ಲಂಡನ್: 1997ರಲ್ಲಿ ತೆರೆಕಂಡ ಹಾಲಿವುಡ್ನ ಎವರ್‌ಗ್ರೀನ್ ಸಿನಿಮಾ 'ಟೈಟಾನಿಕ್'ನಲ್ಲಿ ಕ್ಯಾಪ್ಟನ್ ಪಾತ್ರ ಮಾಡಿದ್ದ ಜನಪ್ರಿಯ ಬ್ರಿಟಿಷ್ ನಟ ಬರ್ನಾರ್ಡ್ ಹಿಲ್ (79) ಅವರು ಭಾನುವಾರ (ನಿನ್ನೆ) ನಿಧನ ಹೊಂದಿದ್ದಾರೆ.
ಹಿಲ್ ಅವರು ಟೈಟಾನಿಕ್ ಚಿತ್ರದಲ್ಲಿ 'ಕ್ಯಾಪ್ಟನ್ ಎಡ್ವರ್ಡ್ ಸ್ಮಿತ್' ಎಂಬ ಅಪ್ರತಿಮ ಪಾತ್ರವನ್ನು ಇವರು ನಿರ್ವಹಿಸಿದ್ದರು. ಇದಲ್ಲದೆ, 'ಲಾರ್ಡ್ ಆಫ್ ದಿ ರಿಂಗ್ಸ್' ಚಿತ್ರದ ಮೂಲಕವೂ ಜನಮನ್ನಣೆ ಗಳಿಸಿದ್ದರು. ಚಲನಚಿತ್ರಗಳಲ್ಲಿ ಮಾತ್ರವಲ್ಲದೆ ಟಿವಿ ಶೋಗಳು ಮತ್ತು ರಂಗಭೂಮಿಯಲ್ಲಿಯೂ ಅವಿರತ ಕೆಲಸ ಮಾಡಿ ಪ್ರೇಕ್ಷಕರ ಹೃದಯದಲ್ಲಿ ಸ್ಥಾನ ಪಡೆದಿದ್ದಾರೆ.
11 ಆಸ್ಕರ್ ಪ್ರಶಸ್ತಿಗಳನ್ನು ಪಡೆದ ಎರಡು ಚಿತ್ರಗಳಲ್ಲಿ ನಟಿಸಿರುವ ಏಕೈಕ ನಟ ಎಂಬ ಹೆಗ್ಗಳಿಕೆಯೂ ಹಿಲ್ ಅವರದ್ದು. ಟೈಟಾನಿಕ್ ಮತ್ತು ಲಾರ್ಡ್ ಆಫ್ ದಿ ರಿಂಗ್ಸ್ ಚಿತ್ರಗಳು ತಲಾ 11 ಆಸ್ಕರ್ ಪ್ರಶಸ್ತಿಗಳನ್ನು ಗೆದ್ದಿದ್ದವು.
ಹಿಲ್ ವೃತ್ತಿಜೀವನ: ಹಿಲ್ ತಮ್ಮ ಸಿನಿ ಜರ್ನಿಯಲ್ಲಿ ಅನೇಕ ಚಲನಚಿತ್ರಗಳು ಮತ್ತು ವೆಬ್ ಸಿರೀಸ್‌ಗಳಲ್ಲಿ ಬಣ್ಣ ಹಚ್ಚಿದ್ದಾರೆ. 1976ರಲ್ಲಿ ಟ್ರಯಲ್ ಬೈ ಕಾಂಬ್ಯಾಟ್ ಚಿತ್ರದೊಂದಿಗೆ ತಮ್ಮ ಸಿನಿಮಾ ಪಯಣ ಆರಂಭಿಸಿದ್ದರು. ಇದರ ನಂತರ ಗಾಂಧಿ, ದಿ ಬೌಂಟಿ, ದಿ ಚೈನ್, ಮೌಂಟೇನ್ಸ್ ಆಫ್ ದಿ ಮೂನ್, ಟೈಟಾನಿಕ್, ದಿ ಸ್ಕಾರ್ಪಿಯನ್ ಕಿಂಗ್, ಲಾರ್ಡ್ ಆಫ್ ದಿ ರಿಂಗ್ಸ್, ನಾರ್ತ್ ವರ್ಸಸ್ ಸೌತ್, 'ದಿ ಸ್ಕಾರ್ಪಿಯನ್ ಕಿಂಗ್', 'ದಿ ಬಾಯ್ಸ್ ಫ್ರಮ್ ಕೌಂಟಿ ಕ್ಲೇರ್', 'ಗೋಥಿಕಾ', 'ವಿಂಬಲ್ಡನ್', 'ದಿ ಲೀಗ್ ಆಫ್ ಜೆಂಟಲ್‌ಮೆನ್ ಅಪೋಕ್ಯಾಲಿಪ್ಸ್', 'ಜಾಯ್ ಡಿವಿಷನ್', 'ಸೇವ್ ಏಂಜೆಲ್ ಹೋಪ್', 'ಎಕ್ಸೋಡಸ್' ಮತ್ತು 'ವಾಲ್ಕಿರೀ' ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ. ಬಾಯ್ಸ್ ಫ್ರಮ್ ದಿ ಬ್ಲ್ಯಾಕ್ ಸ್ಟಫ್, ಸನ್‌ರೈಸ್ ಮತ್ತು ವುಲ್ಫ್ ಹಾಲ್‌ನಂತಹ ವೆಬ್ ಸಿರೀಸ್ಗೆ ಇವರು ಹೆಸರುವಾಸಿಯಾಗಿದ್ದಾರೆ.
ಇವರಿಗೆ ಸಂದ ಪ್ರಶಸ್ತಿಗಳು: ತಮ್ಮ ಅತ್ಯುತ್ತಮ ಅಭಿನಯಕ್ಕಾಗಿ ಹಿಲ್ ಅವರು BAFTA ಪ್ರಶಸ್ತಿ, ಬ್ರಾಡ್ಕಾಸ್ಟಿಂಗ್ ಪ್ರೆಸ್ ಗಿಲ್ಡ್ ಪ್ರಶಸ್ತಿ ಮತ್ತು ಅಂತಾರಾಷ್ಟ್ರೀಯ ಎಮ್ಮಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಆದಾಗ್ಯೂ, 2004ರಲ್ಲಿ ಮೋಷನ್ ಪಿಕ್ಚರ್‌ನಲ್ಲಿ (ದಿ ಲಾರ್ಡ್ ಆಫ್ ದಿ ರಿಂಗ್ಸ್: ದಿ ರಿಟರ್ನ್ ಆಫ್ ದಿ ಕಿಂಗ್) ಅತ್ಯುತ್ತಮ ಅಭಿನಯಕ್ಕಾಗಿ ಸ್ಕ್ರೀನ್ ಆಕ್ಟರ್ಸ್ ಗಿಲ್ಡ್ ಪ್ರಶಸ್ತಿ ಪಡೆದಿದ್ದರು.
ಇದನ್ನೂ ಓದಿ: 'ಪುಷ್ಪ 2' ಮೊದಲ ಹಾಡಿಗೆ ಭರ್ಜರಿ ರೆಸ್ಪಾನ್ಸ್: ಮುಂದಿನ ತಿಂಗಳು ಎರಡನೇ ಹಾಡು ಅನಾವರಣ - Pushpa 2 Song