ನವದೆಹಲಿ: ಆನ್‌ಲೈನ್ ಆಹಾರ ಡೆಲಿವರಿ ವೇದಿಕೆಗಳಾದ ಜೊಮಾಟೊ ಮತ್ತು ಸ್ವಿಗ್ಗಿ ಹಬ್ಬದ ಸೀಸನ್ ಹಿನ್ನೆಲೆಯಲ್ಲಿ ಕೆಲವು ನಗರಗಳಲ್ಲಿ ಪ್ಲಾಟ್‌ಫಾರ್ಮ್ ಶುಲ್ಕವನ್ನು ಮತ್ತೆ ಹೆಚ್ಚಿಸಿವೆ. ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ವಿವಿಧ ನಗರಗಳಲ್ಲಿ ಪ್ಲಾಟ್‌ಫಾರ್ಮ್ ಶುಲ್ಕವನ್ನು 10 ರೂಪಾಯಿ ಏರಿಸಲಾಗಿದೆ.
ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಜೊಮಾಟೊ, ಹಬ್ಬದ ಸೀಸನ್ ಕಾರಣ ಆರ್ಡರ್ಗಳು ಹೆಚ್ಚಿವೆ. ಹೀಗಾಗಿ ಪ್ರತಿ ಆರ್ಡರ್ಗೆ 10 ರೂಪಾಯಿ ಹೆಚ್ಚಳ ಮಾಡಲಾಗಿದೆ. ನಿರ್ದಿಷ್ಟ ನಗರಗಳಲ್ಲಿ ಬುಧವಾರದಿಂದಲೇ ಈ ದರ ಜಾರಿಯಾಗಿದೆ. ಇದು 'ಫೆಸ್ಟಿವ್ ಸೀಸನ್ ಪ್ಲಾಟ್‌ಫಾರ್ಮ್ ಫೀ' ಆಗಿದೆ ಎಂದು ತಿಳಿಸಿದೆ. ಈಗಾಗಲೇ ದೆಹಲಿಯಲ್ಲಿ ಆರ್ಡರ್ಗೆ 10 ರೂಪಾಯಿ ಹೆಚ್ಚುವರಿ ದರ ವಿಧಿಸಲಾಗುತ್ತಿದೆ.
ಪ್ಲಾಟ್‌ಫಾರ್ಮ್ ಶುಲ್ಕದಲ್ಲಿನ ಬದಲಾವಣೆಗಳು ವ್ಯವಹಾರದಲ್ಲಿ ಸಹಜ. ಕಾಲಕಾಲಕ್ಕೆ ಆರ್ಡರ್ ದರ ಏರಿಕೆ ಮಾಡಲಾಗುತ್ತದೆ. ಆದರೆ, ಇದು ನಗರದಿಂದ ನಗರಕ್ಕೆ ವ್ಯತ್ಯಾಸ ಇರಲಿದೆ ಎಂದು ಜೊಮಾಟೊ ತಿಳಿಸಿದೆ. ಆದರೆ, ಯಾವ ನಗರಗಳಲ್ಲಿ ಮತ್ತು ಎಷ್ಟು ಪ್ರಮಾಣದಲ್ಲಿ ಪ್ಲಾಟ್‌ಫಾರ್ಮ್ ಶುಲ್ಕವನ್ನು ಹೆಚ್ಚಿಸಿದೆ ಎಂಬುದನ್ನು ತಿಳಿಸಿಲ್ಲ.
ಅಂತೆಯೇ, ಸ್ವಿಗ್ಗಿ ಕೂಡ ತನ್ನ ಪ್ಲಾಟ್‌ಫಾರ್ಮ್ ಶುಲ್ಕವನ್ನು 10 ರೂಪಾಯಿಗೆ ಏರಿಸಿದೆ. ಆದರೆ ಈ ಬಗ್ಗೆ ಕಂಪನಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಜುಲೈ 15ರಂದು ಅಂದರೆ 10 ದಿನಗಳ ಹಿಂದೆ, ಜೊಮಾಟೊ ಮತ್ತು ಸ್ವಿಗ್ಗಿ ಪ್ಲಾಟ್‌ಫಾರ್ಮ್ ಶುಲ್ಕವನ್ನು 6 ರೂಪಾಯಿಗೆ ಹೆಚ್ಚಿಸಿದ್ದವು. ಈ ಹಿಂದೆ ಪ್ರತಿ ಆರ್ಡರ್ಗೆ 5 ರೂಪಾಯಿ ಇದ್ದ ಪ್ಲಾಟ್‌ಫಾರ್ಮ್ ಫೀಯನ್ನು 6 ರೂಪಾಯಿಗೆ ಹೆಚ್ಚಿಸಿತ್ತು.
ವಿತರಣಾ ಶುಲ್ಕ, ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ), ರೆಸ್ಟೋರೆಂಟ್ ಶುಲ್ಕಗಳು ಮತ್ತು ನಿರ್ವಹಣಾ ಶುಲ್ಕಗಳನ್ನು ಹೊರತುಪಡಿಸಿ ಪ್ಲಾಟ್‌ಫಾರ್ಮ್ ಫೀಯನ್ನು ಆಹಾರ ವಿತರಣಾ ಸಂಸ್ಥೆಗಳು ಪ್ರತ್ಯೇಕವಾಗಿ ವಿಧಿಸುತ್ತವೆ.