ಚಾಕೊಲೇಟ್ನಿಂದಲೇ ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಅವರ 6.2 ಅಡಿ ಎತ್ತರದ ಪ್ರತಿಮೆವೊಂದನ್ನು ನಿರ್ಮಿಸುವ ಮೂಲಕ ಅವರ ಆಪ್ತ ಸ್ನೇಹಿತ ವಿನಯ್ ಎಂಬುವರು ಗಮನ ಸೆಳೆದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪ್ರತಿಮೆಯ ಫೋಟೋ ಮತ್ತು ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಹೌದು, ಇತ್ತೀಚೆಗಷ್ಟೇ ದರ್ಶನ್ ಕನ್ನಡ ಚಿತ್ರರಂಗದಲ್ಲಿ 25 ವರ್ಷ ಪೂರೈಸಿದ ಮತ್ತು ತಮ್ಮ ಹುಟ್ಟುಹಬ್ಬದ ಜೊತೆಗೆ 'ಕಾಟೇರ' ಚಿತ್ರ 50 ದಿನ ಯಶಸ್ವಿಗೊಳಿಸಿದ ಹಿನ್ನೆಲೆಯಲ್ಲಿ ರಾಮನಗರದ ರೆಸಾರ್ಟ್ವೊಂದರಲ್ಲಿ ಸಕ್ಸಸ್ ಪಾರ್ಟಿ ಏರ್ಪಡಿಸಲಾಗಿತ್ತು. ಈ ವೇಳೆ ದರ್ಶನ್ ಅವರ ಗೆಳೆಯ ವಿನಯ್ ಚಾಕೊಲೇಟ್ನಿಂದ ದರ್ಶನ್ ಅವರ ಪ್ರತಿಮೆಯನ್ನು ಸಿದ್ಧಪಡಿಸಿದ್ದರು. ಈ ಕಾರ್ಯಕ್ರಮದ ಸವಿ ನೆನಪಿಗಾಗಿ ಅದನ್ನು ಸ್ವತಃ ದರ್ಶನ್ ಅವರಿಗೆ ತೋರಿಸಿ ಸ್ಪೆಷಲ್ ಫೀಲ್ ಕೊಟ್ಟಿದ್ದರು. ಆ ವಿಡಿಯೋ ಮತ್ತು ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಈ ಪ್ರತಿಮೆ 6.2 ಅಡಿ ಎತ್ತರ ಇದ್ದು, ಬರೋಬ್ಬರಿ 250 ಕೆಜಿ ತೂಕದ ಕೇಕ್ ಇದಾಗಿದೆ. ಚಾಕೋಲೆಟ್ ಬಳಸಿಯೇ ಈ ಬೃಹತ್ ಪ್ರತಿಮೆಯನ್ನು ನಿರ್ಮಿಸಲಾಗಿದ್ದು, ಸ್ವತಃ ದಾಸ ದರ್ಶನ್ ಬೆರಗಾಗಿದ್ದಾರೆ. ತಮ್ಮ ಹೈಟ್ ಹಾಗೂ ಸ್ಟೈಲ್ ತಕ್ಕಂತೆ ಇರುವ ಪ್ರತಿಮೆ ಕಂಡು ಅಚ್ಚರಿ ಕೂಡ ವ್ಯಕ್ತಪಡಿಸಿದ್ದಾರೆ. ದರ್ಶನ್ ಅವರ ಅಭಿಮಾನಿಗಳಿಂದಲೂ ಪ್ರತಿಮೆಗೆ ಮೆಚ್ಚುಗೆ ವ್ಯಕ್ತವಾಗಿದೆ. ಸೋಷಿಯಲ್ ಮಿಡಿಯಾದಲ್ಲೂ ಈ ಫೋಟೋ ಮತ್ತು ವಿಡಿಯೋಗಳು ಹರಿದಾಡುತ್ತಿದ್ದು, ನೆಟ್ಟಿಗರು ಸಹ ಥ್ರಿಲ್ ಆಗಿದ್ದಾರೆ.
'ಕಾಟೇರ' ಬಾಕ್ಸ್ ಆಫೀಸ್ನಲ್ಲಿ ಹೊಸ ದಾಖಲೆ ಬರೆದಿದ್ದು ದರ್ಶನ್ 'ಬಾಕ್ಸ್ ಆಫೀಸ್ ಬಾಸ್' ಎಂಬ ಮಾತು ಮತ್ತೆ ರುಜುವಾತಾಗಿದೆ. 2023ರ ಡಿಸೆಂಬರ್ 29ರಂದು ಅದ್ಧೂರಿಯಾಗಿ ತೆರೆಕಂಡ ಈ ಚಿತ್ರ ಎಲ್ಲಾ ಚಿತ್ರಮಂದಿರಗಳಲ್ಲೂ ಹೌಸ್‌ಫುಲ್ ಪ್ರದರ್ಶನ ಕಂಡಿದೆ. ಮಾಸ್ ಎಂಟರ್ಟೈನ್ಮೆಂಟ್ ಸಿನಿಮಾ ಇದಾಗಿದ್ದು, ನಾಲ್ಕೈದು ದಶಕಗಳ ಹಿಂದೆ ಜಾತಿವ್ಯವಸ್ಥೆ, ಅಸ್ಪೃಶ್ಯತೆ, ಮೇಲು-ಕೀಳೆನ್ನುವ ಬೇಧಭಾವ ಎಷ್ಟರ ಮಟ್ಟಿಗೆ ಇತ್ತು ಎಂಬುದನ್ನು ಸಹ ತೋರಿಸಿದೆ. ಇದರ ಜೊತೆಗೆ ಉಳುವವನೇ ಹೊಲದೊಡೆಯ ಕಾಯ್ದೆ ದೇಶದಲ್ಲಿ ಎಂಥ ಬದಲಾವಣೆ ತಂದಿತ್ತು ಎಂಬುದರ ಬಗ್ಗೆಯೂ ಸಿನಿಮಾ ಬೆಳಕು ಚೆಲ್ಲಿದೆ. ಸುಧಾಕರ್ ಛಾಯಾಗ್ರಹಣ, ಮಾಸ್ತಿ ಸಂಭಾಷಣೆ, ಜಡೇಶ್ ಕಥೆ ಬರೆದಿರುವ ಈ ಚಿತ್ರಕ್ಕೆ ರಾಕ್‌ಲೈನ್ ವೆಂಕಟೇಶ್ ಬಂಡವಾಳ ಹಾಕಿದ್ದರು.
ಇದನ್ನೂ ಓದಿ: ₹200 ಕೋಟಿ ಕ್ಲಬ್‌ನತ್ತ 'ಕಾಟೇರ': ದಚ್ಚು 'ಬಾಕ್ಸ್ ಆಫೀಸ್ ಬಾಸ್' ಎಂದ ಫ್ಯಾನ್ಸ್