ನವದೆಹಲಿ: ಕಳೆದ ಐದು ವರ್ಷಗಳಲ್ಲಿ ಭಾರತದಲ್ಲಿ ಐಷಾರಾಮಿ ಮತ್ತು ಪ್ರೀಮಿಯಂ ಮನೆಗಳ ಮಾರಾಟವು 2019 ರ ಮೊದಲ ತ್ರೈಮಾಸಿಕದಲ್ಲಿ ಇದ್ದ ಶೇಕಡಾ 7 ರಿಂದ 2024 ರ ಮೊದಲ ತ್ರೈಮಾಸಿಕದಲ್ಲಿ ಶೇಕಡಾ 21 ಕ್ಕೆ ಏರಿಕೆಯಾಗಿದೆ ಎಂದು ವರದಿಯೊಂದು ತಿಳಿಸಿದೆ. ಇದೇ ಅವಧಿಯಲ್ಲಿ ಕೈಗೆಟುಕುವ ಬೆಲೆಯ ಮನೆಗಳ ಮಾರಾಟ ಶೇಕಡಾ 20 ರಷ್ಟು ಕುಸಿತವಾಗಿದೆ ಎಂದು ವರದಿ ಶುಕ್ರವಾರ ತೋರಿಸಿದೆ.
ಈ ವರ್ಷದ ಜನವರಿ - ಮಾರ್ಚ್ ತ್ರೈಮಾಸಿಕದಲ್ಲಿ (ಕ್ಯೂ 1) ಅಗ್ರ ಏಳು ನಗರಗಳಲ್ಲಿ 1.30 ಲಕ್ಷ ಮನೆಗಳು ಮಾರಾಟವಾಗಿದ್ದು, ಇದರಲ್ಲಿ ಐಷಾರಾಮಿ ಮನೆಗಳ ಪಾಲು ಶೇಕಡಾ 21 ರಷ್ಟಿದೆ. ಈ ಅವಧಿಯಲ್ಲಿ ಸುಮಾರು 27,070 ಐಷಾರಾಮಿ ಮನೆಗಳು ಮಾರಾಟವಾಗಿವೆ. ಐದು ವರ್ಷಗಳ ಹಿಂದೆ 2019 ರ ಮೊದಲ ತ್ರೈಮಾಸಿಕದಲ್ಲಿ ಈ ಪಾಲು ಕೇವಲ ಶೇಕಡಾ 7 ರಷ್ಟಿತ್ತು. ಮತ್ತೊಂದೆಡೆ 2024 ರ ಮೊದಲ ತ್ರೈಮಾಸಿಕದಲ್ಲಿ ಕೈಗೆಟುಕುವ ದರದ ವಿಭಾಗದಲ್ಲಿ ಸುಮಾರು 26,545 ಮನೆಗಳು ಮಾರಾಟವಾಗಿವೆ.
2024 ರ ಮೊದಲ ತ್ರೈಮಾಸಿಕದಲ್ಲಿ ಬೆಂಗಳೂರು, ಮುಂಬೈ ಮೆಟ್ರೋಪಾಲಿಟನ್ ಪ್ರದೇಶ (ಎಂಎಂಆರ್), ಚೆನ್ನೈ, ಪುಣೆ ಮತ್ತು ಹೈದರಾಬಾದ್ ನಗರಗಳಲ್ಲಿ ಮಧ್ಯಮ ಶ್ರೇಣಿ ಮತ್ತು ಪ್ರೀಮಿಯಂ ವಿಭಾಗದ (40 ಲಕ್ಷ ರೂ.ಗಳಿಂದ 1.5 ಕೋಟಿ ರೂ.ಗಳ ಬೆಲೆಯ ಘಟಕಗಳು) ಮನೆಗಳು ಗರಿಷ್ಠ ಪ್ರಮಾಣದಲ್ಲಿ ಮಾರಾಟವಾಗಿವೆ.
ಇನ್ನು ಕೈಗೆಟುಕುವ ಮನೆಗಳ ಮಾರಾಟ ನೋಡುವುದಾದರೆ - ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ಒಟ್ಟು ಹೊಸದಾಗಿ ನಿರ್ಮಾಣವಾದ ಮನೆಗಳ ಪೈಕಿ ಇವುಗಳ ಪಾಲು ಶೇಕಡಾ 18 ಕ್ಕೆ ಇಳಿದಿದೆ ಎಂದು ಅಂಕಿ - ಅಂಶಗಳಿಂದ ತಿಳಿದು ಬಂದಿದೆ.
ಸಿಪ್ಲಾ ನಿವ್ವಳ ಲಾಭ ಏರಿಕೆ: 2023-24ರ ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ ಸಿಪ್ಲಾ ಫಾರ್ಮಾ ಕಂಪನಿಯ ನಿವ್ವಳ ಲಾಭ ಶೇಕಡಾ 78.5 ರಷ್ಟು ಏರಿಕೆಯಾಗಿ 939 ಕೋಟಿ ರೂ.ಗೆ ತಲುಪಿದೆ ಎಂದು ಶುಕ್ರವಾರ ವರದಿ ಮಾಡಿದೆ. ಕಾರ್ಯಾಚರಣೆಗಳಿಂದ ಕಂಪನಿಯ ಆದಾಯವು ವರ್ಷದಿಂದ ವರ್ಷಕ್ಕೆ ಶೇಕಡಾ 7 ರಷ್ಟು ಏರಿಕೆಯಾಗಿ ನಾಲ್ಕನೇ ತ್ರೈಮಾಸಿಕದಲ್ಲಿ 6,163 ಕೋಟಿ ರೂ.ಗೆ ತಲುಪಿದೆ.
ಮಾರ್ಚ್ 2024 ಕ್ಕೆ ಕೊನೆಗೊಳ್ಳುವ ಹಣಕಾಸು ವರ್ಷಕ್ಕೆ ಪ್ರತಿ ಷೇರಿಗೆ 13 ರೂ.ಗಳ ಅಂತಿಮ ಲಾಭಾಂಶವನ್ನು ಪಾವತಿಸಲು ಸಿಪ್ಲಾ ನಿರ್ದೇಶಕರ ಮಂಡಳಿ ಶಿಫಾರಸು ಮಾಡಿದೆ. ಕಂಪನಿಯ ಇಬಿಐಟಿಡಿಎ (ಬಡ್ಡಿ, ತೆರಿಗೆ, ಸವಕಳಿ ಮತ್ತು ಅಮೋರ್ಟೈಸೇಶನ್ಗೆ ಮುಂಚಿನ ಗಳಿಕೆ) ತ್ರೈಮಾಸಿಕದಲ್ಲಿ ಶೇಕಡಾ 13 ರಷ್ಟು ಏರಿಕೆಯಾಗಿ 1,316 ಕೋಟಿ ರೂ.ಗೆ ತಲುಪಿದೆ.