ಮೈಸೂರು: ಬೇಸಿಗೆ ಧಗೆಯಿಂದ ಬಳಲುತ್ತಿರುವರಿಗೆ, ವಿಭಿನ್ನ ಹಾಗೂ ಆರೋಗ್ಯ ಪೂರ್ಣ ಉತ್ಪನ್ನಗಳಾದ ರಾಗಿ ಅಂಬಲಿ ಹಾಗೂ ಪ್ರೋಬಯಾಟಿಕ್ ಮಜ್ಜಿಗೆಯನ್ನು ಮೈಮುಲ್ (ಮೈಸೂರು ಜಿಲ್ಲಾ ಹಾಲು ಒಕ್ಕೂಟ) ಪರಿಚಯಿಸಿದೆ. ಈ ಉತ್ಪನ್ನಗಳನ್ನು ಬಿಡುಗಡೆ ಗೊಳಿಸಿದ ಒಂದು ವಾರದೊಳಗೆ ಉತ್ತಮ ಬೇಡಿಕೆ ಬಂದಿರುವುದರಿಂದ ಉತ್ಪಾದನೆ ಪ್ರಮಾಣ ಅಧಿಕಗೊಳಿಸಲು ಯೋಜನೆ ರೂಪಿಸಲಾಗುತ್ತಿದೆ.
ಏಪ್ರಿಲ್ ಮೊದಲ ವಾರದಿಂದಲೇ ರಾಗಿ ಅಂಬಲಿ ಹಾಗೂ ಪ್ರೋಬಯಾಟಿಕ್ ಮಜ್ಜಿಗೆಯನ್ನು ಹೊರ ತರಲಾಗಿದೆ. ರಾಗಿ ಅಂಬಲಿ ಮನೆಯಲ್ಲಿ ಸಾಮಾನ್ಯವಾಗಿ ತಯಾರಿಸುವ ಪೇಯ. ಬಹುತೇಕರು ರಾಗಿಯನ್ನು ಅಂಬಲಿ ರೂಪದಲ್ಲಿ ಮಾಡಿ ಕುಡಿಯುವುದುಂಟು. ಇದನ್ನೇ ಆರೋಗ್ಯಕರವಾಗಿ ರೂಪಿಸುವ ಉದ್ದೇಶದಿಂದ ಹುರಿದ ರಾಗಿ ಹಿಟ್ಟಿಗೆ ಮಜ್ಜಿಗೆ ಹಾಗೂ ಜೀರಿಗೆಯನ್ನು ಸೇರಿಸಿ ರುಚಿಕರವಾಗಿ ಅಂಬಲಿ ರೂಪಿಸಲಾಗಿದೆ. 200 ಎಂಎಲ್ನ ಪ್ಯಾಕ್ನ ದರ 10 ರೂ., ಆಗಿದೆ.
ರೈತರಿಂದ ಖರೀದಿ: ರೈತರಿಂದ ರಾಗಿ ಖರೀದಿಸಿ ಅದನ್ನು ಪುಡಿ ಮಾಡಲು ಬೇಕಾದ ಯಂತ್ರಗಳನ್ನು ಹಾಕಲಾಗಿದ್ದು, ಅಂಬಲಿ, ಮಜ್ಜಿಗೆ, ಜೀರಿಗೆ ಸೇರಿಸಿ ಪ್ಯಾಕೇಟ್ ಅನ್ನು ಸಿದ್ಧಪಡಿಸಲಾಗುವುದು. ಇದು ದೇಹದ ಉಷ್ಣಾಂಶ ನಿಯಂತ್ರಿಸಲು ಉತ್ತಮ ರಾಮಬಾಣವಾಗಿದೆ. ಸದ್ಯ ಒಂದು ಸಾವಿರ ಲೀಟರ್ ರಾಗಿ ಅಂಬಲಿ ತಯಾರಿಸಲಾಗುತ್ತಿದೆ. ಬೇಡಿಕೆಗನುಗುಣವಾಗಿ ಉತ್ಪನ್ನವನ್ನು ವಿಸ್ತರಿಸುವ ಯೋಚನೆಯಿದೆ. ಬೇರೆ ಫ್ಲೇವರ್ಗಳಲ್ಲೂ ರಾಗಿ ಅಂಬಲಿ ಹೊರ ತರಲಾಗುತ್ತದೆ.
ಇನ್ನು ಪ್ರೋಬಯಾಟಿಕ್ ಮಜ್ಜಿಗೆಯೂ ಮೈಸೂರು ಡೈರಿಯ ಹೊಸ ಉತ್ಪನ್ನವೇ ಆಗಿದೆ. ಇದರಲ್ಲಿ ಔಷಧೀಯ ಗುಣ ಇರುವ ಕೆಲವು ಉತ್ಪನ್ನಗಳನ್ನು ಸೇರಿಸಲಾಗಿದೆ. ಇದು ರುಚಿಕರವೂ ಆಗಿದೆ. ಜತೆಗೆ ಕರುಳಿಗೆ ಸಂಬಂಧಿತ ಸಮಸ್ಯೆ ಇದ್ದರೆ ಅದನ್ನು ಸರಿಪಡಿಸುತ್ತವೆ. ಪಚನ ಕ್ರಿಯೆಗೆ ಪ್ರೋಬಯಾಟಿಕ್ ಮಜ್ಜಿಗೆ ಸಹಾಯಕವಾಗಲಿದೆ. ಇದರ ಬೆಲೆಯೂ 200 ಎಂಎಲ್ನ ಪ್ಯಾಕ್‌ಗೆ 10 ರೂ.ಗಳಾಗಿದೆ. ರಾಗಿ ಅಂಬಲಿ, ಪ್ರೋಬಯಾಟಿಕ್ ಉತ್ಪನ್ನಗಳಿಗೆ ಬೇಡಿಕೆ ಇದೆ ಎಂದು ಮೈಸೂರು ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ವಿಜಯಕುಮಾರ್ ತಿಳಿಸಿದ್ದಾರೆ.
ಇದನ್ನೂ ಓದಿ: ಏಕಕಾಲಕ್ಕೆ ಕೆಎಸ್ಡಿಎಲ್ನ 21 ಹೊಸ ಉತ್ಪನ್ನ ಬಿಡುಗಡೆ: ಗುಣಮಟ್ಟ ಕಾಪಾಡಿಕೊಳ್ಳಲು ಸಿಎಂ ಸಲಹೆ