ಮುಂಬೈ : ಪ್ರಮುಖ ಸ್ಥೂಲ ಆರ್ಥಿಕ ದತ್ತಾಂಶದ ಎಚ್ಚರಿಕೆಯ ನಿರೀಕ್ಷೆ ಮತ್ತು ದುರ್ಬಲ ಜಾಗತಿಕ ಪ್ರವೃತ್ತಿಗಳಿಂದ ಪ್ರಭಾವಿತವಾದ ದೇಶೀಯ ಇಕ್ವಿಟಿ ಮಾರುಕಟ್ಟೆ ಮಾರ್ಚ್ 11 ರ ಸೋಮವಾರ ವ್ಯಾಪಕ ಮಾರಾಟಕ್ಕೆ ಸಾಕ್ಷಿಯಾಯಿತು ಮತ್ತು ಮಾನದಂಡಗಳಾದ ನಿಫ್ಟಿ 50 ಮತ್ತು ಸೆನ್ಸೆಕ್ಸ್ ಶೇಕಡಾ 1 ರಷ್ಟು ನಷ್ಟ ಅನುಭವಿಸುವುದರೊಂದಿಗೆ ವಹಿವಾಟು ಕೊನೆಗೊಳಿಸಿತು.
ನಿಫ್ಟಿ-50 161 ಪಾಯಿಂಟ್ ಅಥವಾ ಶೇಕಡಾ 0.72 ರಷ್ಟು ನಷ್ಟದೊಂದಿಗೆ 22,332.65 ಕ್ಕೆ ಕೊನೆಗೊಂಡರೆ, ಸೆನ್ಸೆಕ್ಸ್ 617 ಪಾಯಿಂಟ್ ಅಥವಾ ಶೇಕಡಾ 0.83 ರಷ್ಟು ಕುಸಿದು 73,502.64 ರಲ್ಲಿ ಕೊನೆಗೊಂಡಿದೆ. 30 ಷೇರುಗಳ ಸೆನ್ಸೆಕ್ಸ್ನಲ್ಲಿ 22 ಷೇರುಗಳು ಇಳಿಕೆಯಲ್ಲಿ ಕೊನೆಗೊಂಡವು. ಪವರ್ ಗ್ರಿಡ್, ಟಾಟಾ ಸ್ಟೀಲ್ ಮತ್ತು ಎಸ್ಬಿಐ ಷೇರುಗಳು ಹೆಚ್ಚು ನಷ್ಟ ಅನುಭವಿಸಿದವು. ಬಿಎಸ್ಇ ಸ್ಮಾಲ್ಕ್ಯಾಪ್ ಸೂಚ್ಯಂಕವು ಶೇಕಡಾ 2.01 ರಷ್ಟು ಕುಸಿದಿದ್ದರಿಂದ ಸ್ಮಾಲ್ಕ್ಯಾಪ್ ವಿಭಾಗ ತೀವ್ರ ನಷ್ಟ ಅನುಭವಿಸಿತು. ಬಿಎಸ್ಇ ಮಿಡ್ಕ್ಯಾಪ್ ಸೂಚ್ಯಂಕ ಶೇಕಡಾ 0.24 ರಷ್ಟು ನಷ್ಟದೊಂದಿಗೆ ಸ್ಥಿರವಾಯಿತು.
ಬಿಎಸ್ಇಯಲ್ಲಿ ಪಟ್ಟಿ ಮಾಡಲಾದ ಸಂಸ್ಥೆಗಳ ಒಟ್ಟಾರೆ ಮಾರುಕಟ್ಟೆ ಬಂಡವಾಳೀಕರಣವು ಹಿಂದಿನ ದಿನದ ವಹಿವಾಟಿಗೆ ಹೋಲಿಸಿದರೆ ಸುಮಾರು 392.8 ಲಕ್ಷ ಕೋಟಿ ರೂ.ಗಳಿಂದ ಸುಮಾರು 389.7 ಲಕ್ಷ ಕೋಟಿ ರೂ.ಗೆ ಇಳಿದಿದೆ. ಇದರಿಂದ ಹೂಡಿಕೆದಾರರು ಒಂದೇ ವಹಿವಾಟಿನಲ್ಲಿ ಸುಮಾರು 3.1 ಲಕ್ಷ ಕೋಟಿ ರೂ. ಕಳೆದುಕೊಂಡಿದ್ದಾರೆ.
ಆಲ್ಕೈಲ್ ಅಮೈನ್ಸ್ ಕೆಮಿಕಲ್ಸ್, ಕ್ಯಾಂಪಸ್ ಆಕ್ಟಿವ್ ವೇರ್, ಜಿಎಂಎಂ ಫೌಡ್ಲರ್, ಐಐಎಫ್ಎಲ್ ಫೈನಾನ್ಸ್, ಕೆಆರ್ ಬಿಎಲ್ ಮತ್ತು ಸ್ಟೆರ್ಲೈಟ್ ಟೆಕ್ನಾಲಜೀಸ್ ಸೇರಿದಂತೆ 100 ಕ್ಕೂ ಹೆಚ್ಚು ಷೇರುಗಳು ಬಿಎಸ್ಇಯಲ್ಲಿ 52 ವಾರಗಳ ಕನಿಷ್ಠ ಮಟ್ಟ ತಲುಪಿದವು.
ನಿಫ್ಟಿ ಸೂಚ್ಯಂಕದಲ್ಲಿ ಲಾಭ ಗಳಿಸಿದ ಪ್ರಮುಖ ಷೇರುಗಳು: ನಿಫ್ಟಿ-50 ಸೂಚ್ಯಂಕದಲ್ಲಿ ಅಪೊಲೊ ಹಾಸ್ಪಿಟಲ್ಸ್ (ಶೇಕಡಾ 2.66), ನೆಸ್ಲೆ ಇಂಡಿಯಾ (ಶೇಕಡಾ 1.92) ಮತ್ತು ಎಸ್ಬಿಐ ಲೈಫ್ ಇನ್ಶೂರೆನ್ಸ್ ಕಂಪನಿ (ಶೇಕಡಾ 1.56) ಷೇರುಗಳು ಹೆಚ್ಚು ಲಾಭ ಗಳಿಸಿದವು.
ನಿಫ್ಟಿ ಸೂಚ್ಯಂಕದಲ್ಲಿ ನಷ್ಟ ಅನುಭವಿಸಿದ ಪ್ರಮುಖ ಷೇರುಗಳು: ನಿಫ್ಟಿ-50 ಸೂಚ್ಯಂಕದಲ್ಲಿ ಟಾಟಾ ಕನ್ಸೂಮರ್ ಪ್ರಾಡಕ್ಟ್ಸ್ (3.06 ಪರ್ಸೆಂಟ್ ಕುಸಿತ), ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ (2.67 ಪರ್ಸೆಂಟ್) ಮತ್ತು ಬಜಾಜ್ ಆಟೋ (2.53 ಪರ್ಸೆಂಟ್ ಕುಸಿತ) ಷೇರುಗಳು ನಷ್ಟ ಅನುಭವಿಸಿದವು.
ಇದನ್ನೂ ಓದಿ : ಯುರೋಪ್ ರಾಷ್ಟ್ರಗಳೊಂದಿಗೆ $100 ಬಿಲಿಯನ್ ಹೂಡಿಕೆ ಒಪ್ಪಂದ: 10 ಲಕ್ಷ ಉದ್ಯೋಗ ಸೃಷ್ಟಿ ನಿರೀಕ್ಷೆ