ನವದೆಹಲಿ: ಆನ್ಲೈನ್ನಲ್ಲಿ ಆಹಾರ ಮತ್ತು ಇತರ ವಸ್ತುಗಳನ್ನು ಕ್ಯಾಶ್ ಆನ್ ಡೆಲಿವರಿ ಮೂಲಕ ತರಿಸಿದಾಗ ಚಿಲ್ಲರೆ ಸಮಸ್ಯೆ ಉದ್ಭವವಾಗುವುದು ಸಾಮಾನ್ಯ. ಡೆಲಿವರಿ ಬಾಯ್ಗೆ ನಗದು ರೂಪದಲ್ಲಿ ಹಣ ಪಾವತಿಸಿದಾಗ ಆತನ ಬಳಿ ಅಥವಾ ಗ್ರಾಹಕರ ಬಳಿ ಸರಿಯಾದ ಚಿಲ್ಲರೆ ಇಲ್ಲದೆ ಸಮಸ್ಯೆಯಾಗುತ್ತದೆ. ಇಂಥ ಸಮಸ್ಯೆಯ ಪರಿಹಾರಕ್ಕಾಗಿ ಜೊಮ್ಯಾಟೊ ಈಗ ಉಳಿದ ಚಿಲ್ಲರೆ ಹಣವನ್ನು ಡಿಜಿಟಲ್ ರೂಪದಲ್ಲಿ ಗ್ರಾಹಕರ ಜೊಮ್ಯಾಟೊ ಅಕೌಂಟಿನಲ್ಲಿ ಸೇರಿಸುವ ವಿಧಾನವನ್ನು ಪರಿಚಯಿಸಿದೆ.
ಕ್ಯಾಶ್ ಆನ್ ಡೆಲಿವರಿ ಸಮಯದಲ್ಲಿ ಗ್ರಾಹಕರಿಗೆ ಪಾವತಿಯಾಗಬೇಕಾದ ಚಿಲ್ಲರೆ ಹಣ ಉಳಿದಿದ್ದರೆ ಅದನ್ನು ಜೊಮ್ಯಾಟೊ ಆ್ಯಪ್ನಲ್ಲಿ ಗ್ರಾಹಕರ ಜೊಮ್ಯಾಟೊ ಮನಿ (Zomato Money) ಖಾತೆಗೆ ವರ್ಗಾಯಿಸಲಾಗುವುದು ಮತ್ತು ಅದನ್ನು ಗ್ರಾಹಕರು ಮುಂದಿನ ಬಾರಿ ಆರ್ಡರ್ ಮಾಡುವಾಗ ಅಥವಾ ಡೈನಿಂಗ್ ಔಟ್ ಸಮಯದಲ್ಲಿ ಬಳಸಿಕೊಳ್ಳಬಹುದು ಎಂದು ಜೊಮ್ಯಾಟೊ ಸಿಇಒ ದೀಪಿಂದರ್ ಗೋಯಲ್ ಬುಧವಾರ ಹೇಳಿದ್ದಾರೆ. ಇಂಥದೊಂದು ಐಡಿಯಾ ಕೊಟ್ಟಿದ್ದಕ್ಕೆ ಅವರು ಟಾಟಾ ಗ್ರೂಪ್ ಒಡೆತನದ ಬಿಗ್ ಬಾಸ್ಕೆಟ್ ಸಂಸ್ಥೆಗೆ ಥ್ಯಾಂಕ್ಸ್ ಹೇಳಿದ್ದಾರೆ.
ಈ ಬಗ್ಗೆ ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ದೀಪಿಂದರ್ ಗೋಯಲ್, "ಕ್ಯಾಶ್ ಆನ್ ಡೆಲಿವರಿ ಆರ್ಡರ್ಗಳನ್ನು ಪಡೆಯುವ ಸಂದರ್ಭಗಳಲ್ಲಿ ನಿಖರವಾದ ಚಿಲ್ಲರೆ ಹಣ ಹೊಂದಿಸುವುದು ಕೆಲವೊಮ್ಮೆ ಸಾಧ್ಯವಾಗುವುದಿಲ್ಲ. ಇನ್ನು ಮುಂದೆ ಗ್ರಾಹಕರು ನಮ್ಮ ಡೆಲಿವರಿ ಪಾರ್ಟ್ನರ್ಗಳಿಗೆ ನಗದು ರೂಪದಲ್ಲಿ ಹಣ ಪಾವತಿಸುವಾಗ ಗ್ರಾಹಕರಿಗೆ ಚಿಲ್ಲರೆ ಹಣ ಬಾಕಿ ನೀಡುವುದು ಉಳಿದಲ್ಲಿ ಅದನ್ನು ತಮ್ಮ ಜೊಮಾಟೊ ಮನಿ ಖಾತೆಗೆ ತಕ್ಷಣವೇ ವರ್ಗಾಯಿಸುವಂತೆ ಕೇಳಬಹುದು. ಈ ಬ್ಯಾಲೆನ್ಸ್ ಮೊತ್ತವನ್ನು ಮುಂದಿನ ಫುಡ್ ಆರ್ಡರ್ ಅಥವಾ ಡೈನಿಂಗ್ ಔಟ್ಗೆ ಬಳಸಬಹುದು" ಎಂದು ತಿಳಿಸಿದ್ದಾರೆ.
For cash on delivery orders, finding exact change can sometimes be inconvenient. Starting today, our customers can pay delivery partners in cash, and ask for the balance amount to be added instantly to their Zomato Money account. This balance can be used towards future delivery… pic.twitter.com/X7HcGQZird
— Deepinder Goyal (@deepigoyal) August 7, 2024
"ಈ ಸಮಸ್ಯೆಯ ಪರಿಹಾರಕ್ಕಾಗಿ ಸ್ಫೂರ್ತಿ ನೀಡಿದ ಬಿಗ್ ಬಾಸ್ಕೆಟ್ಗೆ ಧನ್ಯವಾದಗಳು. ನಾವೂ ಕೂಡ ಇಂಥದೊಂದು ಪರಿಹಾರ ರೂಪಿಸಬೇಕೆಂದು ನಮ್ಮ ಡೆಲಿವರಿ ಪಾರ್ಟ್ನರ್ಗಳು (ಅವರಲ್ಲಿ ಮೂವರು ನಮ್ಮೊಂದಿಗೆ ಉತ್ಪನ್ನ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದಾರೆ) ಒತ್ತಾಯಿಸಿದರು" ಎಂದು ಜೊಮಾಟೊ ಸಿಇಒ ಹೇಳಿದ್ದಾರೆ.
ಆನ್ ಲೈನ್ ಆಹಾರ ವಿತರಣಾ ಸಂಸ್ಥೆಯಾಗಿರುವ ಜೊಮ್ಯಾಟೊ ತನ್ನ ಏಕೀಕೃತ ನಿವ್ವಳ ಲಾಭ ಗಮನಾರ್ಹ ಹೆಚ್ಚಳವಾಗಿದೆ ಎಂದು ಕಳೆದ ವಾರ ಘೋಷಿಸಿದೆ. ಜೂನ್ 2024 ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಕಂಪನಿಯ ನಿವ್ವಳ ಲಾಭ 253 ಕೋಟಿ ರೂ.ಗೆ ತಲುಪಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಕಂಪನಿಯ ಲಾಭ ಕೇವಲ 2 ಕೋಟಿ ರೂಪಾಯಿ ಆಗಿತ್ತು.
ಇದನ್ನೂ ಓದಿ : ರಾಷ್ಟ್ರೀಯ ಹೆದ್ದಾರಿಗಳಲ್ಲಿ 54 ಸಾವಿರ ಕೋಟಿ ರೂಪಾಯಿ ಟೋಲ್ ಸಂಗ್ರಹ: ನಿತಿನ್ ಗಡ್ಕರಿ - NH Toll Fee Collection