ಸ್ಯಾಂಡಲ್ವುಡ್ ಹಿರಿಯ ನಟ ದ್ವಾರಕೀಶ್ ಇನ್ನಿಲ್ಲ ಎಂಬ ಸುದ್ದಿಯಿಂದ ಕನ್ನಡ ಚಿತ್ರರಂಗ ತಲ್ಲಣಗೊಂಡಿದೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ದ್ವಾರಕೀಶ್ ಇಂದು ಕೊನೆಯುಸಿರೆಳೆದಿದ್ದಾರೆ.
'ಕರ್ನಾಟಕದ ಕುಳ್ಳ' ಎಂದೇ ಪ್ರೀತಿಯಿಂದ ಕರೆಸಿಕೊಂಡ ದ್ವಾರಕೀಶ್ ತಮ್ಮ ನಟನೆ, ನಿರ್ದೇಶನದಿಂದಲ್ಲದೇ ನಿರ್ಮಾಪಕನಾಗಿ ಇಡೀ ಭಾರತೀಯ ಚಿತ್ರರಂಗದಲ್ಲಿ ತನ್ನದೇ ಛಾಪು ಮೂಡಿಸಿದ್ದಾರೆ. ಇವರು ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ 1942 ಆಗಸ್ಟ್ 19ರಂದು ಬಂಗಲೆ ಶಾಮರಾವ್ ಮತ್ತು ಜಯಮ್ಮ ದಂಪತಿ ಪುತ್ರರಾಗಿ ಜನಿಸಿದರು. ದ್ವಾರಕೀಶ್ ಅಂಬುಜಾ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇವರಿಗೆ ಗಿರಿ ಹಾಗೂ ಯೋಗೇಶ್ ಎಂಬ ಇಬ್ಬರು ಪುತ್ರರಿದ್ದಾರೆ.
ಪತಿ-ಪತ್ನಿ ಒಂದೇ ದಿನಾಂಕದಂದು ನಿಧನ: ಹೌದು ಅಚ್ಚರಿಯೆಂಬಂತೆ ನಟ ದ್ವಾರಕೀಶ್ ಪತ್ನಿ ಅಂಬುಜಾ ಕೂಡ 2021ರ ಏಪ್ರಿಲ್ 16 ರಂದು ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದರು. ಇಂದಿಗೆ ಪತ್ನಿ ಅಂಬುಜಾ ಅವರು ಸಾವನ್ನಪ್ಪಿ 3 ವರ್ಷ ಸಂದಿದ್ದು ಇಂದೇ ಪತಿ ದ್ವಾರಕೀಶ್ ಕೂಡ ಅಗಲಿದ್ದಾರೆ.
ನಟನೆಗೆ ಪದಾರ್ಪಣೆ: ದ್ವಾರಕೀಶ್ ಅವರು 1964ರಲ್ಲಿ ವೀರಸಂಕಲ್ಪ ಚಿತ್ರದಲ್ಲಿ ನಟಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು. 1969ರಲ್ಲಿ ಬಿಡುಗಡೆಯಾದ ಡಾ. ರಾಜ್ ಕುಮಾರ್ ಅಭಿನಯದ 'ಮೇಯರ್ ಮುತ್ತಣ್ಣ' ಚಿತ್ರದಲ್ಲಿ ಹಾಸ್ಯ ನಟನಾಗಿ ಅಭಿನಯಿಸಿದ್ದರು. ಬಳಿಕ ಹಲವು ಚಿತ್ರಗಳಲ್ಲಿ ಹಾಸ್ಯ ಪಾತ್ರಗಳಲ್ಲಿ ತಮ್ಮ ವಿಭಿನ್ನ ನಟನೆಯಿಂದ ಗಮನ ಸೆಳೆದಿದ್ದರು. ದ್ವಾರಕೀಶ್, 1972 ರಲ್ಲಿ 'ಕುಳ್ಳ ಏಜೆಂಟ್ 000' ಸಿನಿಮಾ ಮೂಲಕ ಪೂರ್ಣ ಪ್ರಮಾಣದ ನಾಯಕನ ಪಟ್ಟ ಅಲಂಕರಿಸಿದ್ದರು. ಈ ಚಿತ್ರ ಜನರ ಮೆಚ್ಚುಗೆ ಗಳಿಸಿದ ನಂತರ ಕಿಲಾಡಿ ಕಿಟ್ಟು, ಪೆದ್ದ ಗೆದ್ದ, ಪ್ರಚಂಡ ಕುಳ್ಳ, ಸಿಂಗಾಪುರದಲ್ಲಿ ರಾಜಾ ಕುಳ್ಳ ಹೀಗೆ ಹಲವು ಸಿನಿಮಾಗಳ ಮೂಲಕ ದ್ವಾರಕೀಶ್ ಯಶಸ್ವಿ ನಾಯಕನಾಗಿ ಆಗಿ ಹೊರ ಹೊಮ್ಮಿದರು. ಅದರಲ್ಲೂ ಕನ್ನಡದ ಪ್ರಮುಖ ನಟರಾದ ವಿಷ್ಣುವರ್ಧನ್ ಮತ್ತು ದ್ವಾರಕೀಶ್ ಜೋಡಿ ಕಳ್ಳ-ಕುಳ್ಳ ಜೋಡಿ ಎಂದು ಪ್ರಸಿದ್ಧವಾಗಿತ್ತು.
ನಿರ್ಮಾಣ ಮತ್ತು ನಿರ್ದೇಶನ: 40ಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ಮಿಸಿರುವ ಇವರು 15ಕ್ಕೂ ಹೆಚ್ಚು ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದಾರೆ. ಡಾ.ರಾಜ್‌ಕುಮಾರ್, ವಿಷ್ಣುವರ್ಧನ್‌ರಂತಹ ದಿಗ್ಗಜರು ಸಿನಿಮಾಗಳನ್ನು ನಿರ್ಮಿಸಿದ ಹೆಗ್ಗಳಿಕೆ ದ್ವಾರಕೀಶ್ ಅವರದ್ದು. ಹಾಸ್ಯ ಕಲಾವಿದರಾಗಿ, ನಾಯಕ ನಟನಾಗಿ ನೂರಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕೊಂಚ ಕುಳ್ಳರಾಗಿರುವ ದ್ವಾರಕೀಶ್ ಅವರನ್ನು 'ಕುಳ್ಳ ದ್ವಾರಕೀಶ್' ಎಂದು ಕರೆಯುವುದುಂಟು. ಕನ್ನಡ ಮಾತ್ರವಲ್ಲ ತಮಿಳು, ಹಿಂದಿ ಸಿನಿಮಾಗಳನ್ನೂ ದ್ವಾರಕೀಶ್ ನಿರ್ಮಾಣ ಮಾಡಿ ಸೈ ಎನಿಸಿಕೊಂಡಿದ್ದಾರೆ. ದ್ವಾರಕೀಶ್ ಚಿತ್ರ ನಿರ್ಮಾಣ ಸಂಸ್ಥೆ ಮೂಲಕ ಹಲವು ಸೂಪರ್ ಹಿಟ್ ಸಿನಿಮಾದ ಜೊತೆಗೆ ಸಾಕಷ್ಟು ನಟ, ನಟಿಯರನ್ನು ಬಣ್ಣದ ಲೋಕಕ್ಕೆ ಪರಿಚಯಿಸಿದ್ದಾರೆ.
2022ರಲ್ಲಿ ಡಾಕ್ಟರೇಟ್ ಗೌರವ: ಚಿತ್ರರಂಗದಲ್ಲಿ ಸಲ್ಲಿಸಿದ ಅಪಾರ ಸೇವೆ ಪರಿಗಣಿಸಿ ಬೆಂಗಳೂರು ವಿಶ್ವವಿದ್ಯಾನಿಲಯವು ನಟ ದ್ವಾರಕೀಶ್ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಪುರಸ್ಕರಿಸಿದೆ.
ಸಾವಿನ ವದಂತಿ: 2023ರಲ್ಲಿ ಸಾಮಾಜಿಕ ಜಾಲತಾಣದಲ್ಲಿ ನಟ ದ್ವಾರಕೀಶ್ ಇನ್ನಿಲ್ಲ ಎಂಬ ಸುಳ್ಳು ಸುದ್ದಿ ಹರಿದಾಡಿತ್ತು. ಕೆಲ ಕಿಡಿಗೆಡಿಗಳು ಸೋಷಿಯಲ್ ಮೀಡಿಯಾದಲ್ಲಿ ದ್ವಾರಕೀಶ್ ಫೋಟೋ ಹಾಕಿ ಸಂತಾಪ ಸೂಚಿಸುವ ಮೂಲಕ ವಿಕೃತಿ ಮೆರೆದಿದ್ದರು. ಆ ಸಂದರ್ಭ ಸ್ವತಃ ದ್ವಾರಕೀಶ್ ಅವರೇ ನೀವು ಸಾಕಿದ, ಬೆಳೆಸಿದ ದ್ವಾರಕೀಶ್ ಗಟ್ಟಿಮುಟ್ಟಾಗಿದ್ದೇನೆ ಎಂದು ವಿಡಿಯೋ ಮಾಡಿ ಹರಿಬಿಡುವ ಮೂಲಕ ಸಾವಿನ ಊಹಾಪೋಹಕ್ಕೆ ತೆರೆ ಎಳೆದಿದ್ದರು. ಆದರೆ ಈ ಬಾರಿ ಅವರ ಮಗ ಯೋಗಿ ದ್ವಾರಕೀಶ್ ಅವರೇ ಕರುನಾಡ ಕುಳ್ಳ ಇಹಲೋಕ ತ್ಯಜಿಸಿರುವ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: ಕನ್ನಡದ ಹಿರಿಯ ನಟ ದ್ವಾರಕೀಶ್ ಇನ್ನಿಲ್ಲ - Dwarakish passes away