ಬಾಲಿವುಡ್ ನಟ ಅಜಯ್ ದೇವ್ಗನ್ ತಮ್ಮ ಹಲವು ಸಿನಿಮಾಗಳ ಸೀಕ್ವೆಲ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹೆಚ್ಚು ಸೀಕ್ವೆಲ್ಗಳನ್ನು ಹೊಂದಿರುವ ನಟ ಇವರು. ಸದ್ಯ ಸಿಂಗಮ್ ಎಗೈನ್ನಲ್ಲಿ ಬ್ಯುಸಿಯಾಗಿರುವ ನಟ ಶೀಘ್ರದಲ್ಲೇ 'ಸನ್ ಆಫ್ ಸರ್ದಾರ್' ಸೀಕ್ವೆಲ್ ಅನ್ನೂ ಪ್ರಾರಂಭಿಸಲಿದ್ದಾರೆ. ಕಾಮಿಡಿ ಸಿನಿಮಾದ ಎರಡನೇ ಭಾಗ ಈ ತಿಂಗಳು ಸೆಟ್ಟೇರಲಿದೆ ಎಂದು ವರದಿಗಳು ತಿಳಿಸಿವೆ.
ಮಾಧ್ಯಮ ವರದಿಗಳ ಪ್ರಕಾರ, ಅಜಯ್ ತಮ್ಮ ಜಸ್ಸಿ ಪಾತ್ರವನ್ನು ಮುಂದುವರಿಸಲಿದ್ದಾರೆ. ಸಂಜಯ್ ದತ್ ತಮ್ಮ ಜನಪ್ರಿಯ ಪಾತ್ರ ಬಲ್ವಿಂದರ್ ಸಿಂಗ್ ಸಂಧು ಅಥವಾ ಬಿಲ್ಲು ಪಾತ್ರವನ್ನು ಪುನರಾವರ್ತಿಸಲಿದ್ದಾರೆ. ಈ ಇಬ್ಬರೂ ಮುಂದಿನ ಭಾಗದಲ್ಲಿ ಮುಖಾಮುಖಿಯಾಗಲಿದ್ದಾರೆ ಎಂದು ವರದಿಯಾಗಿದೆ. ಸಂಜಯ್, ಅಜಯ್ ಅವರ ಶತ್ರುವಾಗಿ ಕಾಣಿಸಿಕೊಳ್ಳಲಿದ್ದಾರೆ. ವರದಿಗಳ ಪ್ರಕಾರ, ಸ್ಕಾಟ್ಲೆಂಡ್‌ನಲ್ಲಿ 50 ದಿನಗಳ ಶೂಟಿಂಗ್ ನಡೆಯಲಿದ್ದು, ಇದೇ ಜುಲೈ ಅಂತ್ಯದಲ್ಲಿ ಪ್ರಾರಂಭವಾಲಿದೆ.
ಚಿತ್ರಕ್ಕೆ ನಿರ್ದೇಶಕ ವಿಜಯ್ ಕುಮಾರ್ ಅರೋರಾ ಆ್ಯಕ್ಷನ್ ಕಟ್ ಹೇಳಲಿದ್ದು, ಅಜಯ್, ಸಂಜಯ್ ಜೊತೆ ಬಹುಬೇಡಿಕೆ ನಟಿ ಮೃಣಾಲ್ ಠಾಕೂರ್ ಮುಖ್ಯಭೂಮಿಕೆಯಲ್ಲಿ ನಟಿಸಲಿದ್ದಾರೆ. ದೇವ್ಗನ್ ಪ್ರಸ್ತುತ ಬಾಲಿವುಡ್ನ ಸ್ಟಾರ್ ಡೈರೆಕ್ಟರ್ ರೋಹಿತ್ ಶೆಟ್ಟಿ ನಿರ್ದೇಶನದ ಸಿಂಗಮ್ ಎಗೈನ್ ಚಿತ್ರೀಕರಣದಲ್ಲಿ ಸಖತ್ ಬ್ಯುಸಿ ಆಗಿದ್ದಾರೆ. ಈ ಬಹುನಿರೀಕ್ಷಿತ ಚಿತ್ರದಲ್ಲಿ ಬಾಲಿವುಡ್ನ ಕರೀನಾ ಕಪೂರ್ ಖಾನ್, ಅಕ್ಷಯ್ ಕುಮಾರ್, ರಣ್ವೀರ್ ಸಿಂಗ್, ದೀಪಿಕಾ ಪಡುಕೋಣೆ, ಟೈಗರ್ ಶ್ರಾಫ್, ಅರ್ಜುನ್ ಕಪೂರ್ ಮತ್ತು ಜಾಕಿ ಶ್ರಾಫ್ ಅವರಂತಹ ಸ್ಟಾರ್ ನಟರು ತೆರೆಹಂಚಿಕೊಂಡಿದ್ದಾರೆ. ಅಜಯ್ ದೇವ್ಗನ್ ಅತಿ ಶೀಘ್ರದಲ್ಲೇ ತಮ್ಮ ಭಾಗದ ಚಿತ್ರೀಕರಣವನ್ನು ಪೂರ್ಣಗೊಳಿಸುವ ನಿರೀಕ್ಷೆ ಇದೆ. ನಂತರ 'ಸನ್ ಆಫ್ ಸರ್ದಾರ್ 2' ಪ್ರಾರಂಭವಾಗಬಹುದು.
'ಸಿಂಗಮ್ ಎಗೈನ್' ಪೂರ್ಣಗೊಳ್ಳುತ್ತಿದ್ದಂತೆ, ಸನ್ ಆಫ್ ಸರ್ದಾರ್ 2ನಲ್ಲಿ ಭಾಗಿಯಾಗಲಿದ್ದಾರೆ. ಸ್ಕಾಟ್ಲೆಂಡ್ ಶೆಡ್ಯೂಲ್ ಮುಗಿಸಿದ ನಂತರ, ದೇವ್ಗನ್ ಮತ್ತೊಂದು ಬಹುನಿರೀಕ್ಷಿತ ಸೀಕ್ವೆಲ್ ಆದ ದೇ ದೇ ಪ್ಯಾರ್ ದೇ 2 ಶೂಟಿಂಗ್ಗಾಗಿ ಲಂಡನ್ಗೆ ತೆರೆಳುವ ಸಾಧ್ಯತೆ ಇದೆ. ಇವುಗಳಲ್ಲದೇ ಅಜಯ್ ಇತರೆ ಕೆಲ ಸೀಕ್ವೆಲ್‌ಗಳನ್ನೂ ಹೊಂದಿದ್ದಾರೆ. ರೈಡ್ 2 ಮತ್ತು ಗೋಲ್ಮಾಲ್ 5 ಕೂಡಾ ಮೂಡಿ ಬರಲಿದೆ. ಪ್ರಸ್ತುತ ಬಿಡುಗಡೆಗೆ ಸಜ್ಜಾಗಿರುವ ಔರಾನ್ ಮೇ ಕಹಾ ದಮ್ ಥಾ ಚಿತ್ರದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ಇದೇ ಜುಲೈ 5ರಂದು ಬಿಡುಗಡೆ ಆಗಲಿದೆ.