ಬಣ್ಣದ ಲೋಕದಲ್ಲಿ ಯಶಸ್ವಿಗಾಗಿ ನಟ - ನಟಿಯರು ತಮ್ಮ ಹೆಸರು ಬದಲಾವಣೆ ಮಾಡಿಕೊಳ್ಳುವುದು ಹೊಸತೇನಲ್ಲ. ಇದೀಗ ನಟ ಧೀರೇನ್ ರಾಮ್ ಕುಮಾರ್ ಅವರನ್ನು ಧೀರೇನ್ ಆರ್ ರಾಜ್ ಕುಮಾರ್ ಆಗಿ ಕೆ.ಆರ್.ಜಿ. ಸ್ಟುಡಿಯೋಸ್ ಮರು ಪರಿಚಯಿಸಿದೆ. ಧೀರೇನ್ ಅವರ ಹುಟ್ಟುಹಬ್ಬದ ಅಂಗವಾಗಿ ಒಂದು ಹೊಸ ಚಿತ್ರವನ್ನೂ ಕೂಡ ಕೆ.ಆರ್.ಜಿ ಘೋಷಿಸಿದೆ.
ಈ ಹಿಂದೆ ಶಿವ 123 ಚಿತ್ರದಿಂದ ಧೀರೇನ್ ರಾಮ್ ಕುಮಾರ್ ಮಾಸ್ ಲುಕ್ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಆದರೆ, ಈ ಸಿನಿಮಾ ಧೀರೇನ್ ರಾಮ್ ಕುಮಾರ್ ಅಂದುಕೊಂಡಂತೆ ಹೆಸರು ತಂದುಕೊಡಲಿಲ್ಲ. ಹೀಗಾಗಿ ಧೀರೇನ್ ರಾಮ್ ಹೆಸರು ಬದಲಾವಣೆ ಮಾಡಿಕೊಂಡು ಈಗ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.
ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವ ಉದ್ದೇಶವನ್ನು ಹೊಂದಿರುವ ಕೆ.ಆರ್.ಜಿ ಸಂಸ್ಥೆ, ಇದೀಗ ಈ ನಿಟ್ಟಿನಲ್ಲಿ ಮತ್ತೊಂದು ಮಹತ್ತರ ಹೆಜ್ಜೆಯನ್ನು ಇಟ್ಟಿದೆ. ರತ್ನನ್ ಪ್ರಪಂಚ ಮೂಲಕ ರೋಹಿತ್ ಪದಕಿ, ಪೌಡರ್ ಚಿತ್ರದ ಮೂಲಕ ಜನಾರ್ದನ್ ಚಿಕ್ಕಣ್ಣ, ಗುರುದೇವ್ ಹೊಯ್ಸಳ ಚಿತ್ರದ ಮೂಲಕ ವಿಜಯ್ ನಾಗೇಂದ್ರ ಮುಂತಾದ ಪ್ರತಿಭೆಗಳನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ ಕೀರ್ತಿ ಕೆ.ಆರ್.ಜಿ.ಗೆ ಇದ್ದು, ಈ ರೀತಿ ಹೊಸ ಪ್ರತಿಭೆಗಳನ್ನು ಪರಿಚಯಿಸಿ, ಕನ್ನಡ ಚಿತ್ರರಂಗವನ್ನು ಬಹು ದೊಡ್ಡ ಮಟ್ಟಕ್ಕೆ ಕೊಂಡೊಯ್ಯುವ ಗುರಿಯನ್ನು ಸಂಸ್ಥೆ ಹೊಂದಿದೆ.
ಪ್ರಸ್ತುತವಾಗಿ ಬಹು ನಿರೀಕ್ಷಿತ "ಉತ್ತರಕಾಂಡ" ಚಿತ್ರ ಸೆಟ್ಟೇರಿದ್ದು, "ಪೌಡರ್" ಚಿತ್ರದ ಡಬ್ಬಿಂಗ್ ಕಾರ್ಯಗಳ ಸಾಗುತ್ತಿದೆ. ಸದ್ಯದಲ್ಲೇ ಧೀರೇನ್ ಆರ್ ರಾಜ್ ಕುಮಾರ್ ಸಿನಿಮಾ ಶುರುವಾಗಲಿದೆ.
ಇದನ್ನೂ ಓದಿ: ಆರ್. ಚಂದ್ರು ನಿರ್ಮಾಣದ 'ಫಾದರ್' ಸಿನಿಮಾಗೆ ಕರುನಾಡ ಚಕ್ರವರ್ತಿಯ ಸಪೋರ್ಟ್ - Father kannada movie