ನವದೆಹಲಿ : ಭಾರತದಲ್ಲಿ ಬಡತನದ ಮಟ್ಟವು 2011-12ರಲ್ಲಿದ್ದ ಶೇ 21ರಿಂದ 2023-24ರಲ್ಲಿ ಶೇ 8.5ಕ್ಕೆ ಇಳಿದಿದೆ ಎಂದು ಅಂದಾಜಿಸಲಾಗಿದೆ ಎಂದು ಆರ್ಥಿಕ ಚಿಂತಕರ ಚಾವಡಿ ಎನ್ಸಿಎಇಆರ್ನ ಹೊಸ ಅಧ್ಯಯನ ತಿಳಿಸಿದೆ. ಇಂಡಿಯಾ ಹ್ಯೂಮನ್ ಡೆವಲಪ್ಮೆಂಟ್ ಸರ್ವೇ (ಐಎಚ್ಡಿಎಸ್) ನ ಇತ್ತೀಚಿನ ದತ್ತಾಂಶವನ್ನು ಆಧರಿಸಿ ಈ ಅಧ್ಯಯನ ನಡೆಸಲಾಗಿದೆ.
ಕಳೆದ 10 ವರ್ಷಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿನ ಬಡತನದ ಅನುಪಾತವು 2011-12 ರಲ್ಲಿ ಇದ್ದ ಶೇಕಡಾ 24.8 ರಿಂದ ಈಗ ಶೇಕಡಾ 8.6 ಕ್ಕೆ ಇಳಿದಿದೆ ಎಂದು ಸೋನಾಲ್ಡೆ ದೇಸಾಯಿ ನೇತೃತ್ವದ ಎನ್ಸಿಎಇಆರ್ ಅರ್ಥಶಾಸ್ತ್ರಜ್ಞರು ಅಂದಾಜಿಸಿದ್ದಾರೆ.
ನಗರ ಪ್ರದೇಶಗಳಲ್ಲಿ ಬಡತನದ ಮಟ್ಟವು ಶೇ 13.4ರಿಂದ ಶೇ 8.4ಕ್ಕೆ ಇಳಿದಿದೆ. ನಗರ ಪ್ರದೇಶಗಳಿಗಿಂತ ಗ್ರಾಮೀಣ ಪ್ರದೇಶಗಳಲ್ಲಿ ಬಡತನದ ಇಳಿಕೆಯ ಮಟ್ಟ ಹೆಚ್ಚಾಗಿದೆ.
ಸಾರ್ವಜನಿಕ ವಿತರಣಾ ವ್ಯವಸ್ಥೆಯ ಮೂಲಕ ನೀಡಲಾಗುವ ಆಹಾರ ಸಬ್ಸಿಡಿಯಲ್ಲಿ ಗಮನಾರ್ಹ ಹೆಚ್ಚಳವಾಗಿದೆ ಮತ್ತು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪ್ರಾರಂಭಿಸಿದ ಅನೇಕ ಯೋಜನೆಗಳ ಇತರ ಪ್ರಯೋಜನಗಳು ಬಡವರ ಸುಗಮ ಜೀವನಕ್ಕೆ ಅನುಕೂಲ ಮಾಡಿವೆ ಎಂದು ಅಧ್ಯಯನ ವರದಿ ಹೇಳಿದೆ. ಗ್ರಾಮೀಣ ಪ್ರದೇಶಗಳಲ್ಲಿ ಬಡತನ ಮಟ್ಟದ ಈ ತೀವ್ರ ಕುಸಿತವು ಎನ್ಎಸ್ಎಸ್ಒ ಗ್ರಾಹಕ ವೆಚ್ಚ ಸಮೀಕ್ಷೆಯನ್ನು ಆಧರಿಸಿದ ಇತ್ತೀಚಿನ ಎಸ್ಬಿಐ ಸಂಶೋಧನಾ ವರದಿಯಲ್ಲಿಯೂ ಪ್ರತಿಬಿಂಬಿತವಾಗಿದೆ.
ದೇಶದಲ್ಲಿನ ಬಡತನದ ಮಟ್ಟವು ಗಮನಾರ್ಹ 2018-19 ರಿಂದ ಶೇಕಡಾ 4.4 ರಷ್ಟು ಕುಸಿದಿದೆ ಮತ್ತು ಕೊರೊನಾ ಸಾಂಕ್ರಾಮಿಕ ಅಲೆಯ ನಂತರ ನಗರ ಬಡತನದ ಮಟ್ಟವು ಶೇಕಡಾ 1.7 ರಷ್ಟು ಕಡಿಮೆಯಾಗಿದೆ. ಸಮಾಜದ ಕೆಳಸ್ತರದಲ್ಲಿರುವವರ ಕಲ್ಯಾಣಕ್ಕಾಗಿ ಜಾರಿಗೊಳಿಸಲಾದ ಸರ್ಕಾರದ ಯೋಜನೆಗಳು ಗ್ರಾಮೀಣ ಜೀವನೋಪಾಯದ ಮೇಲೆ ಗಮನಾರ್ಹ ಪ್ರಯೋಜನಕಾರಿ ಪರಿಣಾಮ ಬೀರುತ್ತಿವೆ ಎಂಬುದನ್ನು ಇದು ತೋರಿಸುತ್ತದೆ ಎಂದು ಎಸ್ಬಿಐ ವರದಿ ತಿಳಿಸಿದೆ.
ಭಾರತದಲ್ಲಿ ಬಡತನ ಕಡಿಮೆಯಾಗುವುದರ ಜೊತೆಗೆ, ದೇಶದಲ್ಲಿ ಗ್ರಾಮೀಣ-ನಗರ ಆದಾಯ ವ್ಯತ್ಯಾಸದಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದೆ ಎಂದು ವರದಿ ತಿಳಿಸಿದೆ. ನೀತಿ ಆಯೋಗದ ಇತ್ತೀಚಿನ ಚರ್ಚಾ ವರದಿಯ ಪ್ರಕಾರ, ಭಾರತದಲ್ಲಿ ಬಹು ಆಯಾಮದ ಬಡತನವು 2013-14 ರಲ್ಲಿ ಇದ್ದ ಶೇಕಡಾ 29.17 ರಿಂದ 2022-23 ರಲ್ಲಿ ಶೇಕಡಾ 11.28 ಕ್ಕೆ ಗಮನಾರ್ಹ ಕುಸಿತ ದಾಖಲಿಸಿದೆ. ಇದು ಶೇಕಡಾ 17.89 ರಷ್ಟು ಕಡಿಮೆಯಾಗಿದೆ.
ಬಡತನದ ಎಲ್ಲಾ ಆಯಾಮಗಳನ್ನು ಒಳಗೊಂಡ ಮಹತ್ವದ ಯೋಜನೆಗಳ ಕಾರಣದಿಂದ ಕಳೆದ 9 ವರ್ಷಗಳಲ್ಲಿ 24.82 ಕೋಟಿ ವ್ಯಕ್ತಿಗಳು ಬಹು ಆಯಾಮದ ಬಡತನದಿಂದ ಹೊರ ಬಂದಿದ್ದಾರೆ ಎಂದು ನೀತಿ ಆಯೋಗದ ವರದಿ ತಿಳಿಸಿದೆ. ಕಳೆದ ಒಂಬತ್ತು ವರ್ಷಗಳಲ್ಲಿ ಉತ್ತರ ಪ್ರದೇಶದಲ್ಲಿ 5.94 ಕೋಟಿ, ಬಿಹಾರದಲ್ಲಿ 3.77 ಕೋಟಿ, ಮಧ್ಯಪ್ರದೇಶದಲ್ಲಿ 2.30 ಕೋಟಿ ಮತ್ತು ರಾಜಸ್ಥಾನದಲ್ಲಿ 1.87 ಕೋಟಿ ಜನರು ಬಡತನದಿಂದ ಹೊರ ಬಂದಿದ್ದಾರೆ.
ಇದನ್ನೂ ಓದಿ : ನಿಯಮ ಉಲ್ಲಂಘನೆ: ಮೇ ತಿಂಗಳಲ್ಲಿ 66 ಲಕ್ಷ ಖಾತೆ ನಿಷೇಧಿಸಿದ ವಾಟ್ಸ್ಆ್ಯಪ್ - WhatsApp banned accounts