ಅಯೋಧ್ಯೆ(ಉತ್ತರ ಪ್ರದೇಶ): ಭಾರತೀಯ ಚಿತ್ರರಂಗದ ಹಿರಿಯ ನಟ ಅಮಿತಾಭ್ ಬಚ್ಚನ್ ಅವರಿಂದು ಅಯೋಧ್ಯೆ ರಾಮಮಂದಿರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಬಿಗಿ ಭದ್ರತೆಯ ನಡುವೆ ಬಿಗ್ ಬಿ ದೇವಸ್ಥಾನದಿಂದ ಹೊರಬರುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಬಚ್ಚನ್ ಬಿಳಿ ಕುರ್ತಾ, ಪೈಜಾಮ ಧರಿಸಿದ್ದರು.
ಜನವರಿ 22ರಂದು ರಾಮಮಂದಿರದಲ್ಲಿ ರಾಮ ಲಲ್ಲಾನ ಪ್ರಾಣ ಪ್ರತಿಷ್ಠಾಪನಾ ಸಮಾರಂಭ ನಡೆದಿದೆ. ಐತಿಹಾಸಿಕ ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ ಸಮ್ಮುಖದಲ್ಲಿ ಒಂದು ಗಂಟೆಗಳ ಕಾಲ ಧಾರ್ಮಿಕ ವಿಧಿ-ವಿಧಾನಗಳು ಜರುಗಿ, ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ನಡೆದಿತ್ತು. ಭವ್ಯ ಸಮಾರಂಭಕ್ಕೆ ಸಾವಿರಾರು ಗಣ್ಯ ಅತಿಥಿಗಳು ಸೇರಿದಂತೆ ಸುಮಾರು 8,000ಕ್ಕೂ ಹೆಚ್ಚು ಆಹ್ವಾನಿತರು ಆಗಮಿಸಿದ್ದರು. ಅಮಿತಾಭ್ ಬಚ್ಚನ್ ತಮ್ಮ ಪುತ್ರ ಅಭಿಷೇಕ್ ಬಚ್ಚನ್ ಜೊತೆ ಸಮಾರಂಭಕ್ಕೆ ಸಾಕ್ಷಿಯಾಗಿದ್ದರು.
ಬಾಲರಾಮನ ಪ್ರಾಣ ಪ್ರತಿಷ್ಠಾಪನೆಗೂ ಮುನ್ನ ಅಮಿತಾಭ್ ಬಚ್ಚನ್ ಅಯೋಧ್ಯೆಯಲ್ಲಿ 10,000 ಸ್ಕ್ವೇರ್ ಫೀಟ್ ಜಾಗ ಖರೀದಿಸಿದ್ದರು. ಅಯೋಧ್ಯೆ ರಿಜಿಸ್ಟ್ರಾರ್‌ನ ರಿಜಿಸ್ಟ್ರಾರ್ ಶಾಂತಿ ಭೂಷಣ್ ಚೌಬೆ ಎಎನ್‌ಐಗೆ ಈ ವಿಚಾರವನ್ನು ದೃಢೀಕರಿಸಿದ್ದರು. ಖರೀದಿಯ ಭಾಗವಾಗಿ, ಎರಡು ದಾಖಲೆಗಳನ್ನು ಪ್ರಸ್ತುತಪಡಿಸಲಾಗಿತ್ತು. ಇದು 10,000 ಚದರ ಅಡಿ ಪ್ಲಾಟ್ ಆಗಿದ್ದು, ಇದಕ್ಕಾಗಿ 9 ಕೋಟಿ ರೂಪಾಯಿಯ ವ್ಯವಹಾರ ನಡೆದಿದೆ ಎಂದು ಮಾಹಿತಿ ಕೊಟ್ಟಿದ್ದರು.
ಬಿಗ್ ಬಿ ಸಿನಿಮಾಗಳನ್ನು ಗಮನಿಸುವುದಾದರೆ, ದೀಪಿಕಾ ಪಡುಕೋಣೆ ಮತ್ತು ಪ್ರಭಾಸ್ ಜೊತೆ 'ಕಲ್ಕಿ 2898 ಎಡಿ' ಶೀರ್ಷಿಕೆಯ ಸೈನ್ಸ್ ಫಿಕ್ಷನ್ ಆ್ಯಕ್ಷನ್ ಥ್ರಿಲ್ಲರ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮೇ.9ರಂದು ಚಿತ್ರ ಅದ್ಧೂರಿಯಾಗಿ ತೆರೆಕಾಣಲಿದೆ. ಸೌತ್ ಸೂಪರ್ ಸ್ಟಾರ್ ಪ್ರಭಾಸ್ ಹಾಗೂ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಇದೇ ಮೊದಲ ಬಾರಿ ತೆರೆ ಹಂಚಿಕೊಂಡಿರುವ ಚಿತ್ರವಿದು. ಕಮಲ್ ಹಾಸನ್ ಮತ್ತು ದಿಶಾ ಪಟಾನಿ ಕೂಡ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ.
ಇದನ್ನೂ ಓದಿ: ರಜನಿಕಾಂತ್ ನಟನೆಯ 'ಲಾಲ್ ಸಲಾಂ' ಬಿಡುಗಡೆ: ಮೊದಲ ದಿನದ ಕಲೆಕ್ಷನ್ ಎಷ್ಟು?
ಕೋರ್ಟ್ರೂಮ್ ಡ್ರಾಮಾ 'ಸೆಕ್ಷನ್ 84' ಅನ್ನು ಸಹ ಹೊಂದಿದ್ದಾರೆ. ರಿಭು ದಾಸ್‌ಗುಪ್ತಾ ನಿರ್ದೇಶನದ ಈ ಚಿತ್ರದಲ್ಲಿ ಅಮಿತಾಭ್ ಬಚ್ಚನ್, ಡಯಾನಾ ಪೆಂಟಿ, ನಿಮ್ರತ್ ಕೌರ್ ಮತ್ತು ಅಭಿಷೇಕ್ ಬ್ಯಾನರ್ಜಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. 2014ರಲ್ಲಿ ಬಂದ ಟಿವಿ ಮಿನಿ ಸೀರಿಸ್ ಯುಧ್ ಮತ್ತು 2015ರ ಥ್ರಿಲ್ಲರ್ ಸಿನಿಮಾ 'Te3n' ನಂತರ ಅಮಿತಾಭ್ ಮತ್ತು ರಿಭು ಅವರ ಮೂರನೇ ಸಿನಿಮಾವಿದು. 'ಸೆಕ್ಷನ್ 84'ನ ಅಧಿಕೃತ ಬಿಡುಗಡೆ ದಿನಾಂಕ ಇನ್ನಷ್ಟೇ ಘೋಷಣೆಯಾಗಬೇಕಿದೆ.
ಇದನ್ನೂ ಓದಿ: ಐಸ್ಲ್ಯಾಂಡ್ನಲ್ಲಿ ಜ್ವಾಲಾಮುಖಿ ಸ್ಫೋಟ: ಭೀಕರ ಘಟನೆಯ ಚಿತ್ರಣ ಹೀಗಿದೆ