ನವದೆಹಲಿ: ಹಿಂದಿನ ವರ್ಷಕ್ಕೆ ಹೋಲಿಸಿದರೆ, ಈ ಬಾರಿ ಮಳೆಯ ಕಾರಣದಿಂದ ತಾಪಮಾನ ಇಳಿಕೆಯಾದ ಹಿನ್ನೆಲೆಯಲ್ಲಿ ಭಾರತದ ವಿದ್ಯುಚ್ಛಕ್ತಿ ಬಳಕೆಯು ಜುಲೈನಲ್ಲಿ ಕೇವಲ ಶೇ 3.5ರಷ್ಟು ಏರಿಕೆಯಾಗಿ 145.40 ಶತಕೋಟಿ ಯೂನಿಟ್ ಗಳಿಗೆ (ಬಿಯು) ತಲುಪಿದೆ. ಅಧಿಕೃತ ಅಂಕಿಅಂಶಗಳ ಪ್ರಕಾರ, ಜುಲೈ 2023ರಲ್ಲಿ ವಿದ್ಯುಚ್ಛಕ್ತಿಯ ಬಳಕೆ 140.41 ಬಿಯು ಆಗಿತ್ತು. ಯಾವುದೇ ಒಂದು ದಿನದಲ್ಲಿ ಗರಿಷ್ಠ ವಿದ್ಯುತ್ ಪೂರೈಕೆ (ಪೂರೈಸಲಾದ ಗರಿಷ್ಠ ವಿದ್ಯುತ್ ಬೇಡಿಕೆ)ಯು ಜುಲೈ 2024ರಲ್ಲಿ 226.63 ಗಿಗಾವ್ಯಾಟ್ಗೆ ಏರಿದೆ. ಹಿಂದಿನ ವರ್ಷ ಒಂದು ದಿನದಲ್ಲಿ ಪೂರೈಕೆಯಾದ ಗರಿಷ್ಠ ವಿದ್ಯುಚ್ಛಕ್ತಿಯ ಪ್ರಮಾಣ 208.95 ಗಿಗಾವ್ಯಾಟ್ ಆಗಿತ್ತು.
ಈ ವರ್ಷದ ಮೇ ತಿಂಗಳಲ್ಲಿ ವಿದ್ಯುತ್ ಬೇಡಿಕೆ ಸಾರ್ವಕಾಲಿಕ ಗರಿಷ್ಠ 250.20 ಗಿಗಾವ್ಯಾಟ್ಗೆ ತಲುಪಿತ್ತು. ಈ ಹಿಂದೆ ಸೆಪ್ಟೆಂಬರ್ 2023ರಲ್ಲಿ ಸಾರ್ವಕಾಲಿಕ ಗರಿಷ್ಠ 243.27 ಗಿಗಾವ್ಯಾಟ್ ವಿದ್ಯುತ್ ಬೇಡಿಕೆ ದಾಖಲಾಗಿತ್ತು.
ಮೇ 2024ರಲ್ಲಿ ಹಗಲಿನಲ್ಲಿ 235 ಗಿಗಾವ್ಯಾಟ್ ಮತ್ತು ಸಂಜೆ ಸಮಯದಲ್ಲಿ 225 ಗಿಗಾವ್ಯಾಟ್ ಮತ್ತು ಜೂನ್ ತಿಂಗಳಲ್ಲಿ ಹಗಲಿನಲ್ಲಿ 240 ಗಿಗಾವ್ಯಾಟ್ ಮತ್ತು ಸಂಜೆ ಸಮಯದಲ್ಲಿ 235 ಗಿಗಾವ್ಯಾಟ್ ಗರಿಷ್ಠ ವಿದ್ಯುತ್ ಬೇಡಿಕೆ ಉಂಟಾಗಬಹುದು ಎಂದು ಈ ವರ್ಷದ ಆರಂಭದಲ್ಲಿ ವಿದ್ಯುತ್ ಸಚಿವಾಲಯವು ಅಂದಾಜಿಸಿತ್ತು. ಅಲ್ಲದೆ ಈ ಬೇಸಿಗೆಯಲ್ಲಿ ಗರಿಷ್ಠ ವಿದ್ಯುತ್ ಬೇಡಿಕೆ 260 ಗಿಗಾವ್ಯಾಟ್ ತಲುಪಬಹುದು ಎಂದು ಸಚಿವಾಲಯ ಅಂದಾಜಿಸಿತ್ತು.
ದೇಶದಲ್ಲಿ ಮಾನ್ಸೂನ್ ಪ್ರಾರಂಭವಾಗುವುದರೊಂದಿಗೆ ಹವಾಮಾನ ತಂಪಾಗಿರುವುದರಿಂದ ಹವಾನಿಯಂತ್ರಕಗಳು ಮತ್ತು ದೊಡ್ಡ ಕೂಲರ್ಗಳ ಬಳಕೆ ಕಡಿಮೆಯಾಗಿದೆ. ಹೀಗಾಗಿ ವಿದ್ಯುಚ್ಛಕ್ತಿಯ ಬೇಡಿಕೆಯೂ ತಗ್ಗಿದೆ ಎಂದು ತಜ್ಞರು ಹೇಳಿದ್ದಾರೆ.
ಆದಾಗ್ಯೂ, ವಾತಾವರಣದಲ್ಲಿ ಹೆಚ್ಚಿನ ತೇವಾಂಶದಿಂದಾಗಿ ಮುಂದಿನ ದಿನಗಳಲ್ಲಿ ವಿದ್ಯುತ್ ಬೇಡಿಕೆ ಮತ್ತು ಬಳಕೆ ಸ್ಥಿರವಾಗಿರುತ್ತದೆ ಹಾಗೂ ಹವಾನಿಯಂತ್ರಕಗಳ ಬಳಕೆ ಮತ್ತೆ ಅನಿವಾರ್ಯವಾಗಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಭಾರತೀಯ ಹವಾಮಾನ ಇಲಾಖೆ (ಐಎಂಡಿ)ಯ ಪ್ರಕಾರ, ಮಾನ್ಸೂನ್ ಇಡೀ ದೇಶವನ್ನು ಆವರಿಸಿದ್ದು, ಭಾರತದಾದ್ಯಂತ ವಿವಿಧ ಸ್ಥಳಗಳಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ.
ಭಾರತದ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಹೆಚ್ಚಳ: ಭಾರತದ ಒಟ್ಟು ಸ್ಥಾಪಿತ ವಿದ್ಯುತ್ ಉತ್ಪಾದನಾ ಸಾಮರ್ಥ್ಯವು ಕಳೆದ 10 ವರ್ಷಗಳಲ್ಲಿ ಶೇಕಡಾ 80 ರಷ್ಟು ಏರಿಕೆಯಾಗಿ 2024 ರ ಜೂನ್ನಲ್ಲಿ 4,46,190 ಮೆಗಾವ್ಯಾಟ್ (4.46 ಗಿಗಾವ್ಯಾಟ್) ಗೆ ತಲುಪಿದೆ ಎಂದು ಸೋಮವಾರ ಸಂಸತ್ತಿಗೆ ಮಾಹಿತಿ ನೀಡಲಾಗಿದೆ. 2014ರ ಮಾರ್ಚ್ ನಲ್ಲಿ 2,48,554 ಮೆಗಾವ್ಯಾಟ್ ಇದ್ದ ಸ್ಥಾಪಿತ ಸಾಮರ್ಥ್ಯ ಜೂನ್ ನಲ್ಲಿ 4,46,190 ಮೆಗಾವ್ಯಾಟ್ ತಲುಪಿದೆ ಎಂದು ಕೇಂದ್ರ ಇಂಧನ ಖಾತೆ ರಾಜ್ಯ ಸಚಿವ ಶ್ರೀಪಾದ್ ನಾಯಕ್ ತಿಳಿಸಿದ್ದಾರೆ. ಕಲ್ಲಿದ್ದಲು ಆಧಾರಿತ ವಿದ್ಯುತ್ ನ ಸ್ಥಾಪಿತ ಸಾಮರ್ಥ್ಯವು ಮಾರ್ಚ್ 2014 ರಲ್ಲಿ 1,39,663 ಮೆಗಾವ್ಯಾಟ್ನಿಂದ 2024 ರ ಜೂನ್ನಲ್ಲಿ 2,10,969 ಮೆಗಾವ್ಯಾಟ್ಗೆ ಏರಿಕೆಯಾಗಿದೆ ಎಂದು ಅವರು ರಾಜ್ಯಸಭೆಗೆ ನೀಡಿದ ಉತ್ತರದಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಸಾಫ್ಟ್ ಬ್ಯಾಂಕ್ ಬೆಂಬಲಿತ ಯುನಿಕಾಮರ್ಸ್ ಐಪಿಒ ಆಗಸ್ಟ್ 6ರಂದು ಬಿಡುಗಡೆ - Stock Market