ನವದೆಹಲಿ: ಇರಾನ್ ಮೇಲೆ ಇಸ್ರೇಲ್ ಕ್ಷಿಪಣಿ ದಾಳಿ ಆರಂಭಿಸಿದೆ ಎಂಬ ವರದಿಗಳ ನಡುವೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಶುಕ್ರವಾರ ತೈಲ ಬೆಲೆ ಬ್ಯಾರೆಲ್ಗೆ 3 ಡಾಲರ್ ಏರಿಕೆಯಾಗಿದೆ. ಬೆಂಚ್ ಮಾರ್ಕ್ ಬ್ರೆಂಟ್ ಕ್ರೂಡ್ ಬೆಲೆ ಬ್ಯಾರೆಲ್ ಗೆ ಸುಮಾರು 90 ಡಾಲರ್ಗೆ ಏರಿಕೆಯಾಗಿದೆ. ಹಾಗೆಯೇ ಅಮೆರಿಕ ವೆಸ್ಟ್ ಟೆಕ್ಸಾಸ್ ದರ ಬ್ಯಾರೆಲ್ಗೆ ಸುಮಾರು 85 ಡಾಲರ್ ಆಗಿದೆ.
ಅಮೆರಿಕದಲ್ಲಿ ತೈಲ ದಾಸ್ತಾನು ಹೆಚ್ಚಾದ ನಂತರ ಮತ್ತು ಚೀನಾದ ನಿಧಾನಗತಿಯ ಆರ್ಥಿಕತೆಯಿಂದಾಗಿ ಆ ದೇಶದಲ್ಲಿ ತೈಲ ಬೇಡಿಕೆಯಲ್ಲಿ ಕುಸಿತವಾದ ನಂತರ ಬ್ರೆಂಟ್ ಕ್ರೂಡ್ ತೈಲ ಬೆಲೆ ಬುಧವಾರ ಬ್ಯಾರೆಲ್ಗೆ ಸುಮಾರು 87 ಡಾಲರ್ಗೆ ಇಳಿಕೆಯಾಗಿತ್ತು.
ಇಸ್ರೇಲಿ ಕ್ಷಿಪಣಿಗಳು ಇರಾನ್ನ ಪ್ರದೇಶಗಳ ಮೇಲೆ ದಾಳಿ ನಡೆಸಿವೆ ಎಂದು ಅಮೆರಿಕ ಮಾಧ್ಯಮ ವರದಿಗಳು ಶುಕ್ರವಾರ ತಿಳಿಸಿವೆ. ಈ ಹಿಂದೆ ಇಸ್ರೇಲ್ ಮೇಲೆ ಇರಾನ್ ನಡೆಸಿದ ಡ್ರೋನ್ ದಾಳಿಗೆ ಪ್ರತೀಕಾರವಾಗಿ ಈ ದಾಳಿ ನಡೆಸಲಾಗಿದೆ ಎಂದು ವರದಿಯಾಗಿದೆ. ಆದಾಗ್ಯೂ ಇಸ್ರೇಲ್ ತನ್ನ ಮೇಲೆ ಕ್ಷಿಪಣಿ ದಾಳಿ ಮಾಡಿದೆ ಎಂಬ ವರದಿಗಳನ್ನು ಇರಾನ್ ನಿರಾಕರಿಸಿದೆ. ತನ್ನ ವಾಯು ರಕ್ಷಣಾ ವ್ಯವಸ್ಥೆಗಳ ಗುಂಡಿನ ದಾಳಿಯಿಂದ ಸ್ಫೋಟಗಳು ಸಂಭವಿಸಿವೆ ಎಂದು ಅದು ಹೇಳಿಕೊಂಡಿದೆ.
ಇರಾನ್ನ ಕೇಂದ್ರ ನಗರ ಇಸ್ಫಹಾನ್ ನ ವಿಮಾನ ನಿಲ್ದಾಣದಲ್ಲಿ ಸ್ಫೋಟದ ಸದ್ದು ಕೇಳಿಸಿದೆ. ಆದರೆ, ಸ್ಫೋಟಕ್ಕೆ ಕಾರಣ ತಿಳಿದುಬಂದಿಲ್ಲ ಎಂದು ಇರಾನ್ ನ ಫಾರ್ಸ್ ಸುದ್ದಿ ಸಂಸ್ಥೆ ತಿಳಿಸಿದೆ. ಇಸ್ಫಹಾನ್, ಶಿರಾಜ್ ಮತ್ತು ಟೆಹ್ರಾನ್ ನಗರಗಳ ಮೇಲೆ ವಿಮಾನ ಹಾರಾಟಗಳನ್ನು ಇರಾನ್ ಸ್ಥಗಿತಗೊಳಿಸಿದೆ ಎಂದು ಸರ್ಕಾರಿ ಮಾಧ್ಯಮಗಳು ವರದಿ ಮಾಡಿವೆ.
ಭಾರತವು ತನ್ನ ಕಚ್ಚಾ ತೈಲ ಅಗತ್ಯದ ಶೇಕಡಾ 85 ಕ್ಕಿಂತ ಹೆಚ್ಚು ತೈಲವನ್ನು ಆಮದು ಮಾಡಿಕೊಳ್ಳುವುದರಿಂದ, ಜಾಗತಿಕ ತೈಲ ಬೆಲೆಗಳಲ್ಲಿನ ತೀವ್ರ ಹೆಚ್ಚಳವು ದೇಶದ ತೈಲ ಆಮದು ವೆಚ್ಚದಲ್ಲಿ ಹೆಚ್ಚಳಕ್ಕೆ ಕಾರಣವಾಗಬಹುದು ಮತ್ತು ವಿದೇಶಿ ವಿನಿಮಯದ ದೊಡ್ಡ ಹೊರಹರಿವಿನಿಂದಾಗಿ ರೂಪಾಯಿ ದುರ್ಬಲವಾಗಬಹುದು. ರಷ್ಯಾದಿಂದ ಅಗ್ಗದ ತೈಲ ಖರೀದಿಯಿಂದ 2023-24ರ ಆರ್ಥಿಕ ವರ್ಷದಲ್ಲಿ ಭಾರತವು ತನ್ನ ತೈಲ ಆಮದು ಬಿಲ್ ಅನ್ನು ಶೇಕಡಾ 16 ರಷ್ಟು ಕಡಿಮೆ ಮಾಡಿಕೊಂಡಿದೆ.
ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ ಮತ್ತು ಒಪೆಕ್+ ನ ತೈಲ ಪೂರೈಕೆ ಕಡಿತದಿಂದಾಗಿ ವರ್ಷದ ಆರಂಭದಿಂದ ಕಚ್ಚಾ ತೈಲ ಬೆಲೆಗಳು ಏರಿಕೆಯಾಗಿವೆ. ಈ ಪ್ರದೇಶವು ವಿಶ್ವದ ಕಚ್ಚಾ ತೈಲ ಉತ್ಪಾದನೆಯಲ್ಲಿ ಸರಿಸುಮಾರು ಮೂರನೇ ಒಂದು ಭಾಗದಷ್ಟು ಕೊಡುಗೆ ನೀಡುವುದರಿಂದ, ಅಲ್ಲಿನ ಬೆಳವಣಿಗೆಗಳು ಜಾಗತಿಕ ಇಂಧನ ಮಾರುಕಟ್ಟೆಗಳ ಮೇಲೆ ಭಾರಿ ಪ್ರಭಾವ ಬೀರುತ್ತವೆ.
ಇದನ್ನೂ ಓದಿ : ಅಂಬುಜಾ ಸಿಮೆಂಟ್ಸ್ನಲ್ಲಿ ಮತ್ತೆ 8,339 ಕೋಟಿ ರೂ. ಹೂಡಿಕೆ ಮಾಡಿದ ಅದಾನಿ ಗ್ರೂಪ್: ಪಾಲುದಾರಿಕೆ ಶೇ 70ಕ್ಕೆ ಏರಿಕೆ - Ambuja Cements