ನವದೆಹಲಿ: ಪ್ರಖ್ಯಾತ ಮೊಬೈಲ್ ಕಾಲರ್ ಐಡೆಂಟಿಫಿಕೇಶನ್ ಆ್ಯಪ್ ಟ್ರೂಕಾಲರ್ನ (truecaller) ಈ ವರ್ಷದ ಮೊದಲ ತ್ರೈಮಾಸಿಕದ ನಿವ್ವಳ ಆದಾಯ ಶೇ 8ರಷ್ಟು ಏರಿಕೆಯಾಗಿದೆ. ಕ್ಯಾಲೆಂಡರ್ ವರ್ಷದ ಮೊದಲ ತ್ರೈಮಾಸಿಕದಲ್ಲಿ ಭಾರತದಲ್ಲಿ ತನ್ನ ನಿವ್ವಳ ಮಾರಾಟದಲ್ಲಿ ಶೇಕಡಾ 8ರಷ್ಟು ಹೆಚ್ಚಳವಾಗಿದೆ ಎಂದು ಕಂಪನಿ ಮಂಗಳವಾರ ವರದಿ ಮಾಡಿದೆ.
ಟ್ರೂಕಾಲರ್ ಫಾರ್ ಬಿಸಿನೆಸ್, ಪ್ರೀಮಿಯಂ ಚಂದಾದಾರಿಕೆ ಮತ್ತು ಜಾಹೀರಾತು ಈ ಮೂರೂ ವಿಭಾಗಗಳಲ್ಲಿನ ಆದಾಯ ಬೆಳವಣಿಗೆಯಾಗಿದ್ದು, ಭಾರತವು ಟ್ರೂಕಾಲರ್ಗೆ ಅತಿದೊಡ್ಡ ಮಾರುಕಟ್ಟೆಗಳಲ್ಲಿ ಒಂದಾಗಿದೆ ಎಂದು ಕಂಪನಿ ಹೇಳಿಕೆಯಲ್ಲಿ ತಿಳಿಸಿದೆ.
ಭಾರತದಲ್ಲಿ ನಿವ್ವಳ ಮಾರಾಟವು ಮೊದಲ ತ್ರೈಮಾಸಿಕದಲ್ಲಿ (Q1 FY24) 316.8 ಮಿಲಿಯನ್ ಸ್ವೀಡಿಷ್ ಕ್ರೋನಾ (ಎಸ್ಇಕೆ)ಗೆ ತಲುಪಿದೆ. ಹಿಂದಿನ ವರ್ಷದ ಇದೇ ತ್ರೈಮಾಸಿಕದಲ್ಲಿ ಕಂಪನಿಯು 292.2 ಮಿಲಿಯನ್ ಸ್ವೀಡಿಷ್ ಕ್ರೋನಾಗಳಷ್ಟು ನಿವ್ವಳ ಮಾರಾಟ ದಾಖಲಿಸಿತ್ತು.
ಜಾಗತಿಕವಾಗಿ ಟ್ರೂಕಾಲರ್ನ ಸಕ್ರಿಯ ಬಳಕೆದಾರರ ಸರಾಸರಿ ಸಂಖ್ಯೆ (ಎಂಎಯು) 39 ಮಿಲಿಯನ್ ಹೆಚ್ಚಾಗಿದ್ದು, ಸರಿಸುಮಾರು 383.4 ಮಿಲಿಯನ್ಗೆ ತಲುಪಿದೆ. ಇದರ ಪೈಕಿ 272.6 ಮಿಲಿಯನ್ ಮಾಸಿಕ ಸಕ್ರಿಯ ಬಳಕೆದಾರರು ಭಾರತದಲ್ಲಿಯೇ ಇದ್ದಾರೆ ಎಂದು ಕಂಪನಿ ಮಾಹಿತಿ ನೀಡಿದೆ.
ದೈನಂದಿನ ಸಕ್ರಿಯ ಬಳಕೆದಾರರ ಸಂಖ್ಯೆ (ಡಿಎಯು) 314 ಮಿಲಿಯನ್ಗೆ ತಲುಪಿದ್ದು, ಇದರಲ್ಲಿ 234.4 ಮಿಲಿಯನ್ (23.4 ಕೋಟಿ) ದೈನಂದಿನ ಸಕ್ರಿಯ ಬಳಕೆದಾರರು ಭಾರತದಲ್ಲಿದ್ದಾರೆ.
2023 ರ ಮೊದಲ ತ್ರೈಮಾಸಿಕಕ್ಕೆ ಹೋಲಿಸಿದರೆ ಟ್ರೂಕಾಲರ್ ಜಾಗತಿಕವಾಗಿ ಜಾಹೀರಾತು ಆದಾಯದಲ್ಲಿ ಶೇಕಡಾ 5 ರಷ್ಟು ಗಮನಾರ್ಹ ಏರಿಕೆ ಕಂಡಿದೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸಂದರ್ಭದಲ್ಲಿ ಡಿಜಿಟಲ್ ಜಾಹೀರಾತುಗಳಿಗೆ ಬೇಡಿಕೆ ಹೆಚ್ಚಾಗಿರುವುದು ಕೂಡ ಆದಾಯ ಹೆಚ್ಚಳಕ್ಕೆ ಕಾರಣವಾಗಿದೆ.
ನಿಮಗಿದು ಗೊತ್ತೇ?: ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಕಾಲ್ ರೆಕಾರ್ಡಿಂಗ್ ವೈಶಿಷ್ಟ್ಯವನ್ನು ಪ್ರಾರಂಭಿಸಿದ್ದು, ಇದರ ಮೂಲಕ ಬಳಕೆದಾರರು ಎಲ್ಲಾ ಕರೆಗಳನ್ನು ರೆಕಾರ್ಡ್ ಮಾಡಬಹುದು ಮತ್ತು ಅವನ್ನು ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಭಾಷಾಂತರಿಸಬಹುದು. ಈ ವೈಶಿಷ್ಟ್ಯವು ಈಗ ಆಂಡ್ರಾಯ್ಡ್ ಮತ್ತು ಭಾರತದಲ್ಲಿ ಐಒಎಸ್ ನಲ್ಲಿ ಲಭ್ಯವಿದೆ.
ಟ್ರೂಕಾಲರ್ ಉಪಯೋಗವೇನು?: ಇದು ಆ್ಯಪ್ ಸ್ಟೋರ್ ಮತ್ತು ಗೂಗಲ್ ಪ್ಲೇನಲ್ಲಿ ಲಭ್ಯವಿರುವ ಕಾಲರ್ ಐಡಿ ಮತ್ತು ಸ್ಪ್ಯಾಮ್ ಬ್ಲಾಕಿಂಗ್ ಅಪ್ಲಿಕೇಶನ್ ಆಗಿದೆ. ಈ ಆ್ಯಪ್ ಮೂಲಕ ಯಾರು ಕರೆ ಮಾಡುತ್ತಿದ್ದಾರೆ ಎಂಬುದನ್ನು ಗುರುತಿಸಬಹುದು. ಅನಗತ್ಯ ಕರೆಗಳು ಮತ್ತು ಸಂದೇಶಗಳನ್ನು ಬ್ಲಾಕ್ ಮಾಡಬಹುದು.
ಇದನ್ನೂ ಓದಿ : ಕನಿಷ್ಠ ಬೆಲೆ ಷರತ್ತಿನೊಂದಿಗೆ ಈರುಳ್ಳಿ ರಫ್ತು ನಿಷೇಧ ಹಿಂಪಡೆದ ಕೇಂದ್ರ ಸರ್ಕಾರ - onion exports