ನವದೆಹಲಿ: ಸರಕು ಸೇವಾ ತೆರಿಗೆಯು (ಜಿಎಸ್‌ಟಿ) ಪ್ರತಿ ತಿಂಗಳೂ ಹೆಚ್ಚುತ್ತಲೇ ಇದೆ. ಆಗಸ್ಟ್ ತಿಂಗಳಲ್ಲಿ ಜಿಎಸ್‌ಟಿ ಸಂಗ್ರಹಣೆಯು 1.75 ಲಕ್ಷ ಕೋಟಿ ತಲುಪಿದೆ. ಇದು ಕಳೆದ ವರ್ಷದ ಆಗಸ್ಟ್ಗೆ ಹೋಲಿಸಿದರೆ ಶೇಕಡಾ 10 ರಷ್ಟು ಹೆಚ್ಚಾಗಿದೆ. ಇದು ಹೆಚ್ಚಿನ ದೇಶೀಯ ಬಳಕೆಯನ್ನು ಪ್ರತಿಬಿಂಬಿಸುತ್ತದೆ. ಕಳೆದ ಆಗಸ್ಟ್‌ನಲ್ಲಿ 1.59 ಲಕ್ಷ ಕೋಟಿ ರೂಪಾಯಿ ಸಂಗ್ರಹವಾಗಿತ್ತು.
ಜಿಎಸ್‌ಟಿ ತೆರಿಗೆ ಸಂಗ್ರಹದ ಬಗ್ಗೆ ಕೇಂದ್ರ ಸರ್ಕಾರ ಭಾನುವಾರ ಅಂಕಿ ಅಂಶ ಬಿಡುಗಡೆ ಮಾಡಿದ್ದು, ದೇಶೀಯ ವಹಿವಾಟುಗಳಿಂದ ಒಟ್ಟು ಜಿಎಸ್‌ಟಿ ಆದಾಯವು ಶೇಕಡಾ 9.2 ರಷ್ಟು ಏರಿಕೆಯಾಗಿ ಸುಮಾರು 1.25 ಲಕ್ಷ ಕೋಟಿ ರೂಪಾಯಿಗಳಿಗೆ ತಲುಪಿದೆ. ಆಮದು ಸರಕುಗಳ ಮೇಲೆ ಹಾಕುವ ತೆರಿಗೆಯಿಂದ 49,976 ಕೋಟಿ ರೂಪಾಯಿ ಆದಾಯ ಬಂದಿದೆ. ಅಂದರೆ, ಶೇಕಡಾ 12.1 ರಷ್ಟು ಹೆಚ್ಚಳ ಕಂಡಿದೆ.
ಜುಲೈ ತಿಂಗಳಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮೂಲಕ 1.82 ಲಕ್ಷ ಕೋಟಿ ರೂಪಾಯಿ ವರಮಾನ ಸಂಗ್ರಹವಾಗಿತ್ತು. ಇದು ಜಿಎಸ್‌ಟಿ ಜಾರಿಗೆ ಬಂದ ಏಳು ವರ್ಷಗಳ ಅವಧಿಯಲ್ಲಿ ಅತಿಹೆಚ್ಚು ಆದಾಯ ಸಂಗ್ರಹವಾದ ಮೂರನೇ ತಿಂಗಳಾಗಿತ್ತು. ಪ್ರಸಕ್ತ ವರ್ಷದ ಏಪ್ರಿಲ್ ತಿಂಗಳಿನಲ್ಲಿ ಆದಾಯವ ಸಂಗ್ರಹವು 2.10 ಲಕ್ಷ ಕೋಟಿ ರೂಪಾಯಿ ದಾಟುವ ಮೂಲಕ ಹೊಸ ದಾಖಲೆ ನಿರ್ಮಾಣವಾಗಿತ್ತು. ಕಳೆದ ವರ್ಷದ ಏಪ್ರಿಲ್ನಲ್ಲಿ 1.87 ಲಕ್ಷ ಕೋಟಿ ಸಂಗ್ರಹವಾಗಿತ್ತು.
ಸಂಗ್ರಹವಾದ ಜಿಎಸ್ಟಿಯಲ್ಲಿ ರಾಜ್ಯಗಳಿಗೆ ಒಟ್ಟು 24,460 ಕೋಟಿ ರೂಪಾಯಿ ಮರುಪಾವತಿ ಮಾಡಲಾಗಿದೆ. ಇದು ಹಿಂದಿನ ವರ್ಷದ ಅವಧಿಯಲ್ಲಿ ನೀಡಲಾದ ಮರುಪಾವತಿಗಿಂತ ಶೇಕಡಾ 38 ರಷ್ಟು ಹೆಚ್ಚು. ಮರುಪಾವತಿ ನೀಡಿದ ಬಳಿಕ ನಿವ್ವಳ ಜಿಎಸ್‌ಟಿ ಆದಾಯವು ಶೇಕಡಾ 6.5 ರಷ್ಟಿದೆ.
ಡೆಲಾಯ್ಟ್ ಇಂಡಿಯಾದ ಪಾಲುದಾರರಾದ ಎಂ.ಎಸ್. ಮಣಿ ಮಾತನಾಡಿ, ಈ ವರ್ಷದ ಹಬ್ಬದ ಋತುವಿನಿಂದಾಗಿ ಜಿಎಸ್‌ಟಿ ಸಂಗ್ರಹಣೆಯಲ್ಲಿ ಶೇಕಡಾ 10 ರಷ್ಟು ಹೆಚ್ಚಳವಾಗಿದೆ. ಮುಂಬರುವ ಹಬ್ಬದ ತಿಂಗಳುಗಳಲ್ಲಿ ಈ ಸುಧಾರಣೆ ಕಂಡುಬರಲಿದೆ. ಮಹಾರಾಷ್ಟ್ರ, ಕರ್ನಾಟಕ, ಉತ್ತರಪ್ರದೇಶ, ಮಧ್ಯಪ್ರದೇಶ ಮತ್ತು ಹರಿಯಾಣದಂತಹ ರಾಜ್ಯಗಳಲ್ಲಿ ಆದಾಯ ಸಂಗ್ರಹಣೆಯು ಮತ್ತೊಮ್ಮೆ ಎರಡಂಕಿ ದಾಟಿರುವುದು ಆ ರಾಜ್ಯಗಳ ಆರ್ಥಿಕ ಸಾಮರ್ಥ್ಯವನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ.
ಆದಾಗ್ಯೂ, ಗುಜರಾತ್, ಆಂಧ್ರಪ್ರದೇಶ ಮತ್ತು ತಮಿಳುನಾಡಿನಂತಹ ದೊಡ್ಡ ರಾಜ್ಯಗಳಲ್ಲಿ ಒಂದೇ ಅಂಕಿಯ ಹೆಚ್ಚಳವು ಈ ರಾಜ್ಯಗಳಲ್ಲಿನ ತೆರಿಗೆ ಸಂಗ್ರಹ ಅಧಿಕಾರಿಗಳ ದೃಢತೆಯ ಮೇಲೆ ಅನುಮಾನ ಮೂಡಿಸುತ್ತದೆ ಎಂದು ಮಣಿ ತಿಳಿಸಿದ್ದಾರೆ.
ಇದನ್ನೂ ಓದಿ: ಸೆಪ್ಟೆಂಬರ್ 9ರಂದು ಜಿಎಸ್‌ಟಿ ಕೌನ್ಸಿಲ್ ಸಭೆ: ದರ ತರ್ಕಬದ್ಧಗೊಳಿಸುವಿಕೆಯ ಬಗ್ಗೆ ಚರ್ಚೆ - GST COUNCIL