ಕನ್ನಡ ಚಿತ್ರರಂಗವಲ್ಲದೇ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ರಿಲೀಸ್ ಆಗಲು ಸಜ್ಜುಗೊಂಡಿರುವ ಸಿನಿಮಾ 'ಮಾರ್ಟಿನ್'. ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡಿರುವ 'ಮಾರ್ಟಿನ್' ಚಿತ್ರದ ಟ್ರೈಲರ್ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. 'ಪೊಗರು' ಹುಡುಗನ ಎಂಟ್ರಿಗೆ ಅಭಿಮಾನಿ ಬಳಗದಲ್ಲಿ ದೊಡ್ಡ ಮಟ್ಟದ ನಿರೀಕ್ಷೆ ಇದೆ.
ಚಿತ್ರದ ಬಿಡುಗಡೆಗೆ ಇನ್ನೂ 9 ದಿನಗಳು ಬಾಕಿ ಇರುವಾಗಲೇ 'ಮಾರ್ಟಿನ್' ಚಿತ್ರತಂಡ ಹೊಸ ಅಪ್ಡೇಟ್ ನೀಡಿದೆ. ನಾಯಕ ಧ್ರುವ ಸರ್ಜಾ, ನಟಿ ವೈಭವಿ ಶಾಂಡಿಲ್ಯಾ, ಚಿಕ್ಕಣ್ಣ, ನಿರ್ಮಾಪಕ ಉದಯ್ ಮೆಹ್ತಾ, ಕ್ಯಾಮರಾಮನ್ ಸತ್ಯ ಹೆಗ್ಡೆ, ಕಲಾ ನಿರ್ದೇಶಕ ಮೋಹನ್ ಬಿ.ಕೆರೆ, ನೃತ್ಯ ಸಂಯೋಜಕರಾದ ಮುರಳಿ ಹಾಗೂ ಇಮ್ರಾನ್ ಸರ್ದಾರಿಯಾ ಸೇರಿದಂತೆ ಮಾರ್ಟಿನ್ ತಂಡ ಕೆಲ ವಿಚಾರಗಳನ್ನು ಹಂಚಿಕೊಂಡಿದೆ.
''ನಮ್ಮ ಮಾರ್ಟಿನ್ ಚಿತ್ರದಲ್ಲಿ ಕ್ಯಾಮರಾಮನ್ ಸತ್ಯ ಹೆಗ್ಡೆ, ಡ್ಯಾನ್ಸ್ ಮಾಸ್ಟರ್ಗಳಾದ ಮುರಳಿ, ಇಮ್ರಾನ್ ಸರ್ದಾರಿಯಾ ಕೆಲಸ ಅದ್ಭುತವಾಗಿದೆ. ಸಿನಿಮಾವು ಬಹುಕೋಟಿ ವೆಚ್ಚದಲ್ಲಿ ಆಗುತ್ತಿರುವುದಕ್ಕೆ ನಿರ್ಮಾಪಕ ಉದಯ್ ಸರ್ ಕಾರಣ. ಬಜೆಟ್ ಬಗ್ಗೆ ತಲೆಕೆಡಿಸಿಕೊಳ್ಳದೇ, ತಾನು ಹಾಕಿದ ಹಣ ವಾಪಸ್ ಬರುತ್ತೆ ಎಂಬ ನಂಬಿಕೆಯಲ್ಲಿ ಅದ್ಧೂರಿ ವೆಚ್ಚದಲ್ಲಿ ನಿರ್ಮಾಣ ಮಾಡಿದ್ದಾರೆ. ಅವರಿಗೆ ಒಳ್ಳೆಯದಾಗಬೇಕು'' ಎಂದು ಧ್ರುವ ಸರ್ಜಾ ಹೇಳಿದರು.
ಉತ್ತರ ಕರ್ನಾಟಕದ ಅಭಿಮಾನಿಗಳೇ ಅನ್ನದಾತರು: ''ಮಾರ್ಟಿನ್ ಚಿತ್ರದ ಬಗ್ಗೆ ಒಂದೊಂದು ದಿನ ಒಂದೊಂದು ರೀತಿಯಲ್ಲಿ ಅಪ್ಡೇಟ್ ಕೊಡುತ್ತೇವೆ. ಅ.4ರಂದು ಹೈದರಾಬಾದ್ನಲ್ಲಿ ಹೊಸ ಹಾಡು ರಿಲೀಸ್ ಆಗುತ್ತಿದೆ. ಅ.5ರಂದು ಮಾರ್ಟಿನ್ ಚಿತ್ರದ ಬಗ್ಗೆ ಪ್ರೆಸ್ಮೀಟ್ ಜೊತೆಗೆ ಫ್ಯಾನ್ ಮೀಟ್ ಇರಲಿದೆ. ಯಾಕೆಂದರೆ, ಉತ್ತರ ಕರ್ನಾಟಕದ ಅಭಿಮಾನಿಗಳೇ ನನ್ನ ಅನ್ನದಾತರು. ನನ್ನ ಸಿನಿಮಾಗಳನ್ನು ಹೌಸ್ಫುಲ್ ಮಾಡಿಸಿದ್ದಾರೆ. ಅದಕ್ಕಾಗಿ ಹುಬ್ಬಳ್ಳಿಗೆ ಹೋಗುತ್ತೇವೆ'' ಎಂದರು.
''ಅಕ್ಟೋಬರ್ 6ರಂದು ನನ್ನ ಬರ್ತ್ಡೇ ದಿನ ದಾವಣಗೆರೆಯಲ್ಲಿ ಚಿತ್ರದ ರಿಲೀಸ್ ಇವೆಂಟ್ ಇರಲಿದೆ. ಇದರ ಜೊತೆಗೆ ಒಂದು ಸ್ಪೆಷಲ್ ಹಾಡು ಕೂಡ ಬಿಡುಗಡೆ ಮಾಡಲಾಗುವುದು. ಅ.8ರಂದು ಮುಂಬೈನಲ್ಲಿ ಪ್ರೆಸ್ ಮೀಟ್ ಜೊತೆಗೆ, ಅಲ್ಲಿಯೂ ಒಂದು ಸಾಂಗ್ ರಿಲೀಸ್ ಆಗಲಿದೆ. ಅ.11ರಂದು ಸಿನಿಮಾ ಬಿಡುಗಡೆ ಆಗುತ್ತೆ. ಎಲ್ಲರೂ ಬಂದು ಸಿನಿಮಾ ನೋಡಿ, ಮಾರ್ಟಿನ್ ನಿಮಗೆ ಬೇಸರ ಮಾಡಲ್ಲ. ಯಾಕೆಂದರೆ ನಮ್ಮ ಅರ್ಜುನ್ ಮಾವ ಕಥೆ ಬರೆದಿರುವುದು'' ಎಂದು ಧ್ರುವ ಚಿತ್ರದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು.
ಸಂಭಾವನೆ ಬಗ್ಗೆ ನಿರ್ಮಾಪಕರ ಪ್ರತಿಕ್ರಿಯೆ ಏನು?: ನಿರ್ಮಾಪಕ ಉದಯ್ ಕೆ.ಮೆಹ್ತಾ ಮಾತನಾಡಿ, ''ನಾನು ಮಾರ್ಟಿನ್ ಸಿನಿಮಾ ನೋಡಿದ್ದೇನೆ. ಇದು ಕನ್ನಡದ ಹೆಮ್ಮೆಯ ಚಿತ್ರ ಆಗುತ್ತೆ'' ಎಂದರು. ಇದೇ ವೇಳೆ ಧ್ರುವ ಸರ್ಜಾ ಸಂಭಾವನೆ ಬಗ್ಗೆ ಉತ್ತರಿಸಿದ ಉದಯ್ ಮೆಹ್ತಾ, ''ನಮ್ಮ ಹೀರೋ ಈ ಸಿನಿಮಾಕ್ಕಾಗಿ ನನಗೆ ಸಪೋರ್ಟ್ ಮಾಡುತ್ತಿದ್ದಾರೆ. ಒಬ್ಬ ನಟನಾಗಿ ಹೆಚ್ಚು ಸಂಭಾವನೆ ಕೇಳಬಹುದಿತ್ತು. ಆದರೆ, ಅದನ್ನು ಮಾಡಿಲ್ಲ, ಅದೇ ಅವರಿಗೆ ದೊಡ್ಡ ಸಂಭಾವನೆ'' ಅಂತಾ ಜಾಣ್ಮೆಯ ಉತ್ತರ ನೀಡಿದರು.
ಪತ್ರಿಕಾಗೋಷ್ಠಿಗೆ ನಿರ್ದೇಶಕ ಎ.ಪಿ.ಅರ್ಜುನ್ ಬಾರದ ಬಗ್ಗೆ ಉತ್ತರಿಸಿದ ಉದಯ್ ಮೆಹ್ತಾ, ''ಈ ಹಿಂದೆಯೇ ವಿಎಫ್ಎಕ್ಸ್ ವಿಚಾರದಲ್ಲಿ ಎರಡು ಕೋಟಿ ರೂ. ಗೋಲ್ಮಾಲ್ ಆಗಿರುವ ವಿಚಾರ ನಿಮಗೆಲ್ಲಾ ಗೊತ್ತಿದೆ. ಆದರೀಗ ಒಬ್ಬ ನಿರ್ದೇಶಕ ತನ್ನದೇ ಚಿತ್ರ ಬಿಡುಗಡೆ ಆಗಬಾರದೆಂದು ಕೋರ್ಟ್ಗೆ ಮಧ್ಯಂತರ ಅರ್ಜಿ ಹಾಕುತ್ತಾರೆಂದರೆ ಅವರೆಷ್ಟು ಒಳ್ಳೆಯ ನಿರ್ದೇಶಕ ಅಂತಾ ಅರ್ಥ ಮಾಡಿಕೊಳ್ಳಿ'' ಎಂದು ಅಸಮಾಧಾನ ಹೊರಹಾಕಿದರು.
'ಮಾರ್ಟಿನ್' ಸಾಹಸಮಯ ಚಿತ್ರವಾಗಿದ್ದು, ದೇಶ ಪ್ರೇಮ, ಮುದ್ದಾದ ಲವ್ ಸ್ಟೋರಿ ಹಾಗೂ ಕೌಟುಂಬಿ ಕಥೆಯನ್ನೊಳಗೊಂಡಿದೆ. ಧ್ರುವಗೆ ಜೋಡಿಯಾಗಿ ವೈಭವಿ ಶಾಂಡಿಲ್ಯಾ ನಟಿಸಿದ್ದು, ಅನ್ವೇಶಿ ಜೈನ್, ನಿಕಿತಿನ್ ಧೀರ್ ಸೇರಿದಂತೆ ದೊಡ್ಡ ತಾರಾಬಳಗವಿದೆ. ಬೆಂಗಳೂರು ಹಾಗೂ ಕಾಶ್ಮೀರದ ಸುಂದರ ತಾಣಗಳಲ್ಲಿ ಶೂಟಿಂಗ್ ಮಾಡಲಾಗಿದೆ. ಕಾಶ್ಮೀರದ ಐಸ್‌ವಾರ್ ಸಾಹಸ ದೃಶ್ಯಗಳ ಜೊತೆಗೆ ರೋಮಾಂಚನಕಾರಿ ಸ್ಕೇಟಿಂಗ್ ಆ್ಯಕ್ಷನ್ ಸೀನ್‌ಗಳು ಚಿತ್ರದಲ್ಲಿದೆ. ಕ್ಲೈಮ್ಯಾಕ್ಸ್ ಸನ್ನಿವೇಶಗಳನ್ನು ಸಾಹಸ ನಿರ್ದೇಶಕರಾದ ರವಿವರ್ಮ ಹಾಗೂ ರಾಮ್ ಲಕ್ಷ್ಮಣ್ ಕಂಪೋಸ್ ಮಾಡಿದ್ದಾರೆ.
ಮಣಿಶರ್ಮಾ ಸಂಗೀತ ಸಂಯೋಜನೆ: ತೆಲುಗಿನ ಹೆಸರಾಂತ ಮ್ಯೂಸಿಕ್ ಡೈರೆಕ್ಟರ್ ಮಣಿಶರ್ಮಾ ಸಂಗೀತ ಸಂಯೋಜನೆ ಮಾಡಿದ್ದಾರೆ. ಇನ್ನೊಂದು ವಿಶೇಷತೆಯೆಂದರೆ, ಸಂಗೀತ ನಿರ್ದೇಶಕ ರವಿ ಬಸ್ರೂರ್ ಈ ಚಿತ್ರತಂಡದ ಜೊತೆ ಕೈಜೋಡಿಸಿದ್ದಾರೆ. ಸತ್ಯ ಹೆಗಡೆ ಛಾಯಾಗ್ರಹಣ, ಮಹೇಶ್ ರೆಡ್ಡಿ ಸಂಕಲನ ಚಿತ್ರಕ್ಕಿದೆ. ಇದೇ ಮೊದಲ ಬಾರಿಗೆ ಲೆಕ್ಕಾಚಾರ ಹಾಕಿ ನಿರ್ಮಾಪಕ ಉದಯ್ ಮೆಹ್ತಾ ಪ್ಯಾನ್ ವರ್ಲ್ಡ್ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಸೇರಿದಂತೆ ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಅಕ್ಟೋಬರ್ 11ರಂದು ಮಾರ್ಟಿನ್ ಬಿಡುಗಡೆ ಆಗಲಿದೆ.
ಇದನ್ನೂ ಓದಿ: 'ಮುಂದೆ ಹೇಗೋ ಏನೋ'.. 'ಆರಾಮ್ ಅರವಿಂದ ಸ್ವಾಮಿ' ಮತ್ತೊಂದು ಸಾಂಗ್ ರಿಲೀಸ್ - Aaram Aravinda Swamy