ನವದೆಹಲಿ: ಸಾರ್ವತ್ರಿಕ ಚುನಾವಣೆಗೆ ಮುನ್ನ ಕೇಂದ್ರ ಸರ್ಕಾರ ಹಲವು ಮಹತ್ವದ ನಿರ್ಧಾರಗಳನ್ನು ಪ್ರಕಟಿಸಿದೆ. ಉಜ್ವಲ ಯೋಜನೆಯಡಿ ಬಡ ಮಹಿಳೆಯರಿಗೆ ಪ್ರತಿ ಎಲ್‌ಪಿಜಿ ಸಿಲಿಂಡರ್ ಸಬ್ಸಿಡಿಯನ್ನು ಏಪ್ರಿಲ್ 1 ರಿಂದ ಮುಂದಿನ ಆರ್ಥಿಕ ವರ್ಷದವರೆಗೂ 300 ರೂ.ಗಳ ಸಹಾಯಧನವನ್ನು ವಿಸ್ತರಿಸುವುದಾಗಿ ಕೇಂದ್ರ ಸರ್ಕಾರ ಗುರುವಾರ ಘೋಷಿಸಿದೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಸರಕಾರವು ಸಬ್ಸಿಡಿಯನ್ನು 200 ರೂ.ನಿಂದ 300 ರೂಗೆ ಹೆಚ್ಚಳ ಮಾಡಿತ್ತು. ಪ್ರತಿ 14.2-ಕೆಜಿ ಸಿಲಿಂಡರ್‌ಗಳಂತೆ ವರ್ಷಕ್ಕೆ 12 ರೀಫಿಲ್‌ಗಳಿಗೆ ಪ್ರತಿ ಸಿಲಿಂಡರ್ ಭರ್ತಿಗೆ 300 ರೂ. ಸಹಾಯಧನವನ್ನು ಘೋಷಿಸಲಾಗಿತ್ತು. ಈ ಘೋಷಣೆ ಇದೇ ಮಾರ್ಚ್ 31ಕ್ಕೆ ಕೊನೆಗೊಳ್ಳಲಿತ್ತು. ಹೀಗಾಗಿ ಈ ಸಹಾಯಧನವನ್ನು ಮುಂದಿನ ಹಣಕಾಸು ವರ್ಷಕ್ಕೂ ವಿಸ್ತರಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
ಈ ಸಬ್ಸಿಡಿಯನ್ನು 2024-25ರವರೆಗೆ ವಿಸ್ತರಿಸಲು ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ - ಸಿಸಿಇಎ ನಿರ್ಧರಿಸಿದೆ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ಮಾಹಿತಿ ನೀಡಿದ್ದಾರೆ. ಸರ್ಕಾರದ ಈ ನಿರ್ಧಾರದಿಂದಾಗಿ ಸುಮಾರು 10 ಕೋಟಿ ಕುಟುಂಬಗಳಿಗೆ ಅನುಕೂಲವಾಗಲಿದ್ದು, ಸರ್ಕಾರಕ್ಕೆ 12,000 ಕೋಟಿ ರೂ. ಹೊರೆ ಆಗಲಿದೆ. ಇದೇ ಏಪ್ರಿಲ್ ಮೇನಲ್ಲಿ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಈ ಘೋಷಣೆ ಮಾಡಿದೆ.
ಲಿಕ್ವಿಫೈಡ್ ಪೆಟ್ರೋಲಿಯಂ ಗ್ಯಾಸ್ LPG, ಗ್ರಾಮೀಣ ಮತ್ತು ವಂಚಿತ ಬಡ ಕುಟುಂಬಗಳಿಗೆ ಲಭ್ಯವಾಗುವಂತೆ ಮಾಡ ಬಡ ಕುಟುಂಬಗಳ ವಯಸ್ಕ ಮಹಿಳೆಯರಿಗೆ ಠೇವಣಿ - ಮುಕ್ತ LPG ಸಂಪರ್ಕಗಳನ್ನು ಒದಗಿಸಲು ಸರ್ಕಾರವು ಮೇ 2016 ರಲ್ಲಿ ಪ್ರಧಾನ ಮಂತ್ರಿ ಉಜ್ವಲ ಯೋಜನೆ ಪ್ರಾರಂಭಿಸಿತ್ತು. ಈ ಯೋಜನೆ ಮೂಲಕ ಉಚಿತ ಸಂಪರ್ಕವನ್ನು ನೀಡಲಾಗಿತ್ತು. ಆದರೆ, ಈ ಯೋಜನೆಯ ಫಲಾನುಭವಿಗಳು ಮಾರುಕಟ್ಟೆ ಬೆಲೆಯಲ್ಲಿ ಎಲ್‌ಪಿಜಿ ಸಿಲಿಂಡರ್ ಖರೀದಿಸಬೇಕಾಗಿತ್ತು.
ಇಂಧನ ಬೆಲೆಗಳು ಗಗನಕ್ಕೇರುತ್ತಿದ್ದಂತೆ, ಸರ್ಕಾರವು ಮೇ 2022 ರಲ್ಲಿ PMUY ಫಲಾನುಭವಿಗಳಿಗೆ ಪ್ರತಿ ಸಿಲಿಂಡರ್‌ಗೆ ರೂ 200 ಸಬ್ಸಿಡಿ ನೀಡುವುದಾಗಿ ಘೋಷಿಸಿತ್ತು. ಇದನ್ನು ಅಕ್ಟೋಬರ್ 2023 ರಲ್ಲಿ 300 ರೂ.ಗೆ ಹೆಚ್ಚಳ ಮಾಡಿ ಆದೇಶ ನೀಡಲಾಗಿತ್ತು. ಮಧ್ಯಪ್ರದೇಶ ಮತ್ತು ರಾಜಸ್ಥಾನ ಸೇರಿದಂತೆ ಐದು ರಾಜ್ಯಗಳ ವಿಧಾನಸಭಾ ಚುನಾವಣೆಗಳಿಗೆ ಮುಂಚಿತವಾಗಿ ಈ ನಿರ್ಧಾರ ಕೈಗೊಳ್ಳಲಾಗಿತ್ತು. ಉಜ್ವಲ ಫಲಾನುಭವಿಗಳಿಗೆ ಪ್ರತಿ ಸಿಲಿಂಡರ್ 300 ರೂ ಸಬ್ಸಿಡಿ ಸಿಗುವ ಹಿನ್ನೆಲೆಯಲ್ಲಿ 655ರೂ. ಮಾತ್ರವೇ ಉಜ್ವಲ ಯೋಜನಾದಾರರು ಖರ್ಚು ಮಾಡಬೇಕಾಗುತ್ತದೆ.
ಇದನ್ನು ಓದಿ:ಕೇಂದ್ರ ಸರ್ಕಾರಿ ನೌಕರರಿಗೆ ಶಿವರಾತ್ರಿ ಬಂಪರ್ ಗಿಫ್ಟ್: ಶೇ ನಾಲ್ಕರಷ್ಟು ಡಿಎ ಹೆಚ್ಚಿಸಿ ಕೇಂದ್ರದ ಆದೇಶ