೆ ಸಿಗಲಿದೆ ಎಂದು ವೈಇಐಡಿಎನ ಅಧಿಕಾರಿ ಶೈಲೇಂದ್ರ ಭಾಟಿಯಾ ಹೇಳಿದರು.
ಸಾರ್ವಜನಿಕ-ಖಾಸಗಿ ಸಹಭಾಗಿತ್ವದ (ಪಿಪಿಪಿ) ಮಾದರಿಯಲ್ಲಿ ನಿರ್ಮಿಸಲಾಗುವ ಫಿಲ್ಮ್ ಸಿಟಿಗಾಗಿ ರಾಜ್ಯ ಸರ್ಕಾರಕ್ಕೆ ಶೇ.18ದಷ್ಟು ಹೆಚ್ಚಿನ ಆದಾಯದ ಪಾಲನ್ನು ಬೇವ್ಯೂ ಪ್ರಾಜೆಕ್ಟ್ಸ್ ನೀಡಲಿದೆ. ಬೇವ್ಯೂ ಪ್ರಾಜೆಕ್ಟ್ಸ್ ವಿರುದ್ಧ ಸೂಪರ್ ಕ್ಯಾಸೆಟ್ಸ್ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್ (ಟಿ-ಸೀರೀಸ್), ಸೂಪರ್‌ಸಾನಿಕ್ ಟೆಕ್ನೋಬಿಲ್ಡ್ ಪ್ರೈವೇಟ್ ಲಿಮಿಟೆಡ್ (ಚಲನಚಿತ್ರ ನಟ ಅಕ್ಷಯ್ ಕುಮಾರ್, ಮ್ಯಾಡಾಕ್ ಫಿಲ್ಮ್ಸ್ ಮತ್ತು ಇತರರಿಂದ ಬೆಂಬಲಿತವಾಗಿದೆ), ಮತ್ತು 4 ಲಯನ್ಸ್ ಫಿಲ್ಮ್ಸ್ ಪ್ರೈವೇಟ್ ಲಿಮಿಟೆಡ್ (ಚಲನಚಿತ್ರ ನಿರ್ಮಾಪಕ ಕೆ.ಸಿ.ಬೊಕಾಡಿಯಾ ಮತ್ತು ಇತರರಿಂದ ಬೆಂಬಲಿತವಾಗಿದೆ) ಸ್ಪರ್ಧಿಸಿದ್ದವು. ಫಿಲ್ಮ್ ಸಿಟಿ ಅಭಿವೃದ್ಧಿಪಡಿಸಲು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸರ್ಕಾರ ಪಿಇಟಿ ಯೋಜನೆ ಹಾಕಿಕೊಂಡಿದೆ.
''ಬೇವ್ಯೂ ಪ್ರಾಜೆಕ್ಟ್ಸ್ ಜೊತೆಗೆ ಈ ಯೋಜನೆಯಲ್ಲಿ ಇನ್ನೂ ಎರಡು ಕಂಪನಿಗಳಾದ ಪರಮೇಶ್ ಕನಸ್ಟ್ರಕ್ಷನ್ ಕಂಪನಿ ಲಿಮಿಟೆಡ್ ಮತ್ತು ನೋಯ್ಡಾ ಸೈಬರ್‌ಪಾರ್ಕ್ ಪ್ರೈವೇಟ್ ಲಿಮಿಟೆಡ್ ಸೇರಿವೆ. ಬೇವ್ಯೂ ಪ್ರಾಜೆಕ್ಟ್ಸ್ (ಕಾರ್ಯಾಚರಣೆಗಳು ಮತ್ತು ನಿರ್ವಹಣೆ) ಒಕ್ಕೂಟದಲ್ಲಿ ಶೇ.48 ಈಕ್ವಿಟಿ ಹೊಂದಿದ್ದರೆ, ಪರಮೇಶ್ ಕನ್‌ಸ್ಟ್ರಕ್ಷನ್ (ಹಣಕಾಸು) ಮತ್ತು ನೋಯ್ಡಾ ಸೈಬರ್‌ಪಾರ್ಕ್ (ತಾಂತ್ರಿಕ) ತಲಾ ಶೇ.26 ಈಕ್ವಿಟಿ ಹೊಂದಿವೆ" ಎಂದು ಪ್ರಾಧಿಕಾರ ಹೇಳಿದೆ.
1,000 ಎಕರೆಯಲ್ಲಿ ಫಿಲ್ಮ್ ಸಿಟಿ ನಿರ್ಮಾಣ: ಫಿಲ್ಮ್ ಸಿಟಿಯನ್ನು ಒಟ್ಟು 1,000 ಎಕರೆಗಳಲ್ಲಿ ನಿರ್ಮಾಣ ಮಾಡಲಾಗುವುದು. ಮೊದಲ ಹಂತದಲ್ಲಿ 230 ಎಕರೆಗಳಲ್ಲಿ ನಿರ್ಮಾಣ ಕಾರ್ಯ ನಡೆಯಲಿದೆ. ವೈಇಐಡಿಎನ ಸೆಕ್ಟರ್ 21ರಲ್ಲಿ, ನೋಯ್ಡಾ ಬಳಿಯ ಯಮುನಾ ಎಕ್ಸ್‌ಪ್ರೆಸ್‌ವೇ ಉದ್ದಕ್ಕೂ ನಿರ್ಮಿಸಲಾಗುತ್ತದೆ. ಉದ್ದೇಶಿತ ಅಭಿವೃದ್ಧಿಯಲ್ಲಿ 220 ಎಕರೆ ವಾಣಿಜ್ಯ ಬಳಕೆಗೆ ಮತ್ತು 780 ಎಕರೆ ಕೈಗಾರಿಕಾ ಬಳಕೆಗೆ ಮೀಸಲಿಡಲಾಗಿದೆ. ಈ ಯೋಜನೆಗೆ ಮೂರನೇ ಬಾರಿಗೆ ಟೆಂಡರ್ ಕರೆಯಲಾಗಿತ್ತು.
ಇದನ್ನೂ ಓದಿ: 'ನನ್ನಿಂದಲೇ ಅವರು ಟಾಪ್ 3 ತಲುಪಿದ್ದು': ಬಿಗ್ ಬಾಸ್ ವಿನಯ್ ಗೌಡ ಸಂದರ್ಶನ..!