ಮುಂಬೈ(ಮಹಾರಾಷ್ಟ್ರ): ನಗರದಲ್ಲಿ ಶುಕ್ರವಾರ ರಾತ್ರಿಯಿಂದಲೂ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಇದರ ನಡುವೆ ಇಲ್ಲಿನ ಗ್ರ್ಯಾಂಟ್ ರೋಡ್ನ ನಾನಾ ಚೌಕ್ನಲ್ಲಿರುವ ಹಳೆ ಕಟ್ಟಡದ ಒಂದು ಭಾಗ ಕುಸಿದುಬಿದ್ದ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಈ ದುರಂತದಲ್ಲಿ ಇನ್ನೂ ಮೂವರು ಗಾಯಗೊಂಡಿದ್ದು, ಹತ್ತಿರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್‌ನ ವಿಪತ್ತು ನಿರ್ವಹಣಾ ವಿಭಾಗ ತಿಳಿಸಿದೆ.
ಮಹಾನಗರ ಪಾಲಿಕೆಯ ವಿಪತ್ತು ನಿರ್ವಹಣಾ ವಿಭಾಗದ ಪ್ರಕಾರ, ಗ್ರ್ಯಾಂಟ್ ರೋಡ್ ರೈಲ್ವೆ ನಿಲ್ದಾಣದ ಪಶ್ಚಿಮಕ್ಕೆ ಹೊಂದಿಕೊಂಡಿರುವ ರುಬಿನಿಸಾ ಮಂಜಿಲ್ ಕಟ್ಟಡದ ಒಂದು ಭಾಗ ಕುಸಿದಿರುವ ಬಗ್ಗೆ ಅಗ್ನಿಶಾಮಕ ಇಲಾಖೆಗೆ ಕರೆ ಬಂದಿದೆ. ಬೆಳಗ್ಗೆ 11 ಗಂಟೆಗೆ ಈ ಘಟನೆ ನಡೆದಿದೆ. ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ. ಈ ಕಟ್ಟಡದ ಎರಡನೇ ಮತ್ತು ಮೂರನೇ ಮಹಡಿಯಲ್ಲಿ ಬಾಲ್ಕನಿ ಮತ್ತು ಸ್ಲ್ಯಾಬ್ ಭಾಗ ಕುಸಿದಿದೆ. ಆದ್ದರಿಂದ, ನಾಲ್ಕು ಅಂತಸ್ತಿನ ಕಟ್ಟಡದ ಬಂದು ಭಾಗವು ಕುಸಿದಿದೆ. ಕೆಲವು ಭಾಗಗಳು ಮೇಲೆ ನೇತಾಡುತ್ತಿವೆ. ಈ ಕಟ್ಟಡದ ಅವಶೇಷಗಳಡಿ ಸಿಲುಕಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದೆ.
ಕಟ್ಟಡದಲ್ಲೇ ಸಿಲುಕಿರುವ ನಿವಾಸಿಗಳು: ಕಟ್ಟಡದ ನಾಲ್ಕನೇ ಮಹಡಿಯಲ್ಲಿ 7 ರಿಂದ 8 ನಿವಾಸಿಗಳು ಸಿಕ್ಕಿಬಿದ್ದಿದ್ದಾರೆ. ಸದ್ಯ ಅವರ ರಕ್ಷಣಾ ಕಾರ್ಯ ನಡೆಯುತ್ತಿದೆ. ಎಲ್ಲಾ ಗಾಯಾಳುಗಳನ್ನು ಚಿಕಿತ್ಸೆಗಾಗಿ ಸಮೀಪದ ಭಾಟಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಭಾಟಿಯಾ ಆಸ್ಪತ್ರೆಯ ವೈದ್ಯೆ ರಶ್ಮಿ ಎಲ್ಲಾ ಗಾಯಾಳುಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಈ ಅಪಘಾತದಲ್ಲಿ ನಾಲ್ವರು ಗಾಯಗೊಂಡಿರುವುದು ಕಂಡು ಬಂದಿದೆ. ಅವರಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ಇತರ ಮೂವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮಹಾನಗರ ಪಾಲಿಕೆ ಮಾಹಿತಿ ನೀಡಿದೆ.
ಅಪಾಯಕಾರಿ ಕಟ್ಟಡ ಎಂದು ನೋಟಿಸ್ ನೀಡಿದ್ದ ಬಿಎಂಸಿ: ಆರು ತಿಂಗಳ ಹಿಂದೆ, ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್(ಬಿಎಂಸಿ) ಕಟ್ಟಡವು ಅಪಾಯಕಾರಿಯಾಗಿರುವುದರಿಂದ ಅದನ್ನು ಖಾಲಿ ಮಾಡುವಂತೆ ನಿವಾಸಿಗಳಿಗೆ ನೋಟಿಸ್ ನೀಡಿತ್ತು. ಆದಾಗ್ಯೂ, ಸುಮಾರು 40 ಜನರು ಇನ್ನೂ ಕಟ್ಟಡದಲ್ಲಿ ವಾಸಿಸುತ್ತಿದ್ದರು ಎಂದು ಬಿಎಂಸಿ ತಿಳಿಸಿದೆ.
ಇದನ್ನೂ ಓದಿ: ಶಿರೂರು ಭೂಕುಸಿತ: ಕೇರಳದ ಅರ್ಜುನ್‌ಗಾಗಿ ಹುಡುಕಾಟ ಪುನಾರಂಭ: ನಿಧಾನ ಕಾರ್ಯಾಚರಣೆಗೆ ಅಸಮಾಧಾನ - Shiruru Hill Landslide