ನವದೆಹಲಿ: ಜವಾಹರ್ಲಾಲ್ ನೆಹರೂ ನಂತರ ಮೂರನೇ ಬಾರಿಗೆ ಅಧಿಕಾರದ ಗದ್ದುಗೆ ಹಿಡಿದಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಗ್ಲೋಬಲ್ ಸೌತ್ ರಾಷ್ಟ್ರಗಳೊಂದಿಗಿನ ತಮ್ಮ ನೀತಿಯನ್ನು ಮುಂದುವರೆಸಿದ್ದಾರೆ. ದಕ್ಷಿಣದ ರಾಷ್ಟ್ರಗಳ ಶಾಂತಿ, ಪ್ರಗತಿ ಮತ್ತು ಸಮೃದ್ಧಿಗಾಗಿ ಕೆಲಸ ಮಾಡುವುದನ್ನು ಮುಂದುವರಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಒತ್ತಿ ಹೇಳಿದ್ದಾರೆ. 2047ರ ಹೊತ್ತಿಗೆ ವಿಕಸಿತ ಭಾರತದ ಕಲ್ಪನೆಯನ್ನು ಸಾಕಾರಗೊಳಿಸುವುದಾಗಿಯೂ ಅವರು ಘೋಷಿಸಿದ್ದಾರೆ.
ಭಾನುವಾರ ರಾಷ್ಟ್ರಪತಿ ಭವನದಲ್ಲಿ ನಡೆದ ಪ್ರಮಾಣ ವಚನ ಸ್ವೀಕಾರ ಸಮಾರಂಭದ ನಂತರ ಗ್ಲೋಬಲ್ ಸೌತ್ ನಾಯಕರನ್ನು ಭೇಟಿ ಮಾಡಿ ಅವರು ಈ ಅಭಯ ನೀಡಿದ್ದಾರೆ. ಪ್ರಮಾಣ ಸ್ವೀಕಾರ ಸಮಾರಂಭದಲ್ಲಿ ಗೌರವಾನ್ವಿತ ಅತಿಥಿಗಳಾಗಿ ಭಾರತದ ನೆರೆಹೊರೆ ಮತ್ತು ಹಿಂದೂ ಮಹಾಸಾಗರ ಪ್ರದೇಶ (IOR) ನಾಯಕರು ಭಾಗವಹಿಸಿದ್ದರು.
ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ, ಶ್ರೀಲಂಕಾ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ, ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು, ಸೀಶೆಲ್ಸ್ ಉಪಾಧ್ಯಕ್ಷ ಅಹ್ಮದ್ ಅಫೀಫ್, ಮಾರಿಷಸ್ ಪ್ರಧಾನಿ ಪ್ರವಿಂದ್ ಕುಮಾರ್ ಜುಗ್ನೌತ್, ನೇಪಾಳ ಪ್ರಧಾನಿ ಪುಷ್ಪ ಕಮಲ್ ದಹಲ್ 'ಪ್ರಚಂಡ' ಮತ್ತು ಭೂತಾನ್ ಪ್ರಧಾನಿ ತ್ಶೆರಿಂಗ್ ಟೋಬ್ಗೇ ಸಮಾರಂಭದಲ್ಲಿ ಭಾಗವಹಿಸಿದ್ದರು. ಅಧ್ಯಕ್ಷ ದ್ರೌಪದಿ ಮುರ್ಮು ಅವರು ಪ್ರಧಾನಿ ಮೋದಿ ಮತ್ತು ಮಂತ್ರಿ ಮಂಡಳಕ್ಕೆ ಪ್ರಮಾಣ ವಚನ ಬೋಧಿಸಿದರು.
ಮಾಲ್ಡೀವ್ಸ್, ಬಾಂಗ್ಲಾದೇಶ, ನೇಪಾಳ ಮತ್ತು ಭೂತಾನ್ ನಾಯಕರು ಈ ಸಮಾರಂಭಕ್ಕೆ ಸಾಕ್ಷಿಯಾದರು. ಸತತ ಮೂರನೇ ಬಾರಿಗೆ ಭಾರತದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಪ್ರಧಾನಿ ಮೋದಿಯವರನ್ನು ಗ್ಲೋಬಲ್ ಸೌತ್ ನಾಯಕರು ಅಭಿನಂದಿಸಿದರು.
ಮೂರನೇ ಅವಧಿಯ ತಮ್ಮ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಆಗಮಿಸಿದ್ದಕ್ಕೆ ಧನ್ಯವಾದ ಅರ್ಪಿಸಿದ ಪ್ರಧಾನಮಂತ್ರಿಗಳು, 'ನೆರೆಹೊರೆಗೆ ಮೊದಲ ಆದ್ಯತೆ' ನೀತಿ ಮತ್ತು 'ಸಾಗರ್ ವಿಷನ್'ಗೆ ಭಾರತದ ಬದ್ಧತೆಯನ್ನು ಪುನರುಚ್ಚರಿಸಿದರು. ಪ್ರಧಾನಿ ಮೋದಿ ಅವರು, ದಕ್ಷಿಣ ಏಷ್ಯಾ ರಾಷ್ಟ್ರಗಳ ಜತೆ ಸಂಬಂಧಗಳನ್ನ ಬಲಪಡಿಸುವುದು ತಮ್ಮ ಮೊದಲ ಆದ್ಯತೆ ಎಂದು ಘೋಷಿಸಿದರು. ಅಂತಾರಾಷ್ಟ್ರೀಯ ರಂಗದಲ್ಲಿ ಜಾಗತಿಕ ದಕ್ಷಿಣದ ಧ್ವನಿಯನ್ನು ಮತ್ತಷ್ಟು ಬಲ ಪಡಿಸಲು ಭಾರತ ಸದಾ ಬದ್ಧ ಎಂದು ಭರವಸೆ ನೀಡಿದರು.
ರಾಷ್ಟ್ರಪತಿ ಭವನದಲ್ಲಿ ಅಧ್ಯಕ್ಷ ಮುರ್ಮು ಆಯೋಜಿಸಿದ್ದ ಔತಣ ಕೂಟದಲ್ಲೂ ನಾಯಕರು ಪಾಲ್ಗೊಂಡಿದ್ದರು. ರಾಷ್ಟ್ರಪತಿಗಳು ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಆಗಮಿಸಿದ ಎಲ್ಲ ನಾಯಕರನ್ನು ಸ್ವಾಗತಿಸಿದರು. ರಾಷ್ಟ್ರದ ಸೇವೆಯಲ್ಲಿ ಪ್ರಧಾನಿ ಮೋದಿಯವರಿಗೆ ತಮ್ಮ ಶುಭಾಶಯಗಳನ್ನು ತಿಳಿಸಿದ ಅವರು, ಭಾರತದ ಪ್ರಜಾಪ್ರಭುತ್ವ ದೇಶದ ಜನರಿಗೆ ಹೆಮ್ಮೆಯ ಕ್ಷಣ ಮಾತ್ರವಲ್ಲ, ಪ್ರಪಂಚದಾದ್ಯಂತ ಲಕ್ಷಾಂತರ ಜನರಿಗೆ ಸ್ಫೂರ್ತಿಯಾಗಿದೆ ಎಂದು ಬಣ್ಣಿಸಿದರು.
ಇದನ್ನು ಓದಿ: ಮೋದಿ 3.0 ಸರ್ಕಾರ ಅಸ್ತಿತ್ವಕ್ಕೆ: 24 ರಾಜ್ಯಗಳ 71 ಸಂಸದರಿಗೆ ಅವಕಾಶ, 11 ಮಿತ್ರಪಕ್ಷಗಳಿಗೂ ಪಾಲು - PM MODI OATH CEREMONY