ನವದೆಹಲಿ: ಭಾರತದಲ್ಲಿ ಒಂದು ವರ್ಷದಲ್ಲಿ ಇಂಟರ್‌ನೆಟ್ ಚಂದಾದಾರರ ಸಂಖ್ಯೆ 7.3 ಕೋಟಿ ಮತ್ತು ಬ್ರಾಡ್ಬ್ಯಾಂಡ್ ಚಂದಾದಾರರ ಸಂಖ್ಯೆ 7.8 ಕೋಟಿಯಷ್ಟು ಹೆಚ್ಚಾಗಿದ್ದು, ದೇಶದ ಒಟ್ಟಾರೆ ದೂರವಾಣಿ ಬಳಕೆದಾರರ ಸಂಖ್ಯೆ 119.9 ಕೋಟಿಗೆ ತಲುಪಿದೆ ಎಂದು ಕೇಂದ್ರ ಸರ್ಕಾರ ಮಂಗಳವಾರ ತಿಳಿಸಿದೆ.
ಒಟ್ಟು ಇಂಟರ್‌ನೆಟ್ ಚಂದಾದಾರರ ಸಂಖ್ಯೆ ಮಾರ್ಚ್ 2023 ರ ಕೊನೆಯಲ್ಲಿ ಇದ್ದ 88.1 ಕೋಟಿಯಿಂದ ಈ ವರ್ಷದ ಮಾರ್ಚ್ ಅಂತ್ಯದ ವೇಳೆಗೆ 95.4 ಕೋಟಿಗೆ ಏರಿದೆ. ಇದು ವಾರ್ಷಿಕ ಶೇಕಡಾ 8.3ರಷ್ಟು ಬೆಳವಣಿಗೆಯಾಗಿದೆ. ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾದ (ಟ್ರಾಯ್) ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಬ್ರಾಡ್ ಬ್ಯಾಂಡ್ ಚಂದಾದಾರರ ಸಂಖ್ಯೆ ಮಾರ್ಚ್ 2023ರಲ್ಲಿ 84.6 ಕೋಟಿಯಿಂದ ಮಾರ್ಚ್ 2024 ರಲ್ಲಿ 92.4 ಕೋಟಿಗೆ ಏರಿಕೆಯಾಗಿದೆ.
7.8 ಕೋಟಿಯಷ್ಟು ಬೃಹತ್ ಸಂಖ್ಯೆ ಬ್ರಾಡ್ ಬ್ಯಾಂಡ್ ಚಂದಾದಾರರ ಸೇರ್ಪಡೆಯೊಂದಿಗೆ ಶೇಕಡಾ 9.15ರ ಈ ದೃಢವಾದ ಬೆಳವಣಿಗೆಯ ದರವು ಹೈಸ್ಪೀಡ್ ಸಂಪರ್ಕದ ಮಹತ್ವವನ್ನು ಒತ್ತಿಹೇಳುತ್ತದೆ ಎಂದು ಟೆಲಿಕಾಂ ನಿಯಂತ್ರಕ ಸಂಸ್ಥೆ ಟ್ರಾಯ್ ಹೇಳಿದೆ.
ಸರಿಹೊಂದಿಸಿದ ಒಟ್ಟು ಆದಾಯ (ಎಜಿಆರ್) 2022-23ರಲ್ಲಿ 2,49,908 ಕೋಟಿ ರೂ.ಗಳಿಂದ 2023-24ರಲ್ಲಿ 2,70,504 ಕೋಟಿ ರೂ.ಗೆ ಏರಿದೆ. ಭಾರತದಲ್ಲಿ ಒಟ್ಟಾರೆ ಟೆಲಿ-ಸಾಂದ್ರತೆಯು ಮಾರ್ಚ್ 2023ರ ಕೊನೆಯಲ್ಲಿ ಇದ್ದ ಶೇಕಡಾ 84.51 ರಿಂದ ಈ ವರ್ಷದ ಮಾರ್ಚ್ನಲ್ಲಿ ಶೇಕಡಾ 85.69 ಕ್ಕೆ ಏರಿದೆ. ವೈರ್ ಲೆಸ್ ಡೇಟಾ ಚಂದಾದಾರರ ಸಂಖ್ಯೆ ಮಾರ್ಚ್ 2023 ರ ಕೊನೆಯಲ್ಲಿ ಇದ್ದ 84.6 ಕೋಟಿಯಿಂದ ಮಾರ್ಚ್ 2024ರ ಅಂತ್ಯದ ವೇಳೆಗೆ 91.3 ಕೋಟಿಗೆ ಏರಿಕೆಯಾಗಿದೆ.
ಇದಲ್ಲದೆ ವೈರ್‌ಲೆಸ್ ಡೇಟಾ ಬಳಕೆಯ ಒಟ್ಟು ಪ್ರಮಾಣವು 2022-23ರಲ್ಲಿ ಇದ್ದ 1,60,054 ಪಿಬಿ (ಪೆಟಾಬೈಟ್)ನಿಂದ 2023-24ರಲ್ಲಿ 1,94,774 ಪಿಬಿಗೆ ಏರಿದೆ. ಇದು ವಾರ್ಷಿಕವಾಗಿ 21.69ರಷ್ಟು ಬೆಳವಣಿಗೆಯಾಗಿದೆ. ಭಾರತದಲ್ಲಿ ದೂರವಾಣಿ ಚಂದಾದಾರರ ಸಂಖ್ಯೆ ಕಳೆದ ವರ್ಷದ ಮಾರ್ಚ್ ಅಂತ್ಯದ ವೇಳೆಗೆ ಇದ್ದ 117.2 ಕೋಟಿಯಿಂದ 119.9 ಕೋಟಿಗೆ ಏರಿಕೆಯಾಗಿದ್ದು, ವಾರ್ಷಿಕ ಶೇಕಡಾ 2.3ರಷ್ಟು ಬೆಳವಣಿಗೆಯ ದರವನ್ನು ದಾಖಲಿಸಿದೆ.
2022-23ರಲ್ಲಿ 919ರಷ್ಟಿದ್ದ ಪ್ರತಿ ಚಂದಾದಾರರ ಬಳಕೆಯ ಸರಾಸರಿ ನಿಮಿಷಗಳು 2023-24ರಲ್ಲಿ 963ಕ್ಕೆ ಏರಿಕೆಯಾಗಿದ್ದು, ಇದರ ವಾರ್ಷಿಕ ಬೆಳವಣಿಗೆ ದರ ಶೇ 4.73ರಷ್ಟಿದೆ.