ಕನ್ನಡ ಚಿತ್ರರಂಗದಲ್ಲಿ ಈವರೆಗೆ ಲವ್, ರೊಮ್ಯಾನ್ಸ್, ಕಾಮಿಡಿ ಶೈಲಿಯ ಸಿನಿಮಾಗಳಲ್ಲೇ ಹೆಚ್ಚಾಗಿ ಕಾಣಿಸಿಕೊಂಡಿದ್ದ ನಟಿ ಮೇಘನಾ ಗಾಂವ್ಕರ್ ಈ ಬಾರಿ ಲೀಗಲ್, ಥ್ರಿಲ್ಲರ್ ಶೈಲಿಯ 'ದಿ ಜಡ್ಜ್‌ಮೆಂಟ್' ಸಿನಿಮಾದ ವಿಭಿನ್ನ ಪಾತ್ರದೊಂದಿಗೆ ಪ್ರೇಕ್ಷಕರೆದುರು ಬರಲು ಸಜ್ಜಾಗಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಪೋಸ್ಟರ್, ಫಸ್ಟ್‌ಲುಕ್, ಟೀಸರ್ ಮತ್ತು ಟ್ರೇಲರ್‌ಗಳಲ್ಲಿ ನಟಿಯ ಪಾತ್ರ ಗಮನ ಸೆಳೆದಿದೆ. ತಮ್ಮ ಹೊಸ ಸಿನಿಮಾ, ಹೊಸ ಪಾತ್ರದ ಬಗ್ಗೆ ಮೇಘನಾ ಗಾಂವ್ಕರ್ 'ಈಟಿವಿ ಭಾರತ'ದ ಜೊತೆ ಮಾತನಾಡಿದರು.
'ದಿ ಜಡ್ಜ್‌ಮೆಂಟ್ ಸಿನಿಮಾ'ಗೆ ನೀವು ಎಂಟ್ರಿಯಾಗಿದ್ದು ಹೇಗೆ?: ''ನಿಜ ಹೇಳಬೇಕೆಂದರೆ ಈ ಸಿನಿಮಾಗೆ ಕೊನೆಯದಾಗಿ ಸೇರ್ಪಡೆಯಾಗಿದ್ದೇ ನಾನು. ಇನ್ನೇನು ನಾನು ಮಾಡಬೇಕಾದ ಪಾತ್ರದ ಶೂಟಿಂಗ್ ಮಾಡಲು ನಾಲ್ಕೈದು ದಿನಗಳಷ್ಟೇ ಇದೆ ಎನ್ನುವಾಗ ನನಗೆ ಆಫರ್ ಬಂತು. ಒಂದೇ ದಿನದಲ್ಲಿ ಆಫರ್ ಒಪ್ಪಿಕೊಂಡೆ. ಹೀಗೆ ಈ ಸಿನಿಮಾಗೆ ಎಂಟ್ರಿಯಾದೆ.''
ಸಿನಿಮಾ ಒಪ್ಪಿಕೊಳ್ಳಲು ಕಾರಣ?: ''ಈವರೆಗೆ ನಾನು ಮಾಡಿರುವ ಪಾತ್ರಗಳದ್ದು ಒಂದು ತೂಕವಾದರೆ, ದಿ ಜಡ್ಜ್‌ಮೆಂಟ್ ಸಿನಿಮಾದ ಪಾತ್ರದ್ದು ಇನ್ನೊಂದು ತೂಕ. ಈವರೆಗೆ ನಿರ್ವಹಿಸಿರುವ ಪಾತ್ರಗಳಿಗಿಂತ ವಿಭಿನ್ನ ಇದು. ಕಥೆ, ಪಾತ್ರ, ಕಲಾವಿದರು ಮತ್ತು ತಂತ್ರಜ್ಞರ ತಂಡ ಎಲ್ಲವೂ ಇಷ್ಟವಾಯಿತು. ಹೀಗಾಗಿ ಖುಷಿಯಿಂದ ಈ ಸಿನಿಮಾ ಒಪ್ಪಿಕೊಂಡೆ.''
ಚಿತ್ರದಲ್ಲಿ ನಿಮ್ಮ ಪಾತ್ರ ಹೇಗಿದೆ?: ''ನಾನು ಪ್ರೊಫೆಸರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದೇನೆ. ರವಿಚಂದ್ರನ್ ಸರ್‌ಗೆ ಜೋಡಿಯಾಗಿ ಅಭಿನಯಿಸಿದ್ದೇನೆ. ಇಂದಿನ ಜನರೇಶನ್‌ನ ಮಹಿಳೆಯರು ಹೇಗೆ ಸ್ವತಂತ್ರವಾಗಿ ಬದುಕಲು ಬಯಸುತ್ತಾರೋ ಅಂಥದ್ದೇ ಒಂದು ಪಾತ್ರ ಇದು. ನನ್ನ ಪಾತ್ರ ಮತ್ತು ಸಿನಿಮಾದಲ್ಲಿ ನಾನಿರುವ ಸನ್ನಿವೇಶಗಳು ಹೆಚ್ಚಾಗಿ ಮನೆಯಲ್ಲೇ ನಡೆಯುತ್ತವೆ. ಬಹಳ ಎಮೋಶನ್ ಕ್ಯಾರಿ ಮಾಡುವಂಥ ಪಾತ್ರ ಇದಾಗಿದೆ.''
ಮೊದಲ ಬಾರಿ ರವಿಚಂದ್ರನ್ ಜೊತೆ ಅಭಿನಯಿಸಿದ ಅನುಭವ ಹೇಗಿತ್ತು?: ''ಇದೇ ಮೊದಲ ಬಾರಿಗೆ ಲೆಜೆಂಡರಿ ಸ್ಟಾರ್ ಜೊತೆ ಅಭಿನಯಿಸುವ ಅವಕಾಶ ಸಿಕ್ಕಿರುವುದಕ್ಕೆ ತುಂಬಾನೇ ಖುಷಿಯಿದೆ. ನಾನು ಈ ಸಿನಿಮಾ ಒಪ್ಪಿಕೊಳ್ಳಲು ಇದೂ ಕೂಡ ಒಂದು ಕಾರಣ. ಕೆಲವು ವರ್ಷಗಳ ಹಿಂದೆ ರವಿಚಂದ್ರನ್ ಅವರೊಂದಿಗೆ ಅಭಿನಯಿಸುವ ಅವಕಾಶ ಬಂದಿದ್ದರೂ, ಕಾರಣಾಂತರಗಳಿಂದ ಸಾಧ್ಯವಾಗಿರಲಿಲ್ಲ. ಈ ಸಿನಿಮಾದಲ್ಲಿ ಅದು ನೆರವೇರಿದೆ. ರವಿಚಂದ್ರನ್ ಅವರೊಂದಿಗೆ ಕೆಲಸ ಮಾಡಿದ್ದು, ನಿಜಕ್ಕೂ ಖುಷಿ ಕೊಟ್ಟಿದೆ.''
ನಿಮ್ಮ ಪ್ರಕಾರ 'ದಿ ಜಡ್ಜ್‌ಮೆಂಟ್' ಅಂದ್ರೇನು?: ''ಇದೊಂದು ಕಂಪ್ಲೀಟ್ ಕೋರ್ಟ್ ರೂಂ ಡ್ರಾಮಾ. ನನ್ನ ಪ್ರಕಾರ, ಕನ್ನಡದಲ್ಲಿ ಇಂಥ ಸಿನಿಮಾಗಳು ಬಂದಿದ್ದು ವಿರಳ. ಇದು ಅಂತಹ ವಿರಳ ಸಿನಿಮಾಗಳ ಸಾಲಿಗೆ ಸೇರುವ ಸಿನಿಮಾ. ಒಂದಷ್ಟು ನೈಜ ಘಟನೆಗಳನ್ನು ಆಧರಿಸಿ ಅದನ್ನು ಸಿನಿಮಾ ರೂಪದಲ್ಲಿ ತೆರೆಗೆ ತರುವ ಪ್ರಯತ್ನವನ್ನು ನಿರ್ದೇಶಕ ಗುರುರಾಜ ಕುಲಕರ್ಣಿ (ನಾಡಗೌಡ) ಮಾಡಿದ್ದಾರೆ. ಇಂದಿನ ಕಾನೂನು, ನ್ಯಾಯ ವ್ಯವಸ್ಥೆ ಎಲ್ಲದರ ಚಿತ್ರಣವೇ ಈ ಸಿನಿಮಾ. ಈಗಲೇ ಹೆಚ್ಚೇನೂ ಹೇಳಲಾರೆ.''
ನಿಮ್ಮ ಪಾತ್ರಕ್ಕೆ ತಯಾರಿ ಹೇಗಿತ್ತು?: ''ಯಾವುದೇ ಸಿನಿಮಾದ ಪಾತ್ರವಾದರೂ ಅದಕ್ಕೆ ಅದರದ್ದೇ ಆದ ಒಂದಷ್ಟು ತಯಾರಿ ಇದ್ದೇ ಇರುತ್ತದೆ. ಈ ಸಿನಿಮಾದಲ್ಲಿ ನನ್ನ ಪಾತ್ರ ಗಂಭೀರವಾಗಿದೆ. ಮನಸ್ಸಿನ ಭಾವನೆಗಳನ್ನು ಮಾತಿಗಿಂತ ಹೆಚ್ಚಾಗಿ ಭಾವನೆಗಳ ಮೂಲಕವೇ ತೋರಿಸಬೇಕಾಗಿತ್ತು. ಕಡಿಮೆ ಡೈಲಾಗ್ಸ್‌ನಲ್ಲಿ ಹೆಚ್ಚು ಅಭಿನಯಕ್ಕೆ ಸ್ಕೋಪ್ ಇರುವಂಥ ಪಾತ್ರ. ನಿರ್ದೇಶಕ ಗುರುರಾಜ್ ಕುಲಕರ್ಣಿ ಸಿನಿಮಾದ ಪ್ರತೀ ಪಾತ್ರಗಳು, ಸನ್ನಿವೇಶಗಳು ಹೇಗಿರಬೇಕು ಎಂಬುದನ್ನು ಕಲಾವಿದರಿಗೆ ಅರ್ಥೈಸಿ ಅವರಿಂದ ಅಭಿನಯ ಮಾಡಿಸುತ್ತಿದ್ದರು.''
ಇದನ್ನೂ ಓದಿ: ಬಿಗ್ ಬಾಸ್ ಒಟಿಟಿ ಸೀಸನ್ 3 ಟೀಸರ್ ರಿಲೀಸ್: ಕಾರ್ಯಕ್ರಮ ನಡೆಸಿಕೊಡಲಿದ್ದಾರಾ ಅನಿಲ್ ಕಪೂರ್? - Bigg Boss OTT
ನಿರ್ದೇಶಕರು, ಚಿತ್ರತಂಡದ ಬಗ್ಗೆ ಏನು ಹೇಳುವಿರಿ?: "ನಿರ್ದೇಶಕ ಗುರುರಾಜ್ ಕುಲಕರ್ಣಿ ಮೂಲತಃ ಸಾಫ್ಟ್‌ವೇರ್ ಹಿನ್ನೆಲೆಯಿಂದ ಸಿನಿಮಾಗೆ ಬಂದವರು. ಸಾಕಷ್ಟು ವಿಷಯಗಳ ಬಗ್ಗೆ ಅವರಿಗೆ ಆಳವಾದ ಜ್ಞಾನವಿದೆ. ಬಿಗ್ ಕಾಸ್ಟಿಂಗ್, ಬಿಗ್ ಬಜೆಟ್ ಇಟ್ಟುಕೊಂಡು ಅಂದುಕೊಂಡಂತೆ ಪ್ಲ್ಯಾನ್ ಪ್ರಕಾರ ಇಡೀ ಸಿನಿಮಾವನ್ನು ನಿರ್ದೇಶಕರು ಮತ್ತು ಚಿತ್ರತಂಡ ಅಚ್ಚುಕಟ್ಟಾಗಿ ತೆರೆಮೇಲೆ ತರುತ್ತಿದೆ. ಬಹಳ ಪ್ಯಾಶನೇಟ್ ಆಗಿ ಎಲ್ಲರೂ ಸೇರಿ ಒಂದೊಳ್ಳೆ ಸಿನಿಮಾ ಮಾಡಿದ್ದೇವೆ".
ಚಿತ್ರದ ಮೇಲೆ ನಿಮ್ಮ ನಿರೀಕ್ಷೆ?: "ನನ್ನ ಪ್ರಕಾರ ದಿ ಜಡ್ಜ್‌ಮೆಂಟ್ ಮಾಮೂಲಿ ಎಂಟರ್‌ಟೈನ್ಮೆಂಟ್ ಅಥವಾ ಯಾವುದೋ ಒಂದು ವರ್ಗಕ್ಕೆ ಸೇರುವ ಸಿನಿಮಾವಲ್ಲ. ಕನ್ನಡದ ಮಟ್ಟಿಗೆ ಅಪರೂಪದ ಲೀಗಲ್-ಥ್ರಿಲ್ಲರ್ ಶೈಲಿಯ ಚಿತ್ರ. ಇದರಲ್ಲೊಂದು ಒಳ್ಳೆಯ ವಿಷಯವಿದೆ. ಅದನ್ನು ಮನಮುಟ್ಟುವಂತೆ ನಿರ್ದೇಶಕರು ತೆರೆಮೇಲೆ ತರುವ ಪ್ರಯತ್ನ ಮಾಡಿದ್ದಾರೆ. ಸಿನಿಪ್ರಿಯರಿಗೆ ಖಂಡಿತವಾಗಿಯೂ ಇಷ್ಟವಾಗಲಿದೆ."