ಮುಂಬೈ : ಪ್ರಾಫಿಟ್ ಬುಕ್ಕಿಂಗ್ ನಡುವೆ ಏರಿಳಿಕೆಯೊಂದಿಗೆ ವಹಿವಾಟು ನಡೆಸಿದ ಬೆಂಚ್ ಮಾರ್ಕ್ ಷೇರು ಸೂಚ್ಯಂಕಗಳು ಮಂಗಳವಾರ ಮಿಶ್ರ ಪ್ರವೃತ್ತಿಯೊಂದಿಗೆ ಕೊನೆಗೊಂಡವು. ಬಿಎಸ್ಇ ಸೆನ್ಸೆಕ್ಸ್ 98.05 ಪಾಯಿಂಟ್ಸ್ ಅಥವಾ ಶೇಕಡಾ 0.13 ರಷ್ಟು ಕುಸಿದು 73,907.89 ರಲ್ಲಿ ಕೊನೆಗೊಂಡಿದ್ದರೆ, ಎನ್ಎಸ್ಇ ನಿಫ್ಟಿ-50 24.4 ಪಾಯಿಂಟ್ಸ್ ಅಥವಾ ಶೇಕಡಾ 0.11 ರಷ್ಟು ಏರಿಕೆಯಾಗಿ 22,526.4 ರಲ್ಲಿ ಕೊನೆಗೊಂಡಿದೆ.
ಬಿಎಸ್ಇಯಲ್ಲಿ ಪಟ್ಟಿ ಮಾಡಲಾದ ಎಲ್ಲಾ ಷೇರುಗಳ ಒಟ್ಟು ಮಾರುಕಟ್ಟೆ ಬಂಡವಾಳೀಕರಣವು ಇಂಟ್ರಾಡೇ ವಹಿವಾಟಿನಲ್ಲಿ ಸಂಕ್ಷಿಪ್ತವಾಗಿ 5 ಟ್ರಿಲಿಯನ್ ಡಾಲರ್ ಮೀರಿತ್ತು.
13 ಪ್ರಮುಖ ವಲಯ ಸೂಚ್ಯಂಕಗಳಲ್ಲಿ ಏಳು ಲಾಭ ಗಳಿಸಿದರೆ, ಲೋಹಗಳು ಶೇಕಡಾ 3.88ರಷ್ಟು ಏರಿಕೆ ಕಂಡಿವೆ. ಹಿಂಡಾಲ್ಕೊ ಇಂಡಸ್ಟ್ರೀಸ್, ಟಾಟಾ ಸ್ಟೀಲ್ ಮತ್ತು ಜೆಎಸ್ ಡಬ್ಲ್ಯೂ ಸ್ಟೀಲ್ ಶೇಕಡಾ 3.5 ರಿಂದ 4.8 ರಷ್ಟು ಏರಿಕೆ ಕಂಡಿವೆ. ಯುಎಸ್ ಬಡ್ಡಿದರಗಳ ಬದಲಾವಣೆಯ ಕಳವಳದಿಂದಾಗಿ ಹಣಕಾಸು ಷೇರುಗಳು ಶೇಕಡಾ 0.3 ರಷ್ಟು ಮತ್ತು ಐಟಿ ಷೇರುಗಳು ಶೇಕಡಾ 0.18ರಷ್ಟು ಕುಸಿದವು. ಸ್ವಿಸ್ ಮೂಲದ ನೆಸ್ಲೆಗೆ ರಾಯಧನ ಹೆಚ್ಚಳದ ವಿರುದ್ಧ ಷೇರುದಾರರು ಮತ ಚಲಾಯಿಸಿದ ನಂತರ ನೆಸ್ಲೆ ಇಂಡಿಯಾ ಶೇಕಡಾ 1.74ರಷ್ಟು ಕುಸಿದಿದೆ.
ರೂಪಾಯಿ 6 ಪೈಸೆ ಏರಿಕೆ: ಸಾಗರೋತ್ತರ ಪ್ರಮುಖ ಕರೆನ್ಸಿಗಳ ವಿರುದ್ಧ ಡಾಲರ್ ದುರ್ಬಲವಾಗಿರುವುದು ಮತ್ತು ಆ ಮೂಲಕ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಕಚ್ಚಾ ತೈಲ ಬೆಲೆಗಳು ಕಡಿಮೆಯಾದ ಹಿನ್ನೆಲೆಯಲ್ಲಿ ರೂಪಾಯಿ ಮಂಗಳವಾರ ಅಮೆರಿಕದ ಡಾಲರ್ ವಿರುದ್ಧ 6 ಪೈಸೆ ಏರಿಕೆಯಾಗಿ 83.31 ಕ್ಕೆ ತಲುಪಿದೆ.
ಆದಾಗ್ಯೂ ದೇಶೀಯ ಇಕ್ವಿಟಿ ಮಾರುಕಟ್ಟೆಗಳಲ್ಲಿನ ನಿಧಾನಗತಿಯ ಪ್ರವೃತ್ತಿಯು ರೂಪಾಯಿ ತೀವ್ರಗತಿಯಲ್ಲಿ ಏರಿಕೆಯಾಗುವುದನ್ನು ನಿರ್ಬಂಧಿಸಿದೆ ಎಂದು ವಿದೇಶಿ ವಿನಿಮಯ ವ್ಯಾಪಾರಿಗಳು ತಿಳಿಸಿದ್ದಾರೆ.
ಇಂಟರ್ ಬ್ಯಾಂಕ್ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ, ರೂಪಾಯಿಯು 83.32 ರಲ್ಲಿ ಬಲವಾಗಿ ಪ್ರಾರಂಭವಾಯಿತು ಮತ್ತು ಇಂಟ್ರಾಡೇ ಗರಿಷ್ಠ 83.26 ಮತ್ತು ಕನಿಷ್ಠ 83.36ರ ಮಧ್ಯೆ ವಹಿವಾಟು ನಡೆಸಿತು. ರೂಪಾಯಿ ಅಂತಿಮವಾಗಿ 83.31 (ತಾತ್ಕಾಲಿಕ) ರಲ್ಲಿ ಸ್ಥಿರವಾಯಿತು. ಇದು ಹಿಂದಿನ ಮುಕ್ತಾಯಕ್ಕಿಂತ 6 ಪೈಸೆ ಹೆಚ್ಚಾಗಿದೆ. ಶುಕ್ರವಾರ ಯುಎಸ್ ಡಾಲರ್ ವಿರುದ್ಧ ರೂಪಾಯಿ 83.37 ರಲ್ಲಿ ಕೊನೆಗೊಂಡಿತ್ತು. ಸಾರ್ವತ್ರಿಕ ಚುನಾವಣೆಯ ಕಾರಣ ವಿದೇಶಿ ವಿನಿಮಯ ಮಾರುಕಟ್ಟೆಯು ಸೋಮವಾರ ಮುಚ್ಚಲ್ಪಟ್ಟಿತ್ತು.
ಇದನ್ನೂ ಓದಿ : ಹೊಸ ಬಿಎಂಡಬ್ಲ್ಯು S 1000 XR ಬೈಕ್ ಭಾರತದಲ್ಲಿ ಬಿಡುಗಡೆ: ಬೆಲೆ ಎಷ್ಟು, ವಿಶೇಷತೆಗಳೇನು ಗೊತ್ತೆ? - HOW IS BMW MOTORCYCLE