ಸಂಗೀತ ಲೋಕದ ನಾದಬ್ರಹ್ಮ ಖ್ಯಾತಿಯ ಹಂಸಲೇಖ ಅವರು ಜೈನ ಸಮುದಾಯದ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಎನ್ನುವ ಆರೋಪವಿದೆ. ಖಾಸಗಿ ಕಾರ್ಯಕ್ರಮವೊಂದರಲ್ಲಿ ನೀಡಿರುವ ಹೇಳಿಕೆಗೀಗ ಸಂಗೀತ ನಿರ್ದೇಶಕರು ವಿಡಿಯೋ ಸಂದೇಶ ಮತ್ತು ಪತ್ರದ ಮೂಲಕ ಕ್ಷಮೆಯಾಚಿಸಿದ್ದಾರೆ.
ಜೈನರ ಕುರಿತಾಗಿ ಬಳಸಿದ ಪದಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ದೊಡ್ಡ ಧರ್ಮವೊಂದರ ಬಗ್ಗೆ ಹಂಸಲೇಖ ಅವರು ಲಘುವಾಗಿ ಮಾತನಾಡಿದ್ದು ಸರಿಯಲ್ಲ. ಕ್ಷಮೆ ಕೇಳಲೇಬೇಕು ಎಂದು ಹಲವರು ಪಟ್ಟು ಹಿಡಿದಿದ್ದರು. ಅದರಂತೆ ಹಂಸಲೇಖ ವಿಡಿಯೋ ಸಂದೇಶ ಹಾಗೂ ಪತ್ರದ ಮೂಲಕ ಕ್ಷಮೆಯಾಚಿಸಿದ್ದಾರೆ.
''ಮಹನೀಯರೇ, ದಯಮಾಡಿ ಕ್ಷಮಿಸಿ. ನಾನು ಯಾವತ್ತೂ ಅದರ ವಿರುದ್ಧ ಮಾತನಾಡಬೇಕು ಎಂದು ಯೋಚನೆ ಮಾಡಿದವನಲ್ಲ. ಆ ಪದವನ್ನು ಬಳಕೆ ಮಾಡಬೇಕು ಎಂದು ಕೂಡ ನಾನು ಅಂದುಕೊಂಡಿಲ್ಲ. ನಾನಿದ್ದ ಜಾಗದಲ್ಲಿ ಎಲ್ಲರೂ ಎಳೆದಾಡುತ್ತಿದ್ದರು. ಅವರಿಗೆ ಗದರೋಕೆ ಹೋಗಿ ಈಕಡೆ ಬಂದೆ. ಆ ಮಾತು ಬಂದಿದ್ದು ತಪ್ಪಾಯ್ತು. ಇನ್ನು ಎಂದಿಗೂ ಆ ಮಾತನ್ನು ಆಡಲ್ಲ''.
''ನಾನು ಪಂಪನ ದಾಸಾನು ದಾಸ. ಕನ್ನಡ ಕಟ್ಟಿದ ಆ ಮಹಾನ್ ವ್ಯಕ್ತಿಯ ಸೇವೆಗೆ ನಿಂತಿದ್ದೇನೆ. ಇದನ್ನು ದಯಮಾಡಿ ಬೆಳೆಸಬೇಡಿ. ಪತ್ರದಲ್ಲಿ ಬರೆದು ಪೋಸ್ಟ್ ಮಾಡಿ ಕ್ಷಮೆ ಕೇಳಿದ್ದೇನೆ. ಅದೇ ನನ್ನ ಧ್ವನಿ ಎಂದುಕೊಳ್ಳಿ'' ಎಂದು ಹಂಸಲೇಖ ಕ್ಷಮೆ ಕೋರಿದ್ದಾರೆ.
ಪ್ರತ್ರದಲ್ಲೇನಿದೆ?
ನನ್ನ ಪಂಪನಾಣೆ. ನನ್ನ ಪ್ ಬಳಕೆ ಉದ್ದೇಶ ಪೂರಿತವಲ್ಲ. ಗಲಾಟೆ, ಒತ್ತಡದ ಆ ಕ್ಯಾಮರಾಗಳ ಗುಂಪಿನಲ್ಲಿ ಆ ಮಾತು ತೂರಿ ಬಂದಿದೆ. ತ್ಯಾಗ ಮತ್ತು ಸಹನೆಯ ಸಂಸ್ಕೃತಿಯನ್ನು ಜಗತ್ತಿಗೆ ನೀಡಿದ ಜೈನ ಸಮುದಾಯಕ್ಕೆ ಶಿರಬಾಗಿ ಕ್ಷಮೆ ಕೋರುತ್ತೇನೆ.
ದಯಮಾಡಿ, ನಾನು ದುಡುಕಿ ಮಾತನಾಡಿದ ಆ ಪದವನ್ನು ಡಿಲೀಟ್ ಮಾಡಿ. ಕನ್ನಡದ ಕಾವ್ಯಪರಂಪರೆಯ ಬೇರು ಕಾಂಡಗಳಾಗಿರುವ ಜೈನಕವಿ ಮುನಿ ಪರಂಪರೆಗೆ ಆಗಿರುವ ಗಾಯವನ್ನು ವಾಸಿಮಾಡಲು ಈ ಮೂಲಕ ಕೋರುತ್ತಿದ್ದೇನೆ.
ಆಡು ಮಾತುಗಳನ್ನು COIN ಮಾಡುವ ನನ್ನಂತ ಸಿನಿಮಾ ರೈಟರ್ಗಳಿಗೆ ಇದು ಶಾಸ್ತಿ ಮತ್ತು ಶಾಪ ಎಂದು ನಾನು ಭಾವಿಸಿದ್ದೇನೆ.
ಆ ಮಾತು ನನ್ನ ಬಾಯಿಂದ ಹೊರಟಿದ್ದು, ಹಿನ್ನೆಲೆ ಹೀಗಿದೆ. ಆ ಕಾರ್ಯಕ್ರಮ ಮುಗಿಸಿ ಹೊರ ಬರುವಾಗ ಚಾನಲ್ನವರು ಇಂಡ್ಯುವಿಶುವಲ್ ಬೈಟ್ಗಳಿಗಾಗಿ ಕೈ ಹಿಡಿದು ಎಳೆದಾಡಿದರು. ಆಗ ಸಿಟ್ಟು ತಡೆದುಕೊಂಡು ಹೊರಬಂದೆ.
ನನ್ನ ಸಹಾಯಕ ನನ್ನನ್ನು ಹೊಗಳಿದ - ''ಸಿಟ್ಟು ತಡೆಯಲಾಗಲಿಲ್ಲ. ಆದರೂ ತಡೆದುಕೊಂಡಿದ್ದು ಒಳ್ಳೆದಾಯ್ತು ಸರ್'' ಎಂದ.
ಆಗ ನಾನು ಆತನಿಗೆ, ''ಸಿಟ್ಟು, ಹೀಗಿ ಬರೋ ಬುಲೆಟ್'' ಎಂದು ನಗಿಸಿದೆ. ನಾನು ಇನ್ನೂ ಮುಂದುವರೆದು, 'ಸಿಟ್ಟು ಒಂದು ಬುಲ್ಶಿಟ್ಟು ಎಂದೆ'. ಆದರೆ ಆ ಪದ ಅಲ್ಲಿ ಬರಬಾರದಿತ್ತು. ಇಷ್ಟೇ ನಡೆದಿದ್ದು. - ಇವು ಹಂಸಲೇಖ ಅವರ ಕ್ಷಮಾಪಣಾ ಪತ್ರದಲ್ಲಿರುವ ವಿಚಾರಗಳು.