ನವದೆಹಲಿ: ಆರ್ಥಿಕ ಹಿಂಜರಿತ ಮತ್ತು ಭೌಗೋಳಿಕ ರಾಜಕೀಯ ಬಿಕ್ಕಟ್ಟುಗಳಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಅನಿಶ್ಚಿತತೆಯ ಪರಿಸ್ಥಿತಿ ಸೃಷ್ಟಿಯಾಗಿರುವ ಮಧ್ಯೆಯೂ ಭಾರತದ ಸರಕು ರಫ್ತು ಏಪ್ರಿಲ್ನಲ್ಲಿ ಶೇಕಡಾ 1.07 ರಷ್ಟು ಏರಿಕೆಯಾಗಿ ಸುಮಾರು 35 ಬಿಲಿಯನ್ ಡಾಲರ್ಗೆ ತಲುಪಿದೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯ ಬುಧವಾರ ಬಿಡುಗಡೆ ಮಾಡಿದ ಅಂಕಿ ಅಂಶಗಳು ತಿಳಿಸಿವೆ.
ಆದಾಗ್ಯೂ ದೇಶದ ಆಮದುಗಳು ಕೂಡ ತಿಂಗಳಲ್ಲಿ ಶೇಕಡಾ 10.25 ರಷ್ಟು ಏರಿಕೆಯಾಗಿ 54.1 ಬಿಲಿಯನ್ ಡಾಲರ್ಗೆ ತಲುಪಿವೆ. ಚಿನ್ನದ ಖರೀದಿಯ ಹೆಚ್ಚಳದಿಂದಾಗಿ ಆಮದು ಪ್ರಮಾಣ ಹೆಚ್ಚಾಗಿದೆ. ಇದರ ಪರಿಣಾಮವಾಗಿ ತಿಂಗಳ ಸರಕು ವ್ಯಾಪಾರ ಕೊರತೆಯು ಒಂದು ವರ್ಷದ ಹಿಂದೆ ಇದ್ದುದಕ್ಕಿಂತ ಶೇಕಡಾ 32.3 ರಷ್ಟು ಹೆಚ್ಚಾಗಿ 19.1 ಬಿಲಿಯನ್ ಡಾಲರ್ಗೆ ತಲುಪಿದೆ.
ಕಳೆದ ವರ್ಷ ಇದೇ ತಿಂಗಳಲ್ಲಿ 1.01 ಬಿಲಿಯನ್ ಡಾಲರ್ ಇದ್ದ ಚಿನ್ನದ ಆಮದು ಏಪ್ರಿಲ್ನಲ್ಲಿ ಮೂರು ಪಟ್ಟು ಹೆಚ್ಚಾಗಿ 3.11 ಬಿಲಿಯನ್ ಡಾಲರ್ಗೆ ತಲುಪಿದೆ. ಮಾರ್ಚ್ 2024 ರಲ್ಲಿ ಚಿನ್ನದ ಆಮದು 1.53 ಬಿಲಿಯನ್ ಡಾಲರ್ ಆಗಿತ್ತು.
2024-25ರ ಹಣಕಾಸು ವರ್ಷದ ಮೊದಲ ತಿಂಗಳಲ್ಲಿ ಸರಕುಗಳ ರಫ್ತು ಹೆಚ್ಚಳವು ಮುಂಬರುವ ತಿಂಗಳುಗಳಿಗೆ ಶುಭ ಸುದ್ದಿಯಾಗಿದೆ ಎಂದು ವಾಣಿಜ್ಯ ಕಾರ್ಯದರ್ಶಿ ಸುನಿಲ್ ಬರ್ತವಾಲ್ ಹೇಳಿದ್ದಾರೆ. ಮುಖ್ಯವಾಗಿ ಎಲೆಕ್ಟ್ರಾನಿಕ್ಸ್, ಔಷಧಿಗಳು, ರಾಸಾಯನಿಕಗಳು ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಕ್ಷೇತ್ರದ ಸರಕುಗಳ ರಫ್ತು ಹೆಚ್ಚಾಗಿವೆ.
ಈ ಬಗ್ಗೆ ಮಾತನಾಡಿದ ಫೆಡರೇಶನ್ ಆಫ್ ಇಂಡಿಯನ್ ಎಕ್ಸ್ ಪೋರ್ಟ್ ಆರ್ಗನೈಸೇಷನ್ಸ್ (ಎಫ್ಐಇಒ) ಅಧ್ಯಕ್ಷ ಅಶ್ವನಿ ಕುಮಾರ್, 2024-25ರ ಹೊಸ ಹಣಕಾಸು ವರ್ಷವು ಶೇಕಡಾ 1 ಕ್ಕಿಂತ ಹೆಚ್ಚು ಬೆಳವಣಿಗೆಯೊಂದಿಗೆ ಆರಂಭವಾಗಿರುವುದು ಇಂತಹ ಸವಾಲಿನ ಸಮಯದಲ್ಲೂ ಉತ್ತಮ ಸಂಕೇತವಾಗಿದೆ ಎಂದು ಹೇಳಿದರು.
ಯುಎಸ್ ಮತ್ತು ಚೀನಾ ನಡುವಿನ ತೆರಿಗೆ ಪೈಪೋಟಿಯು ಭಾರತದ ರಫ್ತು ಕ್ಷೇತ್ರಕ್ಕೆ ಒಂದು ಅವಕಾಶವಾಗಿ ಬರಬಹುದು ಎಂದು ಕುಮಾರ್ ತಿಳಿಸಿದರು.
ಐಸಿಆರ್ಎ ಮುಖ್ಯ ಅರ್ಥಶಾಸ್ತ್ರಜ್ಞ ಅದಿತಿ ನಾಯರ್ ಮಾತನಾಡಿ, "ಒಟ್ಟಾರೆಯಾಗಿ ಏಪ್ರಿಲ್ 2023 ಮತ್ತು ಏಪ್ರಿಲ್ 2024 ರ ನಡುವೆ ಒಟ್ಟು ಸರಕು ವ್ಯಾಪಾರ ಕೊರತೆಯಲ್ಲಿ ಅರ್ಧದಷ್ಟು ಹೆಚ್ಚಳವು ಜಾಗತಿಕ ಬೆಲೆಗಳ ಏರಿಕೆಯ ಮಧ್ಯೆ ಚಿನ್ನದ ಆಮದು ಮೌಲ್ಯದ ಹೆಚ್ಚಳದಿಂದಾಗಿದೆ." ಎಂದರು. ಪ್ರಸ್ತುತ 2025 ರ ಹಣಕಾಸು ವರ್ಷದಲ್ಲಿ ಚಾಲ್ತಿ ಖಾತೆ ಕೊರತೆಯು ಜಿಡಿಪಿಯ ಶೇಕಡಾ 1.2 ರಷ್ಟಿದೆ.
ಇದನ್ನೂ ಓದಿ : ಬಿಎಂಡಬ್ಲ್ಯು ಹೊಸ ಶ್ಯಾಡೋ ಎಡಿಶನ್ ಸ್ಪೋರ್ಟ್ಸ್ ಕಾರು ಬಿಡುಗಡೆ: ವೈಶಿಷ್ಟ್ಯ, ಬೆಲೆ ಎಷ್ಟು ಗೊತ್ತೇ? - BMW Launches New Car