ನವದೆಹಲಿ: ಭಾರತಕ್ಕೆ ತಮ್ಮ ಚೊಚ್ಚಲ ಭೇಟಿಯನ್ನು ಟೆಸ್ಲಾ ಸಿಇಒ ಎಲೋನ್ ಮಸ್ಕ್ ಧೃಢೀಕರಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಅವರು, ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲು ಎದುರು ನೋಡುತ್ತಿರುವುದಾಗಿ ಬುಧವಾರ ಹೇಳಿದ್ದಾರೆ. ಭಾರತದಲ್ಲಿ ಪ್ರಧಾನ ಮಂತ್ರಿ @NarendraModi ಅವರನ್ನು ಭೇಟಿಯಾಗಲು ಎದುರು ನೋಡುತ್ತಿದ್ದೇನೆ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡುವ ಮೂಲಕ ದೃಢಪಡಿಸಿದ್ದಾರೆ.
ಮೂಲಗಳ ಪ್ರಕಾರ, ಮಸ್ಕ್ ಅವರು ಭಾರತದ ತಮ್ಮ ಚೊಚ್ಚಲ ಭೇಟಿಯಲ್ಲಿ, ಟೆಸ್ಲಾದ ಮೊದಲ ಸ್ಥಾವರ ಸ್ಥಾಪನೆ ಬಗ್ಗೆ ಘೋಷಣೆಯನ್ನು ಮಾಡಬಹುದು ಎಂದು ಹೇಳಲಾಗುತ್ತಿದೆ. ರಾಯಿಟರ್ಸ್ ಪ್ರಕಾರ, ಏಪ್ರಿಲ್ 22 ರಂದು ರಾಷ್ಟ್ರ ರಾಜಧಾನಿಯಲ್ಲಿ ಮಸ್ಕ್ ಪ್ರಧಾನಿ ಮೋದಿ ಅವರನ್ನು ಭೇಟಿಯಾಗುವ ಸಾಧ್ಯತೆಯಿದೆ. ಭಾರತದಲ್ಲಿ ಚೊಚ್ಚಲ ಪ್ರವೇಶ, ಮಸ್ಕ್ ದೇಶಕ್ಕಾಗಿ ಆಟೋಮೊಬೈಲ್ ಪ್ರಮುಖ ಯೋಜನೆಗಳ ವಿವರಗಳನ್ನು ಬಹಿರಂಗಪಡಿಸುವ ನಿರೀಕ್ಷೆಯಿದೆ ಎಂದು ಹೇಳಲಾಗಿದೆ.
ಆದಾಗ್ಯೂ, ಮಸ್ಕ್ ಅವರ ಭಾರತ ಪ್ರವಾಸದ ಅಂತಿಮ ಕಾರ್ಯಸೂಚಿಯನ್ನು ಇನ್ನೂ ದೃಢೀಕರಿಸಲಾಗಿಲ್ಲ. ಟೆಸ್ಲಾ ಅಧಿಕಾರಿಗಳು ಸಂಭಾವ್ಯತೆಯ ಬಗ್ಗೆ ಹೇಳಿದ್ದಾರೆ. ಸುಮಾರು 2 ಶತಕೋಟಿ ಡಾಲರ್ ಹೂಡಿಕೆ ಸಾಧ್ಯತೆ ಇದೆ. ಟೆಸ್ಲಾ ಕಾರುಗಳ ಉತ್ಪಾದನಾ ಘಟಕಕ್ಕಾಗಿ ಭಾರತದಲ್ಲಿ ಸ್ಥಳ ಸೇರಿದಂತೆ ಭಾರತೀಯ ಮಾರುಕಟ್ಟೆಯಲ್ಲಿ ಕಂಪನಿ ಅಸ್ತಿತ್ವದ ವಿಸ್ತರಣೆಗೆ ಹೆಚ್ಚಿನ ಆಸಕ್ತಿ ತೋರುತ್ತಿದೆ. ಭಾರತದಲ್ಲಿ ಅತ್ಯಾಧುನಿಕ ಘಟಕವನ್ನು ಸ್ಥಾಪನೆ ಮಾಡಲು ಸೂಕ್ತ ಜಾಗದ ಹುಡುಕಾಟದಲ್ಲಿ ಕಂಪನಿ ಇದೆ ಎಂದು ಮೂಲಗಳು ಹೇಳುತ್ತಿವೆ,
ಮೂಲಗಳ ಪ್ರಕಾರ, ಮಹಾರಾಷ್ಟ್ರ ಮತ್ತು ಗುಜರಾತ್ ಎರಡೂ ರಾಜ್ಯ ಸರ್ಕಾರಗಳು ಟೆಸ್ಲಾಗೆ ಭೂಮಿ ನೀಡಲು ಮುಂದೆ ಬಂದಿವೆ. ಇದು ಭಾರತದ ಎಲೆಕ್ಟ್ರಿಕ್ ಮೊಬಿಲಿಟಿ ಲ್ಯಾಂಡ್‌ಸ್ಕೇಪ್‌ನಲ್ಲಿ ಗಮನಾರ್ಹ ಪ್ರಗತಿಯನ್ನು ಸೂಚಿಸುತ್ತದೆ. ಪ್ರಸ್ತಾವಿತ ಉತ್ಪಾದನಾ ಘಟಕವು 2 ಶತಕೋಟಿ ಡಾಲರ್ ಹೂಡಿಕೆ ಮಾಡುವ ಸಾಧ್ಯತೆ ಇದ್ದು, ಟೆಸ್ಲಾದ ಎಲೆಕ್ಟ್ರಿಕ್ ವಾಹನಗಳಿಗೆ ದೇಶೀಯ ಮತ್ತು ಅಂತರಾಷ್ಟ್ರೀಯ ಬೇಡಿಕೆಯನ್ನು ಪೂರೈಸುವ ಗುರಿಯನ್ನು ಹೊಂದಿದೆ. ಈ ಕ್ರಮವು ಭಾರತದ ಹೊಸ EV ನೀತಿಯೊಂದಿಗೆ ಹೊಂದಿಕೆಯಾಗುತ್ತದೆ. ಇದು ಸುಸ್ಥಿರ ಸಾರಿಗೆ ಉತ್ತೇಜಿಸಲು ಮತ್ತು ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಸಹಕಾರಿ ಆಗಲಿದೆ ಎಂದು ಅಂದಾಜಿಸಲಾಗಿದೆ.
ಸರ್ಕಾರದ EV ಯೋಜನೆಯಡಿ ಭಾರತವನ್ನು ಸ್ವಾವಲಂಬಿ ಮಾಡುವ ಗುರಿಯನ್ನು ಹೊಂದಿದೆ. ಸುಧಾರಿತ ತಂತ್ರಜ್ಞಾನವನ್ನು ಹೊಂದಿದ EV ಗಳಿಗೆ ಆದ್ಯತೆಯ ಉತ್ಪಾದನಾ ತಾಣವಾಗಿ ಭಾರತ ಕಂಗೊಳಿಸುವ ಸಾಧ್ಯತೆಗಳಿವೆ. ಜಾಗತಿಕ EV ತಯಾರಕರಿಂದ ಹೂಡಿಕೆಗಳನ್ನು ಆಕರ್ಷಿಸುವುದು, ಭಾರತೀಯ ಗ್ರಾಹಕರಲ್ಲಿ ಸುಧಾರಿತ EV ತಂತ್ರಜ್ಞಾನದ ಅಳವಡಿಕೆ ಹೆಚ್ಚಿಸುವುದು. ದೇಶದ ಮೇಕ್ ಇನ್ ಇಂಡಿಯಾ ಉಪಕ್ರಮವನ್ನು ಮತ್ತಷ್ಟು ವಿಸ್ತರಿಸುವುದು ಹಾಗೂ ಉತ್ತೇಜಿಸುವುದು ಭಾರತದ ಇವಿ ಹೊಸ ನೀತಿಯಾಗಿದೆ.
ಇದನ್ನು ಓದಿ: ಇದೇ ಮೊದಲ ಬಾರಿಗೆ 75 ಸಾವಿರ ದಾಟಿದ ಸೆನ್ಸೆಕ್ಸ್: ಸಾರ್ವಕಾಲಿಕ ದಾಖಲೆಯ ಎತ್ತರಕ್ಕೇರಿದ ನಿಫ್ಟಿ - Stock Market