ಶಾರುಖ್ ಖಾನ್, ಸಲ್ಮಾನ್ ಖಾನ್, ಅಮೀರ್ ಖಾನ್ ಭಾರತೀಯ ಚಿತ್ರರಂಗದ ಬಹುಬೇಡಿಕೆ ಕಲಾವಿದರು. ಮೂವರೂ ಕೂಡ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಬಾಲಿವುಡ್ ಖಾನ್ಗಳನ್ನು ಒಂದೇ ಸಿನಿಮಾದಲ್ಲಿ ನೋಡಬೇಕು ಎನ್ನುವುದು ಅಪಾರ ಸಂಖ್ಯೆಯ ಅಭಿಮಾನಿಗಳ ಕನಸು. ಅದರಂತೆ ಇತ್ತೀಚೆಗೆ ಅಮೀರ್ ಖಾನ್ ಅವರು ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ಜೊತೆ ನಟಿಸುವ ಸಾಧ್ಯತೆ ಬಗ್ಗೆ ಸುಳಿವು ಬಿಟ್ಟುಕೊಟ್ಟಿದ್ದಾರೆ.
ನಿನ್ನೆ ಅಮೀರ್ 59ನೇ ಜನ್ಮದಿನಾಚರಿಸಿಕೊಂಡರು. ಇನ್‌ಸ್ಟಾಗ್ರಾಮ್ ಲೈವ್ ಸೆಷನ್‌ನಲ್ಲಿ, ಮೂವರೂ (ಖಾನ್ಸ್) ತಮ್ಮ ಅಭಿಮಾನಿಗಳಿಗಾಗಿ ಒಟ್ಟಿಗೆ ಕೆಲಸ ಮಾಡುವ ಬಗ್ಗೆ ಚರ್ಚಿಸಿರುವುದಾಗಿ ಅಮೀರ್ ಬಹಿರಂಗಪಡಿಸಿದರು. 'ಅಭಿಮಾನಿಗಳಿಗಾಗಿ ಇದು ಮಾಡಲೇಬೇಕಾದ ಕೆಲಸ' ಎಂದು ಸಲ್ಮಾನ್, ಶಾರುಖ್, ಅಮೀರ್ ನಂಬಿದ್ದಾರೆ.
ಇನ್‌ಸ್ಟಾಗ್ರಾಮ್ ಲೈವ್ ಸೆಷನ್‌ನಲ್ಲಿ, ಎಸ್‌ಆರ್‌ಕೆ ಮತ್ತು ಸಲ್ಮಾನ್‌ನೊಂದಿಗೆ ಸ್ಕ್ರೀನ್ ಶೇರ್ ಮಾಡೋದನ್ನು ಅಭಿಮಾನಿಗಳು ನೋಡಬಹುದೇ? ಎಂಬ ಪ್ರಶ್ನೆ ಎದುರಾಯಿತು. ಅಮೀರ್ ಕೂಡ ಈ ಐಡಿಯಾ ಬಗ್ಗೆ ತಮ್ಮ ಉತ್ಸಾಹ ವ್ಯಕ್ತಪಡಿಸಿದರು. ಈ ಬಗ್ಗೆ ಮೊದಲೇ ಮಾತನಾಡಿದ್ದೇವೆ ಮತ್ತು ಸಿನಿಮಾ ಮಾಡಲು ಇದು ಸಮಯ ಎಂದು ಭಾವಿಸಿರೋದಾಗಿ ಬಹಿರಂಗಪಡಿಸಿದರು.
"ನಾವು ಒಟ್ಟಿಗೆ ಸಿನಿಮಾವೊಂದರಲ್ಲಿ ಕೆಲಸ ಮಾಡಬೇಕೆಂದು ನಾನು ಕೂಡ ಯೋಚಿಸಿದ್ದೇನೆ. ನಾನು, ಸಲ್ಮಾನ್ ಮತ್ತು ಶಾರುಖ್ ಮೂವರೂ ಒಟ್ಟಿಗೆ ಇದ್ದಾಗ ಈ ಬಗ್ಗೆ ಮಾತನಾಡಿದ್ದೇವೆ. ನಮ್ಮ ವೃತ್ತಿಜೀವನದಲ್ಲಿ ಒಟ್ಟಿಗೆ ಚಿತ್ರದಲ್ಲಿ ಕೆಲಸ ಮಾಡಲು ಪ್ರಯತ್ನಿಸಬೇಕೆಂದು ಚರ್ಚೆ ನಡೆಸಿದ್ದೇವೆ. ನಮಗಾಗಿ ಮತ್ತು ನಮ್ಮ ಪ್ರೇಕ್ಷಕರಿಗಾಗಿ ಸಿನಿಮಾವೊಂದು ಬರಬೇಕಿದೆ. ಮುಂದೆ ಏನಾಗುತ್ತದೆ ಎಂಬುದನ್ನು ನೋಡೋಣ. ನಮಗೆ ಒಟ್ಟಿಗೆ ಸಿನಿಮಾ ಮಾಡಲು ಒಳ್ಳೆಯ ಕಥೆ ಸಿಗಲಿದೆ ಎಂಬ ವಿಶ್ವಾಸವಿದೆ. ಮೂವರೂ ಒಟ್ಟಿಗೆ ಕೆಲಸ ಮಾಡಲು ಪರಸ್ಪರ ಉತ್ಸುಕರಾಗಿದ್ದೇವೆ. ಎಲ್ಲದಕ್ಕೂ ಇದು ಸೂಕ್ತ ಸಮಯ" ಎಂದು ನಟ ಅಮೀರ್ ಖಾನ್ ಲೈವ್ ಚಾಟ್‌ನಲ್ಲಿ ತಿಳಿಸಿದರು.
30 ವರ್ಷಗಳಿಂದ ಬಾಲಿವುಡ್ನ ಭಾಗವಾಗಿದ್ದರೂ ಕೂಡ ಈ ಮೂವರು ಸಿನಿಮಾದಲ್ಲಿ ಒಟ್ಟಿಗೆ ನಟಿಸಿಲ್ಲ. ರಾಜ್‌ಕುಮಾರ್ ಸಂತೋಷಿ ನಿರ್ದೇಶನದ 'ಅಂದಾಜ್ ಅಪ್ನಾ ಅಪ್ನಾ' ಸಿನಿಮಾದಲ್ಲಿ ಅಮೀರ್ ಮತ್ತು ಸಲ್ಮಾನ್ ಒಟ್ಟಿಗೆ ಕೆಲಸ ಮಾಡಿದ್ದಾರೆ. ಈ ಬಗ್ಗೆಯೂ ಅಮೀರ್ ಅಪ್ಡೇಟ್ ಕೊಟ್ಟಿದ್ದಾರೆ. ರಾಜ್‌ಕುಮಾರ್ ಸಂತೋಷಿ ಈ ಕಾಮಿಡಿ ಸಿನಿಮಾದ ಸೀಕ್ವೆಲ್ ಸ್ಕ್ರಿಪ್ಟ್ನಲ್ಲಿ ಬ್ಯುಸಿಯಾಗಿದ್ದಾರೆಂದು ತಿಳಿಸಿದ್ದಾರೆ.
ಇದನ್ನೂ ಓದಿ: ಸಿದ್ಧಾರ್ಥ್ ಮಲ್ಹೋತ್ರಾ ನಟನೆಯ 'ಯೋಧ' ತೆರೆಗೆ: ಕಿಯಾರಾ ಅಡ್ವಾಣಿ ಸೇರಿ ಪ್ರೇಕ್ಷಕರ ಪ್ರತಿಕ್ರಿಯೆ ಹೀಗಿದೆ
1994ರಲ್ಲಿ ಬಿಡುಗಡೆಯಾದ ಅಂದಾಜ್ ಅಪ್ನಾ ಅಪ್ನಾ ಸಿನಿಮಾ ಆರಂಭದಲ್ಲಿ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಪ್ರದರ್ಶನ ನೀಡಲಿಲ್ಲ. ನಂತರದ ದಿನಗಳಲ್ಲಿ ಜನಪ್ರಿಯವಾಯಿತು. ಭಾರತೀಯ ಚಿತ್ರರಂಗದಲ್ಲಿ ಹೆಚ್ಚು ಮೆಚ್ಚುಗೆಗೊಳಗಾದ ಕಾಮಿಡಿ ಸಿನಿಮಾಗಳಲ್ಲಿ ಒಂದಾಗಿದೆ. ಮುಂದುವರಿದ ಭಾಗದ ಬಗ್ಗೆ ಉತ್ಸಾಹ ವ್ಯಕ್ತಪಡಿಸಿದ ಅಮೀರ್, ಸೀಕ್ವೆಲ್ ಇನ್ನೂ ಆರಂಭಿಕ ಹಂತದಲ್ಲಿದೆಯೆಂದು ತಿಳಿಸಿದರು.
ಇದನ್ನೂ ಓದಿ: RC16: ರಾಮ್ ಚರಣ್ ಸಿನಿಮಾ ಸೆಟ್ಟೇರೋದು ಯಾವಾಗ? ಡೀಟೆಲ್ಸ್ ಇಲ್ಲಿದೆ
ಅಮೀರ್ ಖಾನ್ ಕೊನೆಯದಾಗಿ 2022ರಲ್ಲಿ ಬಿಡುಗಡೆಯಾದ ಲಾಲ್ ಸಿಂಗ್ ಚಡ್ಡಾ ಸಿನಿಮಾದಲ್ಲಿ ಕಾಣಿಸಿಕೊಂಡರು. ನಟನೆಯಿಂದ ಕೊಂಚ ವಿರಾಮ ಪಡೆದು, ಕುಟುಂಬಕ್ಕೆ ಸಮಯ ಮೀಸಲಿಟ್ಟಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಅದ್ಧೂರಿಯಾಗಿ ಮಗಳ ಮದುವೆ ಮಾಡಿಕೊಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಸಿತಾರೆ ಜಮೀನ್ ಪರ್ ಸಿನಿಮಾದೊಂದಿಗೆ ಪ್ರೇಕ್ಷರೆದುರು ಬರಲಿದ್ದಾರೆ. ಇದೇ ಸಾಲಿನ ಕ್ರಿಸ್ಮಸ್ ಸಂದರ್ಭ ಸಿನಿಮಾ ತೆರೆಗಪ್ಪಳಿಸಲಿದೆ.