ಮಂಡಿ(ಹಿಮಾಚಲ ಪ್ರದೇಶ): ರಾತ್ರಿಯ ವೇಳೆ ಬಿಯಾಸ್ ಮತ್ತು ಸುಕೇತಿ ನದಿಗಳ ಸಂಗಮಕ್ಕೆ ಹೋಗಿದ್ದ ಯುವಕನೊಬ್ಬ, ಏಕಾಏಕಿ ನದಿಗಳ ನೀರಿನ ಮಟ್ಟ ಹೆಚ್ಚಾಗಿದ್ದರಿಂದ ಅಲ್ಲೇ ಸಿಲುಕಿಕೊಂಡು ರಾತ್ರಿಯಿಡೀ ಕಾಲ ಕಳೆದ ಘಟನೆ ಮಂಡಿಯಲ್ಲಿ ನಡೆದಿದೆ.
ಪ್ರಾಣ ಉಳಿಸಿಕೊಳ್ಳಲು ಯುವಕ ನದಿ ಮಧ್ಯೆ ಇದ್ದ ದೊಡ್ಡ ಬಂಡೆ ಏರಿ ರಾತ್ರಿಯಿಡೀ ಅಲ್ಲೇ ಆಶ್ರಯ ಪಡೆದಿದ್ದ. ಇಂದು ಬೆಳಗ್ಗೆ ಬಂಡೆಯ ಮೇಲೆ ಯುವಕನನ್ನು ಕಂಡ ಸ್ಥಳೀಯರು ಮಂಡಿ ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ರಕ್ಷಣಾ ತಂಡದೊಂದಿಗೆ ಸ್ಥಳಕ್ಕಾಗಮಿಸಿದ ಪೊಲೀಸರು, ಯುವಕನನ್ನು ರಕ್ಷಿಸಿದ್ದಾರೆ. ಯುವಕನನ್ನು ಚಂಡೀಗಢ ಮೂಲದ ಅಮನ್ ಎಂದು ಗುರುತಿಸಲಾಗಿದೆ. ‘ಕೆಲಸದ ನಿಮಿತ್ತ ಕೆಲ ದಿನಗಳಿಂದ ಮಳೆಯಲ್ಲಿ ಉಳಿದುಕೊಂಡಿರುವುದಾಗಿ’ ಎಂದು ಯುವಕ ತಿಳಿಸಿದ್ದಾನೆ.
ಈ ಕುರಿತು ಪ್ರಭಾರಿ ಸಬ್ ಇನ್ಸ್‌ಪೆಕ್ಟರ್ ಮನೋಜ್ ಕುಮಾರ್ ಮಾತನಾಡಿ, ಯುವಕ ತನ್ನ ಸಂಪೂರ್ಣ ವಿಳಾಸವನ್ನು ಇನ್ನೂ ಹೇಳಿಲ್ಲ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಬಳಿಕ ಆತನ ಕುಟುಂಬಸ್ಥರಿಗೆ ಮಾಹಿತಿ ನೀಡಲಾಗುವುದು. ಈವರೆಗೆ ತಿಳಿದು ಬಂದಿರುವ ಮಾಹಿತಿ ಪ್ರಕಾರ, ಈ ಯುವಕ ರಾತ್ರಿಯಿಡೀ ನಗರದಲ್ಲಿ ಸುತ್ತಾಡುತ್ತಿದ್ದ. ಈ ಬಗ್ಗೆಯೂ ಪರಿಶೀಲಿಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಈ ಸಮಯದಲ್ಲಿ ನದಿಗಳು ಮತ್ತು ಹಳ್ಳಕೊಳ್ಳಗಳ ನೀರಿನ ಮಟ್ಟವು ಯಾವಾಗ ಏರುತ್ತದೆ ಎಂದು ಯಾರಿಗೂ ತಿಳಿದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ನದಿ, ಹಳ್ಳ - ಕೊಳ್ಳಗಳಿಂದ ದೂರ ಇರಬೇಕು ಎಂದು ಇಲ್ಲಿನ ಜಿಲ್ಲಾಡಳಿತ ಪದೇ ಪದೆ ಎಚ್ಚರಿಕೆ ನೀಡುತ್ತಿದೆ. ಹೀಗಿದ್ದರೂ ಕೆಲವರು ಎಚ್ಚರಿಕೆಗಳನ್ನು ನಿರ್ಲಕ್ಷಿಸಿ ಜೀವಕ್ಕೆ ಸಂಚಕಾರ ತಂದುಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ವಯನಾಡ್ ಭೂಕುಸಿತ: ಜೀವ ಉಳಿಸಿಕೊಳ್ಳಲು ಅಂಗಲಾಚುತ್ತಿರುವ ಸಂತ್ರಸ್ತರು; ಇಂದೂ ಕೂಡಾ ಧಾರಾಕಾರ ಮಳೆ - Wayanad Landslide