ನವದೆಹಲಿ: ಈಗಾಗಲೇ ಫಾಸ್ಟ್ ಟ್ರ್ಯಾಕ್ ಹಾಗೂ ಬುಲೆಟ್ ಟ್ರೈನ್ ಯೋಜನೆಗಳಿಗೆ ಮೋದಿ ಸರ್ಕಾರ ಚಾಲನೆ ನೀಡಿದೆ. ಮುಂಬೈ ದೆಹಲಿ ನಡುವೆ ಹೈ ಸ್ಪೀಡ್ ರೈಲ್ವೆ ಕಾಮಗಾರಿ ತ್ವರಿತವಾಗಿ ಸಾಗಿದೆ. ಇದೀಗ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ ಮಧ್ಯಂತರ ಬಜೆಟ್ನಲ್ಲಿ ರೈಲ್ವೆ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ.
ಮೂರು ಪ್ರಮುಖ ಆರ್ಥಿಕ ರೈಲ್ವೇ ಕಾರಿಡಾರ್ ಕಾರ್ಯಕ್ರಮಗಳನ್ನು ಜಾರಿಗೊಳಿಸುವುದಾಗಿ ತಮ್ಮ ಮಂಧ್ಯಂತರ ಬಜೆಟ್ನಲ್ಲಿ ಪ್ರಕಟಿಸಿದ್ದಾರೆ. ಅವುಗಳೆಂದರೆ,
1 ಶಕ್ತಿ, ಖನಿಜ ಮತ್ತು ಸಿಮೆಂಟ್ ಕಾರಿಡಾರ್ - ಅಂದರೆ ಗೂಡ್ಸ್ ರೈಲುಗಳ ಓಡಾಟಕ್ಕೆ ಪ್ರತ್ಯೇಕ ಕಾರಿಡಾರ್ ರಚನೆ ಮಾಡುವ ಮಹತ್ವದ ಘೋಷಣೆಯನ್ನ ಮಾಡಿದ್ದಾರೆ.
2. ಬಂದರು ಸಂಪರ್ಕ ಕಾರಿಡಾರ್ ಯೋಜನೆ ಬಗ್ಗೆಯೂ ಪ್ರಸ್ತಾಪ ಮಾಡಿದ್ದಾರೆ.
3. ಮೂರನೇದಾಗಿ ಇನ್ನು ಹೆಚ್ಚಿನ ಸಂಚಾರ ಸಾಂದ್ರತೆ ಕಡಿಮೆ ಮಾಡುವುದಕ್ಕಾಗಿ ಹೊಸ ಕಾರಿಡಾರ್‌ಗಳನ್ನು ಸ್ಥಾಪನೆ ಮಾಡಲಾಗುವುದು ಎಂದು ತಮ್ಮ ಬಜೆಟ್ ಭಾಷಣದಲ್ಲಿ ಹೇಳಿದ್ದಾರೆ.
ಬಹು - ಮಾದರಿ ಸಂಪರ್ಕಗಳನ್ನು ಸಕ್ರಿಯಗೊಳಿಸಲು PM ಗತಿ ಶಕ್ತಿ ಯೋಜನೆ ಅಡಿ ಕಾಮಗಾರಿಗಳನ್ನು ಕೈಗೆತ್ತಿಗೊಳ್ಳಲಾಗುವುದು. ಲಾಜಿಸ್ಟಿಕ್ಸ್ ದಕ್ಷತೆ ಹೆಚ್ಚಿಸುವುದು ಹಾಗೂ ಇದಕ್ಕೆ ಈಗ ತಗಲುತ್ತಿರುವ ಭಾರಿ ವೆಚ್ಚಗಳನ್ನು ಕಡಿಮೆ ಮಾಡಲು ನಿರ್ಧರಿಸಲಾಗಿದೆ.
ಹೆಚ್ಚಿನ ದಟ್ಟಣೆಯ ಕಾರಿಡಾರ್‌ಗಳನ್ನು ಆರಂಭಿಸುವ ಮೂಲಕ ಈಗ ಉಂಟಾಗುತ್ತಿರುವ ಪ್ರಯಾಣಿಕರ ದಟ್ಟಣೆಯನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಲಾಗಿದೆ. ಅಷ್ಟೇ ಅಲ್ಲ ಈ ಕಾರಿಡಾರ್ ಯೋಜನೆ ಮೂಲಕ ಪ್ರಯಾಣಿಕರಿಗೆ ಸುರಕ್ಷತೆ ಹಾಗೂ ತ್ವರಿತವಾಗಿ ಅಂದರೆ ಅತ್ಯಂತ ಕಡಿಮೆ ಅವಧಿಯಲ್ಲಿ ನಿಗದಿತ ಸ್ಥಳವನ್ನು ತಲುಪಲು ಸಾಧ್ಯವಾಗುತ್ತದೆ. ಪ್ರತ್ಯೇಕ ಸಾಗಣೆ ಕಾರಿಡಾರ್ನಿಂದಾಗಿ ನಮ್ಮ GDP ಬೆಳವಣಿಗೆ ವೇಗಗೊಳ್ಳಲು ಅನುಕೂಲ ಆಗುತ್ತದೆ. ಅಷ್ಟೇ ಅಲ್ಲ ಲಾಜಿಸ್ಟಿಕ್ ವೆಚ್ಚಗಳು ಕೂಡಾ ಕಡಿಮೆ ಆಗುತ್ತದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಪ್ರಯಾಣಿಕರ ಸುರಕ್ಷತೆ, ಅನುಕೂಲತೆ ಮತ್ತು ಸೌಕರ್ಯವನ್ನು ಹೆಚ್ಚಿಸಲು ನಲವತ್ತು ಸಾವಿರ ಸಾಮಾನ್ಯ ರೈಲು ಬೋಗಿಗಳನ್ನು ವಂದೇ ಭಾರತ್ ಮಾನದಂಡಕ್ಕೆ ಅನುಗುಣವಾಗಿ ಮೇಲ್ದರ್ಜೆಗೆ ಏರಿಸಲು ನಿರ್ಧರಿಸಲಾಗಿದೆ. ಈ ವಿಚಾರವನ್ನು ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ಭಾಷಣದಲ್ಲಿ ಘೋಷಣೆ ಮಾಡಿದ್ದಾರೆ.
ಮೆಟ್ರೋ ಮತ್ತು ನಮೋ ಭಾರತ್: ದೇಶದಲ್ಲಿ ಈಗ ಮಧ್ಯಮ ವರ್ಗ ತ್ವರಿತವಾಗಿ ಅಭಿವೃದ್ಧಿ ಕಾಣುತ್ತಿದೆ. ಮತ್ತೊಂದು ಕಡೆ ನಗರೀಕರಣವೂ ವೇಗವಾಗಿ ಬೆಳವಣಿಗೆ ಕಾಣುತ್ತಿದೆ. ಹೀಗಾಗಿ ಮೆಟ್ರೋ ಸೇರಿ ನವ ಮಧ್ಯಮ ನಗರಗಳಲ್ಲಿ ಮೆಟ್ರೋ ಅಗತ್ಯತೆ ಹೆಚ್ಚಾಗಿದೆ. ಹೀಗಾಗಿ ಮೆಟ್ರೋ ರೈಲು ಮತ್ತು ನಮೋ ಭಾರತ್ ಕ್ಕೆ ಅಗತ್ಯವಿರುವ ನಗರ ಪರಿವರ್ತನೆ ತ್ವರಿತಗೊಳಿಸಲು ಕ್ರಮ ಕೈಗೊಳ್ಳುವ ಅಗತ್ಯ ಇದೆ ಎಂದು ಹಣಕಾಸು ಸಚಿವರು ಪ್ರತಿಪಾದಿಸಿದ್ದಾರೆ.
ಇದನ್ನು ಓದಿ:ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೂ 'ಆಯುಷ್ಮಾನ್ ಭಾರತ್' ವಿಸ್ತರಣೆ