ರಾಷ್ಟ್ರಪ್ರಶಸ್ತಿ ವಿಜೇತ ನಟಿ ಆಲಿಯಾ ಭಟ್ 'ಮೆಟ್ ಗಾಲಾ 2024'ನಲ್ಲಿ ಭಾಗಿಯಾಗೋ ಸಲುವಾಗಿ ನ್ಯೂಯಾರ್ಕ್‌ಗೆ ತೆರಳಿದ್ದಾರೆ. ಕಳೆದ ರಾತ್ರಿ ಮುಂಬೈನ ಕಲಿನಾ ವಿಮಾನ ನಿಲ್ದಾಣದಲ್ಲಿ ಚೆಲುವೆ ಕಾಣಿಸಿಕೊಂಡಿದ್ದು, ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸತತ ಎರಡನೇ ವರ್ಷ 'ಮೆಟ್ ಗಾಲಾ'ಗೆ ಹಾಜರಾಗಲು ಬಾಲಿವುಡ್ ನಟಿ ಸಜ್ಜಾಗಿದ್ದಾರೆ.
ವೈಟ್ ಡ್ರೆಸ್ನಲ್ಲಿ ಸೊಗಸಾಗಿ ಕಾಣುತ್ತಿದ್ದ ಆಲಿಯಾ ಭಟ್ ವಿಮಾನ ನಿಲ್ದಾಣದೊಳಗೆ ಹೋಗುವ ಮೊದಲ ಪಾಪರಾಜಿಗಳ ಕ್ಯಾಮರಾಗಳಿಗೆ ಪೋಸ್ ನೀಡಿದರು. ಈ ಪ್ರತಿಷ್ಠಿತ ಈವೆಂಟ್ಗೆ ಆಹ್ವಾನಿಸಲ್ಪಟ್ಟ ಕೆಲವೇ ಕೆಲ ಭಾರತೀಯ ತಾರೆಗಳಲ್ಲಿ ಆಲಿಯಾ ಭಟ್ ಓರ್ವರು.
ಕಳೆದ ವರ್ಷವೂ ಆಲಿಯಾ 'ಮೆಟ್ ಗಾಲಾ'ದಲ್ಲಿ ಕಾಣಿಸಿಕೊಂಡಿದ್ದು, ಅದು ನಟಿಯ ಚೊಚ್ಚಲ ಪ್ರವೇಶವಾಗಿತ್ತು. "ಕರ್ಲ್ ಲಾಗರ್‌ಫೆಲ್ಡ್: ಎ ಲೈನ್ ಆಫ್ ಬ್ಯೂಟಿ" ಎಂಬ ಥೀಮ್‌ಗೆ ಹೊಂದಿಕೆಯಾಗುವಂತೆ ವಸ್ತ್ರ ವಿನ್ಯಾಸಕ ಪ್ರಬಲ್ ಗುರುಂಗ್ ಡಿಸೈನ್ ಮಾಡಿದ್ದ ಶ್ವೇತವರ್ಣದ ಉಡುಪಿನಲ್ಲಿ ಕಾಣಿಸಿಕೊಂಡ ಆಲಿಯಾ ಎಲ್ಲರನ್ನೂ ಬೆರಗುಗೊಳಿಸಿದ್ದರು.
'ಮೆಟ್ ಗಾಲಾ 2024' ಅನ್ನು ಮೆಟ್ರೋಪಾಲಿಟನ್ ಮ್ಯೂಸಿಯಂ ಆಫ್ ಆರ್ಟ್‌ನಲ್ಲಿ ಮೇ 6ರಂದು ಅಂದರೆ ನಾಳೆಗೆ ನಿಗದಿಪಡಿಸಲಾಗಿದೆ. ಪ್ರತೀ ವರ್ಷ ಮೇ ತಿಂಗಳ ಮೊದಲ ಸೋಮವಾರದಂದು ಈ ಕಾರ್ಯಕ್ರಮ ಜರುಗುತ್ತದೆ. ಈ ವರ್ಷದ ಥೀಮ್, 'ಸ್ಲೀಪಿಂಗ್ ಬ್ಯೂಟೀಸ್: ರಿವೇಕನಿಂಗ್ ಫ್ಯಾಷನ್'. ಹಾಗಾಗಿ ನಟಿ ಯಾವ ರೀತಿಯ ಉಡುಗೆ ತೊಡುತ್ತಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿದೆ.
ಇದನ್ನೂ ಓದಿ: 'ಕೂಲಿ' ಆಡಿಯೋ ಕಾಪಿರೈಟ್ ವಿವಾದ: ಇಳಯರಾಜರ ಕಾನೂನು ಕ್ರಮದ ಎಚ್ಚರಿಕೆ ಬೆನ್ನಲ್ಲೇ ರಜನಿಕಾಂತ್ ಹೇಳಿದ್ದಿಷ್ಟು - Rajinikanth
ತಮ್ಮ ಮೊದಲ ಮೆಟ್ ಗಾಲಾದಲ್ಲಿ ಆಲಿಯಾ, ನೇಪಾಳಿ-ಅಮೆರಿಕನ್ ಫ್ಯಾಷನ್ ಡಿಸೈನರ್ ಪ್ರಬಲ್ ಗುರುಂಗ್ ಡಿಸೈನ್ ಮಾಡಿದ್ದ ಡ್ರೆಸ್ನಲ್ಲಿ ಕಾಣಿಸಿಕೊಂಡಿದ್ದರು. ಮುತ್ತಿನಂತೆ ತೋರಿದ ಡಿಸೈನ್ ಪೀಸ್ಗಳಿಂದ ದೊಡ್ಡ ಗೌನ್ ಧರಿಸಿ ಮನಮೋಹಕ ನೋಟ ಬೀರಿದ್ದರು. ಮೆಟ್ ಗಾಲಾ 2024ಗೆ ಯಾವ ಫ್ಯಾಷನ್ ಡಿಸೈನರ್ನ ಬಟ್ಟೆ ತೊಡಲಿದ್ದಾರೆ ಎಂಬುದನ್ನು ಕಾದು ನೋಡಬೇಕು.
ಇದನ್ನೂ ಓದಿ: ಮಗ ಜನಿಸಿದ ಬಳಿಕ ಮೊದಲ ಬಾರಿ ಕ್ರಿಕೆಟ್ ಸ್ಟೇಡಿಯಂಗೆ ಬಂದ ಅನುಷ್ಕಾ: ವಿರುಷ್ಕಾ ಕ್ಷಣಗಳು - Anushka Sharma
ಆಲಿಯಾ ಸಿನಿಮಾ ವಿಚಾರ ಗಮನಿಸುವುದಾದರೆ, ಮುಂದಿನ ಬಹುನಿರೀಕ್ಷಿತ ಚಿತ್ರ 'ಜಿಗ್ರಾ' ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ. ಚಿತ್ರವನ್ನು ನಟಿಯ ಬ್ಯಾನರ್ ಎಟರ್ನಲ್ ಸನ್‌ಶೈನ್ ಪ್ರೊಡಕ್ಷನ್ಸ್ ಮತ್ತು ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ಸ್ ನಿರ್ಮಾಣ ಮಾಡಿದೆ. ಯಶ್ ರಾಜ್ ಫಿಲ್ಮ್ಸ್‌ನ ಮುಂದಿನ ಸ್ಪೈ ಆ್ಯಕ್ಷನ್ ಸಿನಿಮಾವನ್ನೂ ಒಪ್ಪಿಕೊಂಡಿದ್ದಾರೆ. ಅಲ್ಲದೇ ಸಂಜಯ್ ಲೀಲಾ ಬನ್ಸಾಲಿ ಅವರ ಲವ್ ಆ್ಯಂಡ್ ವಾರ್ ಸಿನಿಮಾದಲ್ಲೂ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಪತಿ ರಣ್ಬೀರ್ ಕಪೂರ್ ಮತ್ತು ವಿಕ್ಕಿ ಕೌಶಲ್ ಕೂಡ ಮುಖ್ಯಭೂಮಿಕೆಯಲ್ಲಿರಲಿದ್ದಾರೆ.