ನವದೆಹಲಿ : ಈರುಳ್ಳಿ ರಫ್ತು ಮೇಲಿನ ನಿಷೇಧವನ್ನು ಸರ್ಕಾರ ಶನಿವಾರ ತೆಗೆದುಹಾಕಿದೆ ಎಂದು ವಿದೇಶಿ ವ್ಯಾಪಾರ ನಿರ್ದೇಶನಾಲಯ (ಡಿಜಿಎಫ್ಟಿ) ಅಧಿಸೂಚನೆಯಲ್ಲಿ ತಿಳಿಸಿದೆ. ಸುಮಾರು ಆರು ತಿಂಗಳ ಹಿಂದೆ ಈರುಳ್ಳಿ ರಫ್ತಿನ ಮೇಲೆ ನಿಷೇಧ ಹೇರಲಾಗಿತ್ತು.
"ಈರುಳ್ಳಿಯ ರಫ್ತು ನೀತಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮತ್ತು ಮುಂದಿನ ಆದೇಶದವರೆಗೆ ಪ್ರತಿ ಮೆಟ್ರಿಕ್ ಟನ್ಗೆ ಕನಿಷ್ಠ 550 ಡಾಲರ್ ರಫ್ತು ಬೆಲೆಗೆ ಒಳಪಟ್ಟು ರಫ್ತಿಗೆ ಅನುಮತಿ ನೀಡಲಾಗಿದೆ" ಎಂದು ಡಿಜಿಎಫ್ಟಿ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ದೇಶದ ಗ್ರಾಹಕರಿಗೆ ಈರುಳ್ಳಿ ಬೆಲೆ ಹೆಚ್ಚಾಗದಂತೆ ಮತ್ತು ರೈತರಿಗೆ ಸೂಕ್ತ ದರವನ್ನು ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಈ ಕ್ರಮ ತೆಗೆದುಕೊಂಡಿದೆ. ಏಪ್ರಿಲ್ 27 ರಂದು ಸರ್ಕಾರವು ಆರು ನೆರೆಯ ದೇಶಗಳಾದ ಬಾಂಗ್ಲಾದೇಶ, ಯುಎಇ, ಭೂತಾನ್, ಬಹ್ರೇನ್, ಮಾರಿಷಸ್ ಮತ್ತು ಶ್ರೀಲಂಕಾಕ್ಕೆ 99,150 ಮೆಟ್ರಿಕ್ ಟನ್ ಈರುಳ್ಳಿಯನ್ನು ರಫ್ತು ಮಾಡಲು ಅನುಮತಿ ನೀಡಿತ್ತು.
ಈ ದೇಶಗಳಿಗೆ ಈರುಳ್ಳಿ ರಫ್ತು ಮಾಡುವ ಏಜೆನ್ಸಿಯಾದ ರಾಷ್ಟ್ರೀಯ ಸಹಕಾರಿ ರಫ್ತು ಲಿಮಿಟೆಡ್ (ಎನ್ಸಿಇಎಲ್) ದೇಶೀಯ ಈರುಳ್ಳಿಯನ್ನು ಇ-ಪ್ಲಾಟ್ಫಾರ್ಮ್ ಮೂಲಕ ಎಲ್ 1 ಬೆಲೆಯಲ್ಲಿ ರಫ್ತು ಮಾಡಲು ಪಡೆದುಕೊಂಡಿತ್ತು ಮತ್ತು ಆಮದು ಮಾಡಿಕೊಳ್ಳುವ ದೇಶದ ಸರ್ಕಾರದಿಂದ ನಾಮನಿರ್ದೇಶನಗೊಂಡ ಏಜೆನ್ಸಿಗಳಿಗೆ ಶೇಕಡಾ 100 ರಷ್ಟು ಮುಂಗಡ ಪಾವತಿ ಆಧಾರದ ಮೇಲೆ ಮಾತುಕತೆಯ ದರದಲ್ಲಿ ಈರುಳ್ಳಿಯನ್ನು ಪೂರೈಸಿತ್ತು ಎಂದು ಆಹಾರ ಸಚಿವಾಲಯ ತಿಳಿಸಿದೆ.
ಮಧ್ಯಪ್ರಾಚ್ಯ ಮತ್ತು ಕೆಲವು ಯುರೋಪಿಯನ್ ದೇಶಗಳ ರಫ್ತು ಮಾರುಕಟ್ಟೆಗಳಿಗಾಗಿ ವಿಶೇಷವಾಗಿ ಬೆಳೆದ 2000 ಮೆಟ್ರಿಕ್ ಟನ್ (ಎಂಟಿ) ಬಿಳಿ ಈರುಳ್ಳಿಯನ್ನು ರಫ್ತು ಮಾಡಲು ಕೂಡ ಸರ್ಕಾರ ಅನುಮತಿ ನೀಡಿತ್ತು. ಸಂಪೂರ್ಣವಾಗಿ ರಫ್ತು ಆಧಾರಿತವಾಗಿರುವುದರಿಂದ, ಹೆಚ್ಚಿನ ಬೀಜ ವೆಚ್ಚ, ಉತ್ತಮ ಕೃಷಿ ಪದ್ಧತಿ (ಜಿಎಪಿ) ಅಳವಡಿಕೆ ಮತ್ತು ಕಟ್ಟುನಿಟ್ಟಾದ ಗರಿಷ್ಠ ಶೇಷ ಮಿತಿಗಳ (ಎಂಆರ್ಎಲ್) ಅವಶ್ಯಕತೆಗಳ ಅನುಸರಣೆಯಿಂದಾಗಿ ಬಿಳಿ ಈರುಳ್ಳಿಯ ಉತ್ಪಾದನಾ ವೆಚ್ಚವು ಇತರ ಈರುಳ್ಳಿಗಳಿಗಿಂತ ಹೆಚ್ಚಾಗಿದೆ.
ಕಳೆದ ವರ್ಷದ ಡಿಸೆಂಬರ್ನಲ್ಲಿ ಈರುಳ್ಳಿ ರಫ್ತನ್ನು ನಿಷೇಧಿಸಿತ್ತು. ಹಿಂದಿನ ವರ್ಷಕ್ಕೆ ಹೋಲಿಸಿದರೆ 2023-24ರಲ್ಲಿ ಖಾರಿಫ್ ಮತ್ತು ರಾಬಿ ಬೆಳೆಗಳ ಉತ್ಪಾದನೆ ಕಡಿಮೆಯಾಗಲಿದೆ ಎಂಬ ನಿರೀಕ್ಷೆಗಳಿಂದ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿರುವುದರಿಂದ ದೇಶದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಈರುಳ್ಳಿ ಲಭ್ಯವಾಗುವಂತೆ ಮಾಡಲು ಮತ್ತು ಬೆಲೆಗಳನ್ನು ನಿಯಂತ್ರಣದಲ್ಲಿಡಲು ರಫ್ತು ನಿಷೇಧಿಸಲಾಗಿತ್ತು.
ಇದನ್ನೂ ಓದಿ : ಅಗ್ಗದ ದರದಲ್ಲಿ ರಷ್ಯಾದಿಂದ ಕಚ್ಚಾತೈಲ ಖರೀದಿ: ಭಾರತದ ಖಜಾನೆಗೆ 7.9 ಬಿಲಿಯನ್ ಡಾಲರ್ ಉಳಿತಾಯ - Cheap Oil from Russia