ಗಾಂಧಿನಗರ, ಗುಜರಾತ್: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಗಾಂಧಿ ನಗರ ಲೋಕಸಭಾ ಕ್ಷೇತ್ರದಿಂದ ಇತ್ತೀಚೆಗೆ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಇದು ನಿಮಗೆಲ್ಲ ಗೊತ್ತಿರುವ ವಿಚಾರ. ಅಂದ ಹಾಗೆ ಅವರು ಆಯೋಗಕ್ಕೆ ತಮ್ಮ ಆಸ್ತಿ ವಿವರವನ್ನೂ ಸಲ್ಲಿಸಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಅವರ ಆಸ್ತಿ ದ್ವಿಗುಣಗೊಂಡಿದೆ. ಅವರ ಆಸ್ತಿ ಎಷ್ಟಿದೆ ಅನ್ನೋದಕ್ಕಿಂತ ಅವರಿಗಿರುವ ಷೇರು ಮಾರುಕಟ್ಟೆ ವ್ಯವಹಾರದ ಆಸಕ್ತಿ ಇಲ್ಲಿ ಗಮನ ಸೆಳೆದಿದೆ.
ಕಳೆದ ಐದು ವರ್ಷಗಳಲ್ಲಿ ಅವರು ಮತ್ತು ಅವರ ಪತ್ನಿ ಸೋನಾಲ್‌ಬೆನ್ ಅವರು ಮಾಡಿರುವ ಷೇರು ವ್ಯವಹಾರದಲ್ಲಿ ಷೇರು ಮೌಲ್ಯ ದ್ವಿಗುಣಗೊಂಡಿದೆ. ಗೃಹ ಸಚಿವರು ಮತ್ತು ಅವರ ಪತ್ನಿ ಒಟ್ಟು 250ಕ್ಕೂ ಕಂಪನಿಗಳ ಷೇರುಗಳಲ್ಲಿ ಹೂಡಿಕೆ ಮಾಡಿದ್ದಾರೆ. ಅಮಿತ್ ಶಾ ಹಾಗೂ ಅವರ ಪತ್ನಿ ಸೋನಾಲ್ ಅವರು ಒಟ್ಟಾರೆ 37 ಕೋಟಿ ರೂ ಮೌಲ್ಯದ ಷೇರುಗಳನ್ನು ಹೊಂದಿದ್ದಾರೆ. ಇದು ಏಪ್ರಿಲ್ 15 ರಂದು ಇದ್ದ ಷೇರು ಬೆಲೆಯನ್ನು ಆಧರಿಸಿ ಅವರು ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಿದ್ದಾರೆ.
ಅಮಿತ್ ಶಾ ಹಾಗೂ ಅವರ ಪತ್ನಿ ಹೂಡಿಕೆ ಮಾಡಿದ ಕಂಪನಿಗಳನ್ನು ಹೆಸರಿಸಲು ಒಂಬತ್ತು ಪುಟಗಳನ್ನು ಅಫಿಡವಿಟ್‌ನಲ್ಲಿ ಮೀಸಲು ಇಡಲಾಗಿದೆ. 2019 ರ ಲೋಕಸಭೆಯ ಅಫಿಡವಿಟ್‌ನಲ್ಲಿ, ಶಾ ಮತ್ತು ಅವರ ಪತ್ನಿ ಸುಮಾರು ರೂ.21 ಕೋಟಿಗಳ ಮಾರುಕಟ್ಟೆ ಮೌಲ್ಯದ ಷೇರುಗಳನ್ನು ಹೊಂದಿದ್ದರು. ಆದರೆ 2024 ರ ಅಫಿಡವಿಟ್ ದಂಪತಿಯ ಷೇರುಗಳ ಮಾರುಕಟ್ಟೆ ಮೌಲ್ಯವು 37 ಕೋಟಿ ರೂ.ಗೆ ತಲುಪಿದೆ.
ಸಣ್ಣ ಹೂಡಿಕೆದಾರರ ಆಸಕ್ತಿ ಹೆಚ್ಚಿದ ಅಮಿತ್ ಶಾ ಷೇರು ವ್ಯವಹಾರ: ಅಂದ ಹಾಗೆ ಗೃಹ ಸಚಿವರು ಸ್ಟಾಕ್ ಎಕ್ಸೆಂಜ್ನಲ್ಲಿನ ಬಹುತೇಕ ಎಲ್ಲ ಪ್ರಮುಖ ಷೇರುಗಳಲ್ಲಿ ಹೂಡಿಕೆ ಮಾಡಿದ್ದಾರೆ. ಅಮಿತ್ ಶಾ ಅವರು 160 ಕ್ಕೂ ಹೆಚ್ಚು ಲಿಸ್ಟೆಡ್ ಕಂಪನಿಗಳಲ್ಲಿ ಷೇರುಗಳನ್ನು ಹೊಂದಿದ್ದಾರೆ ಮತ್ತು ಸುಮಾರು 100 ಪಟ್ಟಿ ಮಾಡದ ಸಂಸ್ಥೆಗಳಲ್ಲೂ ಷೇರುಗಳನ್ನು ಖರೀದಿ ಮಾಡಿದ್ದಾರೆ. ಅವರ ಪತ್ನಿ ಸೋನಾಲ್‌ಬೆನ್ 80 ಕ್ಕೂ ಹೆಚ್ಚು ಲಿಸ್ಟೆಡ್ ಕಂಪನಿ ಮತ್ತು 10 ನಾನ್ ಲಿಸ್ಟೆಡ್ ಕಂಪನಿಗಳಲ್ಲಿ ಷೇರುಗಳನ್ನು ಹೊಂದಿದ್ದಾರೆ.
ಏಪ್ರಿಲ್ 15, 2024ಕ್ಕೆ ಇದ್ದಂತೆ, ಅಮಿತ್ ಶಾ ಅವರ ಷೇರುಗಳ ಮಾರುಕಟ್ಟೆ ಮೌಲ್ಯವು ರೂ.17.43 ಕೋಟಿಗಳಿಗಿಂತ ಹೆಚ್ಚು. ಏಪ್ರಿಲ್ 19, 2024 ರಂದು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿಡವಿಟ್ ಪ್ರಕಾರ ಸೋನಾಲ್ ಅಮಿತ್ ಶಾ ಅವರು 20 ಕೋಟಿಗೂ ಹೆಚ್ಚು ಮೌಲ್ಯದ ಸ್ಟಾಕ್ ಎಕ್ಸ್ಚೇಂಜ್ - ಲಿಸ್ಟೆಡ್ ಕಂಪನಿಗಳಲ್ಲಿ ಷೇರುಗಳನ್ನು ಹೊಂದಿದ್ದಾರೆ.
ಅಮಿತ್ ಶಾ ಹೊಂದಿರುವ ಪ್ರಮುಖ ಷೇರುಗಳ ಮಾಹಿತಿ:
- ಎಬಿಬಿ ಇಂಡಿಯಾ ಲಿಮಿಟೆಡ್ - 71 ಲಕ್ಷಕ್ಕಿಂತ ಹೆಚ್ಚು
- ಅನಂತ್ ರಾಜ್ ಲಿಮಿಟೆಡ್ 33 ಲಕ್ಷಕ್ಕಿಂತ ಹೆಚ್ಚು
- ಬರ್ಗರ್ ಪೇಂಟ್ಸ್ - 35 ಲಕ್ಷಕ್ಕಿಂತ ಹೆಚ್ಚು
- ಭಾರತ್ ಫೋರ್ಜ್ 26 ಲಕ್ಷಕ್ಕಿಂತ ಹೆಚ್ಚು
- ಕೋಲ್ಗೇಟ್-ಪಾಮೋಲಿವ್ 1.06 ಕೋಟಿಗಿಂತ ಹೆಚ್ಚು
- ಸೆಂಚುರಿ ಟೆಕ್ಸ್‌ಟೈಲ್ಸ್ 31 ಲಕ್ಷಕ್ಕಿಂತ ಹೆಚ್ಚು
- ಕಮ್ಮಿನ್ಸ್ ಇಂಡಿಯಾ 42 ಲಕ್ಷಕ್ಕಿಂತ ಹೆಚ್ಚು
- ಗ್ರೈಂಡ್‌ವೆಲ್ ನಾರ್ಟನ್ 42 ಲಕ್ಷಕ್ಕೂ ಹೆಚ್ಚು
- ಹಿಂದೂಸ್ತಾನ್ ಯೂನಿಲಿವರ್ 1.34 ಕೋಟಿಗಿಂತ ಹೆಚ್ಚು
- ಐಟಿಸಿ ಲಿಮಿಟೆಡ್ 63 ಲಕ್ಷಕ್ಕಿಂತ ಹೆಚ್ಚು
- ಇನ್ಫೋಸಿಸ್ 43 ಲಕ್ಷಕ್ಕಿಂತ ಹೆಚ್ಚು
- ಕನ್ಸಾಯ್ ನೆರೋಲಾಕ್ ಪೇಂಟ್ಸ್ - 40 ಲಕ್ಷಕ್ಕಿಂತ ಹೆಚ್ಚು
- ಎಂಆರ್‌ಎಫ್ ಲಿಮಿಟೆಡ್ 1.29 ಕೋಟಿಗಿಂತ ಹೆಚ್ಚು
- ನೆಸ್ಲೆ ಇಂಡಿಯಾ 38 ಲಕ್ಷಕ್ಕಿಂತ ಹೆಚ್ಚು
- ನೆಸ್ಕೋ ಲಿಮಿಟೆಡ್ 32 ಲಕ್ಷಕ್ಕಿಂತ ಹೆಚ್ಚು
- ಪ್ರಾಕ್ಟರ್ & ಗ್ಯಾಂಬಲ್ 95 ಲಕ್ಷಕ್ಕಿಂತ ಹೆಚ್ಚು
ಸೋನಲ್ ಅಮಿತ್ ಶಾ ಹೊಂದಿರುವ ಪ್ರಮುಖ ಷೇರುಗಳು:
- ಆದಿತ್ಯ ಬಿರ್ಲಾ ಫ್ಯಾಷನ್ ಮತ್ತು ರಿಟೇಲ್ ಲಿಮಿಟೆಡ್ - 45 ಲಕ್ಷಕ್ಕಿಂತ ಹೆಚ್ಚು
- ಭಾರ್ತಿ ಏರ್‌ಟೆಲ್ 1.8 ಕೋಟಿಗಿಂತ ಹೆಚ್ಚು
- ಕೆನರಾ ಬ್ಯಾಂಕ್ 2.9 ಕೋಟಿಗಿಂತ ಹೆಚ್ಚು
- ಗುಜರಾತ್ ಫ್ಲೋರೋಕೆಮಿಕಲ್ಸ್ 1.78 ಕೋಟಿಗಿಂತ ಹೆಚ್ಚು
- ಐಸಿಐಸಿಐ ಬ್ಯಾಂಕ್ 53 ಲಕ್ಷಕ್ಕಿಂತ ಹೆಚ್ಚು
- ಐನಾಕ್ಸ್ ವಿಂಡ್ ಎನರ್ಜಿ 29 ಲಕ್ಷಕ್ಕಿಂತ ಹೆಚ್ಚು
- ಜೆಎಸ್‌ಡಬ್ಲ್ಯೂ ಸ್ಟೀಲ್ 43 ಲಕ್ಷಕ್ಕಿಂತ ಹೆಚ್ಚು
- ಲಕ್ಷ್ಮಿ ಮೆಷಿನ್ ವರ್ಕ್ಸ್ ಲಿಮಿಟೆಡ್ 1.75 ಕೋಟಿ
- ಲಾರ್ಸೆನ್ ಮತ್ತು ಟೂಬ್ರೊ 64.8 ಲಕ್ಷಕ್ಕಿಂತ ಹೆಚ್ಚು
- ಎನ್‌ಸಿಸಿ ಲಿಮಿಟೆಡ್ 75.9 ಲಕ್ಷಕ್ಕಿಂತ ಹೆಚ್ಚು
- ಪ್ರಾಕ್ಟರ್ & ಗ್ಯಾಂಬಲ್ 94.9 ಲಕ್ಷಕ್ಕಿಂತ ಹೆಚ್ಚು
ಅಮಿತ್ ಶಾ ಮತ್ತು ಅವರ ಪತ್ನಿ ದೇಶದ ಪ್ರಮುಖ ಕಂಪನಿಗಳಾದ ಟಾಟಾ, ಬಿರ್ಲಾ ಗ್ರೂಪ್ ಕಂಪನಿಗಳು ಮತ್ತು ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಸಂಸ್ಥೆಗಳು, ಲಾಭದಾಯಕ ಪ್ರಮುಖ ಬ್ಯಾಂಕ್‌ಗಳು ಮತ್ತು GAI ಮತ್ತು ONGC ನಂತಹ ಸಾರ್ವಜನಿಕ ವಲಯದ ಉದ್ಯಮಗಳಲ್ಲಿ ಷೇರುಗಳನ್ನು ಹೊಂದಿದ್ದಾರೆ. ಕುತೂಹಲಕಾರಿ ವಿಷಯ ಎಂದರೆ ನಷ್ಟದಲ್ಲಿರುವ ಅನಿಲ್ ಅಂಬಾನಿ ಅವರ ಸಂಸ್ಥೆಗಳಲ್ಲೂ ಷೇರುಗಳನ್ನು ಹೊಂದಿದ್ದಾರೆ. ಏತನ್ಮಧ್ಯೆ, ಅಮಿತ್ ಷಾ ಅವರು ಅದಾನಿ ಸಂಸ್ಥೆಗಳಲ್ಲಿ ಯಾವುದೇ ಷೇರುಗಳನ್ನು ಹೊಂದಿಲ್ಲ. ಆದರೆ ಪತ್ನಿ ಸೋನಾಲ್ ಅವರು ಅದಾನಿ ವಿಲ್ಮರ್ ಲಿಮಿಟೆಡ್‌ನಲ್ಲಿ ಕೇವಲ ರೂ.21,859 ಮೌಲ್ಯದ ಕೇವಲ 65 ಷೇರುಗಳನ್ನು ಹೊಂದಿದ್ದಾರೆ.