ಮುಂಬೈ: ಭಾರತದ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಭವ್ಯವಾದ ಗಗನಚುಂಬಿ ಕಟ್ಟಡಗಳ ಮಧ್ಯೆ ನೂರಾರು ಅಪಾಯಕಾರಿಯಾಗಿ ಶಿಥಿಲಗೊಂಡ ಕಟ್ಟಡಗಳು ಈಗಲೋ, ಆಗಲೋ ಎಂಬಂತಿವೆ. ಹೆಚ್ಚಿನ ಬಾಡಿಗೆ ಕಟ್ಟುವುದಕ್ಕಿಂತ ಇದೇ ಶಿಥಿಲಗೊಂಡ ಕಟ್ಟಡದಲ್ಲಿ ಪ್ರಾಣಕ್ಕಿಂತ ಹಣವೇ ಮುಖ್ಯ ಎಂಬಂತೆ ಜೀವಿಸುತ್ತಿರುವ ಕುಟುಂಬಗಳಿವೆ. ಪ್ರತಿ ವರ್ಷ ಇಲ್ಲಿ ಧಾರಾಕಾರ ಮಳೆ ಸುರಿಯುತ್ತದೆ. ಮಳೆ ಅಪ್ಪಳಿಸಿದಾಗ ನಗರ ನರಕ ಸದೃಶ್ಯವಾಗುತ್ತದೆ. ಕೆಲವು ಶಿಥಿಲವಾದ ಹಳೆಯ ಕಾಲದ ಕಟ್ಟಡಗಳು ಮುಗ್ಧ ಜೀವಗಳೊಂದಿಗೆ ಕುಸಿದು ಬೀಳುತ್ತವೆ.
ಜುಲೈ ತಿಂಗಳಿನಲ್ಲಿ ನಾಲ್ಕು ಅಂತಸ್ತಿನ ಕಟ್ಟಡವೊಂದು ಭಾಗಶಃ ಕುಸಿದು ಬಿದ್ದಾಗ ಕೂದಲೆಳೆ ಅಂತರದಲ್ಲಿ ಬದುಕಿದ್ದನ್ನು ಸ್ಮರಿಸಿಕೊಂಡ ಕಚೇರಿಯ ಉದ್ಯೋಗಿ ವಿಕ್ರಮ್ ಕೊಹ್ಲಿ, " ಬಿಸಿಯಾದ ಚಹಾಕ್ಕೆ ಬಿಸ್ಕೆಟ್ ಹಾಕಿದಾಗ ಕುಸಿಯುವ ರೀತಿಯಲ್ಲಿ ಕಟ್ಟಡ ನೆಲಕ್ಕುರುಳುವ ದೃಶ್ಯ ಕಣ್ಮುಂದಿದೆ ಎಂದಿದ್ದಾರೆ.
ಮುಂಬೈನ ಜನನಿಬಿಡ ಗ್ರಾಂಟ್ ರಸ್ತೆ ಪ್ರದೇಶದಲ್ಲಿ ಶತಮಾನಗಳಷ್ಟು ಹಳೆಯದಾದ ಕಟ್ಟಡವನ್ನು ತೆರವುಗೊಳಿಸುವಂತೆ ಮೂರು ವರ್ಷಗಳ ಹಿಂದೆಯೇ ನಗರಸಭೆ ಅಧಿಕಾರಿಗಳು ಸೂಚಿಸಿದ್ದರು. ದುರಸ್ತಿಗಾಗಿ ಕೆಂಪು ಬಾವುಟವನ್ನು ಸಹ ಹಾಕಿದ್ದರು. ಇದಕ್ಕೆ ಸರ್ಕಾರ ಜೂನ್‌ನಲ್ಲಿ ಕಟ್ಟಡ ತೆರವಿಗೆ ಎಚ್ಚರಿಕೆ ಸೂಚನೆ ನೀಡಿತ್ತು. ಆದರೆ ಕಟ್ಟಡದ ನಿವಾಸಿಗಳು ಅದನ್ನು ನಿರ್ಲಕ್ಷಿಸಿದ್ದು, ಯಾರೂ ನಿವೇಶನವನ್ನು ಖಾಲಿ ಮಾಡಿಲ್ಲ ಎಂದು ರಾಜ್ಯ ವಸತಿ ಪ್ರಾಧಿಕಾರ ತಿಳಿಸಿದೆ.
ಇದೇ ರೀತಿ ನಿರ್ಲಕ್ಷ್ಯವಹಿಸಿ ಇತ್ತೀಚೆಗೆ ಕಟ್ಟಡ ಕುಸಿದು ಬಿದ್ದಾಗ ದಾರಿಹೋಕರೊಬ್ಬರು ಸಾವನ್ನಪ್ಪಿ, ನಾಲ್ವರು ಗಾಯಗೊಂಡಿದ್ದರು. ಕೊನೆಗೆ ಅಗ್ನಿಶಾಮಕ ದಳದವರು ಕಟ್ಟಡದ ಅವಶೇಷದೊಳಗೆ ಸಿಲುಕಿದ್ದ 13 ಜನರನ್ನು ರಕ್ಷಿಸಬೇಕಾಯಿತು. ಸುಮಾರು 20 ಮಿಲಿಯನ್ ಜನರಿರುವ ಜನನಿಬಿಡ ನಗರದಲ್ಲಿ ಇದು ಕೇವಲ ಒಂದು ಪ್ರಕರಣವಾಗಿದೆ. ಆದರೆ, 13,000ಕ್ಕೂ ಹೆಚ್ಚು ಕಟ್ಟಡಗಳ ಕುಸಿತವನ್ನು ತಡೆಯಲು ನಿರಂತರ ದುರಸ್ತಿಯ ಅಗತ್ಯವಿದೆ ಎಂದು ರಾಜ್ಯದ ಮಹಾರಾಷ್ಟ್ರ ವಸತಿ ಮತ್ತು ಪ್ರದೇಶಾಭಿವೃದ್ಧಿ ಪ್ರಾಧಿಕಾರ (MHADA) ಹೇಳಿದೆ. ಇವುಗಳಲ್ಲಿ, ಸುಮಾರು 850 ಕಟ್ಟಡಗಳನ್ನು ಅಪಾಯಕಾರಿ, ಶಿಥಿಲ ಮತ್ತು ದುರಸ್ತಿಗೆ ಶಿಫಾರಸು ಮಾಡಲಾಗಿಲ್ಲ ಎಂದು ಪಟ್ಟಿ ಮಾಡಿದೆ.
ಭಾರತದಲ್ಲೇ ಅತಿ ಹೆಚ್ಚು ಬಾಡಿಗೆ ದರ ಹೊಂದಿದ ನಗರ ಮುಂಬೈ: ಗ್ಲೋಬಲ್ ಪ್ರಾಪರ್ಟಿ ಗೈಡ್‌ನ ಪ್ರಕಾರ ಭಾರತದಲ್ಲಿ ಮುಂಬೈ ಅತಿ ಹೆಚ್ಚು ಬಾಡಿಗೆ ದರಗಳನ್ನು ಹೊಂದಿದೆ. ಕೇವಲ ಒಂದು ಕೊಠಡಿ ಇರುವ ಅಪಾರ್ಟ್ಮೆಂಟ್‌ಗೆ ಸರಾಸರಿ ಬಾಡಿಗೆ 40,301.21 ಎಂದು ಅಂದಾಜಿಸಲಾಗಿದೆ. ಈ ದುಬಾರಿ ಕಾರಣಕ್ಕಾಗಿಯೇ ಶಿಥಿಲ ಕಟ್ಟಡದಲ್ಲಿ ಪ್ರಾಣವನ್ನು ಅಂಗೈಯಲ್ಲಿ ಹಿಡಿದು ಜೀವಿಸುತ್ತಿದ್ದಾರೆ.