'ಕಬ್ಜ' ಚಿತ್ರದ ಸಲುವಾಗಿ ಯಾವುದೇ ತೆರಿಗೆ ಉಳಿಸಿಕೊಳ್ಳದೇ ದಾಖಲೆ ಮೊತ್ತದ ಹಣವನ್ನು ತೆರಿಗೆ ಇಲಾಖೆಗೆ ಪಾವತಿಸಿದ್ದಕ್ಕೆ ನಿರ್ದೇಶಕ ಆರ್.ಚಂದ್ರು ಅವರ ನಿರ್ಮಾಣ ಸಂಸ್ಥೆಯಾದ ಶ್ರೀ ಸಿದ್ದೇಶ್ವರ ಎಂಟರ್ಪ್ರೈಸಸ್ಗೆ ಕೇಂದ್ರ ಹಣಕಾಸು ಸಚಿವಾಲಯದಿಂದ ಪ್ರಶಂಸನಾ ಪತ್ರ ದೊರೆತಿದೆ.
ಆರ್.ಚಂದ್ರು ನಿರ್ಮಾಣ ಹಾಗೂ ನಿರ್ದೇಶನದಲ್ಲಿ ಮೂಡಿಬಂದ 'ಕಬ್ಜ' ದೇಶಾದ್ಯಂತ ಜನಮನ್ನಣೆ ಪಡೆದಿತ್ತು. ಈ ಚಿತ್ರ ನಿರ್ಮಿಸಿದ್ದ ಶ್ರೀ ಸಿದ್ದೇಶ್ವರ ಎಂಟರ್‌ಪ್ರೈಸಸ್ ಸಂಸ್ಥೆ ಈಗ ಅತೀ ಹೆಚ್ಚು ತೆರಿಗೆ ಪಾವತಿಸಿದ ಹಿರಿಮೆಗೆ ಭಾಜನವಾಗಿದೆ.
ಇದೇ ಬ್ಯಾನರ್ ಮೂಲಕ ಐದು ಯಶಸ್ವಿ ಸಿನಿಮಾಗಳನ್ನು ನಿರ್ಮಿಸಿರುವ ಆರ್.ಚಂದ್ರು, ಕನ್ನಡದ ಯಶಸ್ವಿ ನಿರ್ದೇಶಕರಲ್ಲಿ ಒಬ್ಬರು. ಚಿಕ್ಕಬಳ್ಳಾಪುರದ ಸಾಮಾನ್ಯ ರೈತ ಕುಟುಂಬದಿಂದ ಬಂದ ಚಂದ್ರು, ಸಿನಿಮಾ ಪ್ರಪಂಚದಲ್ಲಿ ಇಂದು ಗುರುತರ ಮಟ್ಟಕ್ಕೆ ಬೆಳೆದಿದ್ದಾರೆ. ಒಬ್ಬ ನಿರ್ದೇಶಕನಾಗಿ ಯಶಸ್ವಿಯಾಗುವುದು ಈ ಕಾಲಘಟ್ಟದಲ್ಲಿ ಸವಾಲಿನ ಕೆಲಸ. ಹೀಗಿದ್ದರೂ ಪ್ರೇಕ್ಷಕರು ಮೆಚ್ಚುವ ಸಿನಿಮಾಗಳ ನಿರ್ದೇಶನದ ಜೊತೆಗೆ ನಿರ್ಮಾಣವನ್ನೂ ಮಾಡಿದ್ದಾರೆ. ತಮ್ಮ ಸ್ವಂತ ಬ್ಯಾನರ್ ಮೂಲಕ ಹೊಸ ಪ್ರತಿಭೆಗಳಿಗೂ ಅವಕಾಶ ನೀಡುತ್ತಿದ್ದಾರೆ.
ಇತ್ತೀಚೆಗೆ ನಡೆದ ಕನ್ನಡ ಸಿನಿ ಸನ್ಮಾನ ಸಮಾರಂಭದಲ್ಲಿ ಅತ್ಯುತ್ತಮ ವಿಎಫ್ಎಕ್ಸ್ ಪೋಸ್ಟ್ ಪ್ರೊಡಕ್ಷನ್ ಹಾಗೂ ಅನಿಮೇಷನ್ ಚಿತ್ರ ಪ್ರಶಸ್ತಿಗೆ 'ಕಬ್ಜ' ಭಾಜನವಾಗಿದೆ. ಈ ಎಲ್ಲಾ ವಿಚಾರಗಳ ನಡುವೆ ಆರ್.ಸಿ.ಸ್ಟುಡಿಯೋಸ್ ನಿರ್ಮಾಣದ ಐದು ಚಿತ್ರಗಳಲ್ಲಿ ಒಂದಾದ ಡಾರ್ಲಿಂಗ್ ಕೃಷ್ಣ, ಪ್ರಕಾಶ್ ರೈ ಮುಂತಾದವರು ನಟಿಸುತ್ತಿರುವ 'ಫಾದರ್' ಚಿತ್ರಕ್ಕೆ ಮೈಸೂರಿನಲ್ಲಿ ಮೊದಲ ಹಂತದ ಚಿತ್ರೀಕರಣ ನಡೆಯುತ್ತಿದೆ.
ಇದನ್ನೂ ಓದಿ: ಇಂದ್ರಜಿತ್ ಲಂಕೇಶ್ ನಿರ್ದೇಶನದ 'ಗೌರಿ' ಬಿಡುಗಡೆಗೆ ಮುಹೂರ್ತ ಫಿಕ್ಸ್ - Gowri Movie