ವಯನಾಡ್ (ಕೇರಳ): ಇತ್ತೀಚೆಗೆ ಸಂಭವಿಸಿದ ಭೂಕುಸಿತದಿಂದ ಪ್ರಶಾಂತವಾದ ಭೂದೃಶ್ಯ, ಪ್ರವಾಸಿ ಆಕರ್ಷಣೆಯ ಜಾಗವಾಗಿದ್ದ ವಯನಾಡ್ ಜಿಲ್ಲೆಯ ಚಿತ್ರಣವೇ ಬದಲಾಗಿದೆ. ಸೋಮವಾರ ರಾತ್ರಿವರೆಗೆ ಶಾಂತವಾಗಿದ್ದ ಜಿಲ್ಲೆ ಮಂಗಳವಾರ ಮುಂಜಾನೆ ವೇಳೆಗೆ ತನ್ನ ಆಕಾರವನ್ನೇ ಬದಲಿಸಿಕೊಂಡಿತ್ತು. ಭೂಮಿಯೊಳಗೆ ಹುದುಗಿ ಹೋದ ಅದೆಷ್ಟೋ ಮನೆಗಳು, ಅವಶೇಷಗಳಡಿ ಸಿಲುಕಿ ಪ್ರಾಣ ಕಳೆದುಕೊಂಡ ಅದೆಷ್ಟೋ ಜೀವಗಳು, ಎಲ್ಲವೂ ತಲೆಕೆಳಗಾದ ಪರಿಸ್ಥಿತಿ.
ಸೋಮವಾರ ಹಾಗೂ ಮಂಗಳವಾರ ರಾತ್ರಿ ಸುರಿದ ವಿಪರೀತ ಮಳೆಗೆ, ಮೆಪ್ಪಾಡಿ, ಮುಂಡಕ್ಕೈ, ಚೂರಲ್ಮಲಾ, ಅಟ್ಟಮಾಲ ಮತ್ತು ನೂಲ್ಪುಳ ಗ್ರಾಮಗಳಲ್ಲಿ ಭಾರೀ ಭೂಕುಸಿತ ಉಂಟಾಯಿತು. ಈ ಹೃದಯವಿದ್ರಾವಕ ಪ್ರಾಕೃತಿಕ ವಿಕೋಪದಲ್ಲಿ ಇದುವರೆಗೆ ಮೃತ ಪಟ್ಟವರ ಸಂಖ್ಯೆ 184, 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಅವಶೇಷಗಳಡಿ ಬದುಕುಳಿದವರಿಗಾಗಿ ಇನ್ನೂ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.
ಪ್ರಾಣ ಕಳೆದುಕೊಂಡವರು ಒಂದೆಡೆಯಾದರೆ, ಕಣ್ಣೆದುರೇ ತಮ್ಮವರನ್ನು ಕಳೆದುಕೊಂಡವರು ಇನ್ನೊಂದೆಡೆ. ತಮ್ಮವರು ಕೆಸರು ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದರೂ, ಅವಶೇಷಗಳಡಿ ಹೂತು ಹೋಗುತ್ತಿದ್ದರೂ ಕಾಪಾಡಲಾಗದಂತಹ ಅಸಹಾಯಕ ಪರಿಸ್ಥಿತಿ ಕೆಲವರದು. ಬದುಕುಳಿದವರು ತಮ್ಮ ಕುಟುಂಬ ಸದಸ್ಯರನ್ನು ಕಳೆದುಕೊಂಡು, ಮನೆಗಳನ್ನು ಕಳೆದುಕೊಂಡು ಅಪಾರ ನಷ್ಟದೊಂದಿಗೆ ಹೋರಾಡುತ್ತಿದ್ದಾರೆ.
ತಾಯಿ, ಸಹೋದರಿ, ಕುಟುಂಬ ನಾಪತ್ತೆ: ಭೂಕುಸಿತದಲ್ಲಿ ಬದುಕುಳಿದ ಕೆಲವರನ್ನು ಮಾಧ್ಯಮಗಳು ಮಾತನಾಡಿಸಿದ್ದು, ಮುಂಡಕ್ಕೈನ ಪ್ರಂಜೀಶ್ ಎನ್ನುವವರು ತಮ್ಮ ಕಣ್ಣೆದುರೇ ಸಂಭವಿಸಿದ ಆ ಘಟನೆಯ ಬಗ್ಗೆ ವಿವರಿಸಿದ್ದಾರೆ. "ಮಂಗಳವಾರ ಮಧ್ಯರಾತ್ರಿ ಸುಮಾರು 12.40 ಹೊತ್ತಿಗೆ ಜೋರಾದ ಗುಡುಗಿನ ಶಬ್ಧಕ್ಕೆ ಎಚ್ಚರವಾಯಿತು. ರಾತ್ರಿಯಿಡೀ ಅದೇ ಗುಡುಗಿನ ಧ್ವನಿ ಪ್ರತಿಧ್ವನಿಸುತ್ತಿತ್ತು. ಭೂಕುಸಿತ ನಾಲ್ಕು ಬಾರಿ ಅಪ್ಪಳಿಸಿತು. ಪ್ರತಿಯೊಂದೂ ಹಿಂದಿನದಕ್ಕಿಂತ ಹೆಚ್ಚು ಭಯಾನಕವಾಗಿತ್ತು. ನಮ್ಮ ಮನೆಯ ಹಿಂದೆಯೇ ಭೂಕುಸಿತ ಉಲ್ಬಣಗೊಂಡಿದ್ದರಿಂದ ನಾವು ಕುಟುಂಬದ ಮೂರು ಸದಸ್ಯರನ್ನು ಕಳೆದುಕೊಂಡಿದ್ದೇವೆ. ನಾವು ಹೇಗೋ ತಪ್ಪಿಸಿಕೊಂಡು, ಕ್ಯಾಂಪ್ ಜಾಗಕ್ಕೆ ತಲುಪುವಲ್ಲಿ ಯಶಸ್ವಿಯಾಗಿದ್ದೇವೆ. ಇಲ್ಲಿ ನಾವು ಸುರಕ್ಷಿತವಾಗಿದ್ದೇವೆ. ಆದರೆ ನನ್ನ ತಾಯಿ, ಸಹೋದರಿ ಮತ್ತು ಅವಳ ಕುಟುಂಬ ನಾಪತ್ತೆಯಾಗಿದೆ" ಎಂದು ಹೇಳುವಾಗ ಅವರ ಧ್ವನಿ ನಡುಗುತ್ತಿತ್ತು.
ಕಣ್ಣ ಮುಂದೆಯೇ ಕೊಚ್ಚಿಹೋದರು: ಚೂರಲ್ಮಲಾ ನಿವಾಸಿ ಪ್ರಸನ್ನಾ ಅವರು ತಮ್ಮ ಅಳಲು ತೋಡಿಕೊಂಡಿದ್ದು, ತಮ್ಮ ಸಹೋದರಿ ಹಾಗೂ ಅವಳ ಕುಟುಂಬ ಕೆಸರಲ್ಲಿ ಹುದುಗಿ ಹೋಗುತ್ತಿರುವುದನ್ನು ಕಣ್ಣಾರೆ ಕಂಡದ್ದನ್ನು ವಿವರಿಸುವಾಗ ಅವರ ಧ್ವನಿ ಗದ್ಘದಿತವಾಯಿತು. "ನನ್ನ ಸಹೋದರಿ ಮತ್ತು ಅವಳ ಕುಟುಂಬವನ್ನು ಪ್ರವಾಹ ಎಳೆದೊಯ್ಯುತ್ತಿರುವುದನ್ನು ನಾನು ನೋಡಿದೆ. ನನ್ನ ತಂದೆಯನ್ನು ಸುರಕ್ಷಿತವಾಗಿ ಕಾಪಾಡಿಕೊಂಡು ಕಾಡಿಗೆ ಓಡಿಹೋದೆ. ನನ್ನ ಕಣ್ಣ ಮುಂದೆಯೇ ನನ್ನ ಸಹೋದರಿ ಹಾಗೂ ಅವಳ ಮಕ್ಕಳು ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗುವಾಗ ನನಗೆ ಸಹಾಯ ಮಾಡಲು ಸಾಧ್ಯವಾಗಲಿಲ್ಲ. ನಮ್ಮ ಮನೆಯೂ ಕೆಸರಿನಡಿ ಮುಳುಗಿತು. ಆ ಶಬ್ಧ ಮತ್ತು ಅಲ್ಲೋಲಕಲ್ಲೋಲ ನನ್ನನ್ನು ಶಾಶ್ವತವಾಗಿ ಕಾಡುತ್ತದೆ" ಎಂದು ಕಣ್ಣೊರೆಸಿಕೊಂಡರು.
"ದುರಂತವನ್ನು ನೋಡಿದ ಮಕ್ಕಳ ಮೇಲೆ ಇದು ತೀವ್ರವಾಗಿ ಪರಿಣಾಮ ಬೀರಿದೆ. ಮಕ್ಕಳು ಕನಸಿನಲ್ಲಿ ಬೆಚ್ಚಿ ಬೀಳುತ್ತಿದ್ದಾರೆ. ಭೂಕುಸಿತಗಳು ಮರುಕಳಿಸಬಹುದು ಎಂಬ ಭಯದಿಂದ ಅವರು ಮಧ್ಯರಾತ್ರಿಯಲ್ಲಿ ಅರ್ಧನಿದ್ರೆಯಲ್ಲಿ ಎಚ್ಚರಗೊಳ್ಳುತ್ತಿದ್ದಾರೆ" ಎಂದು ಕಳವಳ ವ್ಯಕ್ತಪಡಿಸಿದರು.
80 ವರ್ಷದ ವಿಧವೆಯೊಬ್ಬರು ತಮ್ಮ ಸೊಸೆಯನ್ನು ಕಳೆದುಕೊಂಡು, ಭವಿಷ್ಯದ ಬಗ್ಗೆ ಅನಿಶ್ಚಿತರಾಗಿದ್ದಾರೆ. "ಈ ಪ್ರವಾಹ ನನ್ನ ಸೊಸೆಯನ್ನು ನನ್ನಿಂದ ಕಿತ್ತುಕೊಂಡಿದೆ. ಈಗ ನನ್ನನ್ನು ಯಾರು ನೋಡಿಕೊಳ್ಳುತ್ತಾರೆ? ನಾನು ಒಬ್ಬಂಟಿಯಾಗಿದ್ದೇನೆ. ನನ್ನ ಮುಂದೆ ಏನೂ ಇಲ್ಲದಂತಾಗಿದೆ" ಎಂದು ಅತ್ತರು.
ಮೊದಲಿದ್ದ ಯಾವುದೂ ಅಲ್ಲಿರಲಿಲ್ಲ: ದುರಂತದಿಂದ ಸ್ವಲ್ಪದರಲ್ಲೇ ಪಾರಾದ ವೃದ್ಧ ದಂಪತಿ, ತಾವು ಪಾರಾದ ಬಗೆಯನ್ನು ವಿವರಿಸಿದರು. "ರಾತ್ರಿ 11 ಗಂಟೆಯ ಸುಮಾರಿಗೆ ನಮ್ಮ ಪ್ರದೇಶದಲ್ಲಿ ಕೆಸರಿನ ನೀರು ಹರಿದಾಡುತ್ತಿರುವುದನ್ನು ನಾವು ಗಮನಿಸಿದೆವು. ಹಾಗಾಗಿ ನಾವು ಹತ್ತಿರದ ಬೆಟ್ಟಕ್ಕೆ ಓಡಿಹೋದೆವು. ನಮ್ಮ ನೆರೆಹೊರೆಯವರನ್ನು ನಮ್ಮೊಂದಿಗೆ ಬರುವಂತೆ ಮನವೊಲಿಸಲು ತೀವ್ರವಾಗಿ ಪ್ರಯತ್ನಿಸಿದೆವು. ಆದರೆ 1 ಗಂಟೆಗೆ ಬಂದು ಸೇರಿಕೊಳ್ಳುತ್ತೇನೆ ಎಂದು ಹೇಳಿ ಅವರು ನಿರಾಕರಿಸಿದರು. ಆದರೆ, ಅವರು ಬರಲೇ ಇಲ್ಲ. ನಾವು ಮುಂಜಾನೆ ಅಲ್ಲಿಗೆ ಹಿಂದಿರುಗಿದಾಗ, ಮೊದಲಿದ್ದ ಯಾವುದೂ ಅಲ್ಲಿರಲಿಲ್ಲ. ಎಲ್ಲವೂ ಮಾಯವಾಗಿತ್ತು" ಎಂದು ನಡುಗುವ ಧ್ವನಿಯಲ್ಲಿ ವಿವರಿಸಿದರು.
ಇನ್ನೊಬ್ಬ ಮಹಿಳೆ, "ನನ್ನ ಸಂಬಂಧಿ ನನಗೆ ಕರೆ ಮಾಡಿ, ತನ್ನ ಪುಟ್ಟ ಅಂಬೆಗಾಲಿಡುವ ಕಂದಮ್ಮನನ್ನು ಹಿಂಡಿದುಕೊಂಡು, ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರುವುದಾಗಿ ಹೇಳಿದಳು. ಅವಳ ಮಾತು ಸರಿಯಾಗಿ ಕೇಳಿಸುತ್ತಿರಲಿಲ್ಲ. ಆಮೇಲೆ ನಮ್ಮ ಮನೆಯಿಂದ ಓಡಿ ಹೋಗುತ್ತಿದ್ದೇವೆ ಎಂದು ಹೇಳಿದಳು. ಅಷ್ಟು ಹೇಳುತ್ತಿದ್ದಂತೆ ಫೋನ್ ಸಂಪರ್ಕ ಕಡಿತವಾಯಿತು. ಅವರು ಎಲ್ಲಿದ್ದಾರೆ, ಅಥವಾ ಅವರು ಜೀವಂತವಾಗಿದ್ದಾರೆಯೇ ಎಂದು ನನಗೆ ತಿಳಿದಿಲ್ಲ" ಎಂದು ಹೇಳಿದರು.
ಬಾಗಿಲು ತೆರೆದಾಗ, ಮನೆ ಮುಂದೆಯೇ ನೀರು ಹರಿಯುತ್ತಿತ್ತು: ಮನೆಗಳೆಲ್ಲ ಕುಸಿದು ಬೀಳುತ್ತಿರುವುದನ್ನು ಕಂಡು ದಿಗ್ಭ್ರಮೆಗೊಂಡ ವ್ಯಕ್ತಿಯೊಬ್ಬರು ತಮ್ಮ ವೇದನೆ ಹಂಚಿಕೊಂಡರು. "ಎರಡು ದಿನಗಳಿಂದ ಜೋರು ಮಳೆಯಾಗುತ್ತಿತ್ತು. ಸಾಮಾನ್ಯವಾಗಿ ರಾತ್ರಿ 9 ಗಂಟೆಗೆ ಊಟ ಮಾಡಿ ಮಲಗುತ್ತೇವೆ. ಎಂದಿನಂತೆ ಅಂದು ಕೂಡ ಊಟ ಮಾಡಿ ಮಲಗಿದ್ದೆವು. ಸುಮಾರು 1.30 ರ ಸುಮಾರಿಗೆ ಬೆಟ್ಟದ ತುದಿಯಿಂದ ದೊಡ್ಡ ಶಬ್ದ ಕೇಳಿಸಿತು. ನಾನು ಮನೆಯ ಬಾಗಿಲು ತೆರೆದಾಗ, ನಮ್ಮ ಮನೆಯ ಮುಂದೆ ನೀರು ಹರಿಯುವುದನ್ನು ನೋಡಿದೆ. ಎಲ್ಲೋ ಭೂಕುಸಿತ ಸಂಭವಿಸಿದೆ ಎಂಬುದನ್ನು ನಾನು ಅರಿತುಕೊಂಡೆ. ಪರಿಸ್ಥಿತಿ ಭೀಕರವಾಗಿತ್ತು. ಕೆಲವು ಕುಟುಂಬಗಳು ಪಾರಾಗುವಲ್ಲಿ ಯಶಸ್ವಿಯಾದವು, ಇನ್ನು ಕೆಲವರು ಪ್ರಾಣಾಪಾಯದಿಂದ ಪಾರಾಗಲು ತಮ್ಮ ಛಾವಣಿಯ ಮೇಲೆ ಹತ್ತಿದರು. ಎರಡನೇ ಭೂಕುಸಿತಕ್ಕೆ ಮುಂಡಕ್ಕೈನಿಂದ ಚೂರಲ್ಮಲಾ ಸ್ಕೂಲ್ ರಸ್ತೆವರೆಗಿನ ಪ್ರದೇಶದಲ್ಲಿನ ಎಲ್ಲಾ ಮನೆಗಳು ಮತ್ತು ವಸ್ತುಗಳು ಕುಸಿದು ಹೋದವು. ನಾನು ಇದನ್ನೆಲ್ಲ ಮೇಲಿನಿಂದ ನೋಡಿದೆ." ಎಂದು ವಿವರಿಸಿದರು.
ದುರಂತ ನಡೆದ ಪ್ರದೇಶದಾದ್ಯಂತ ನಿರ್ಮಿಸಿರುವ ಪರಿಹಾರ ಶಿಬಿರಗಳಲ್ಲಿ ಬದುಕುಳಿದವರು, ಕುಟುಂಬಗಳನ್ನು, ಮನೆಗಳನ್ನು ಕಳೆದುಕೊಂಡವರು ಆಶ್ರಯ ಪಡೆಯುತ್ತಿದ್ದಾರೆ. ಮೇಪ್ಪಡಿಯ ಸೇಂಟ್ ಜೋಸೆಫ್ ಹೈಸ್ಕೂಲ್ ಅನ್ನು ಮುಖ್ಯ ಆಶ್ರಯ ತಾಣವನ್ನಾಗಿ ಮಾಡಲಾಗಿದ್ದು, ಇಲ್ಲಿ ಅನೇಕ ನಿರಾಶ್ರಿತ ಕುಟುಂಬಗಳು ಆಶ್ರ ಪಡೆದಿವೆ.
ಅಧಿಕಾರಿಗಳು ವಯನಾಡಿನಲ್ಲಿ ಐದು ಹೆಚ್ಚುವರಿ ಪರಿಹಾರ ಶಿಬಿರಗಳನ್ನು ಸ್ಥಾಪಿಸಿದ್ದಾರೆ. ಶಾಲೆಗಳು, ಚರ್ಚ್ಗಳು, ಅಂಗನವಾಡಿಗಳು ಮತ್ತು ಲಭ್ಯವಿರುವ ಎಲ್ಲಾ ಸೌಲಭ್ಯಗಳನ್ನು ಬಳಸಿಕೊಳ್ಳಲಾಗುತ್ತಿದೆ. ರಕ್ಷಿಸಲ್ಪಟ್ಟ ವ್ಯ್ಕತಿಗಳ ಸಂಖ್ಯೆ ಹೆಚ್ಚುತ್ತಿದ್ದು, ಸಂತ್ರಸ್ತರಿಗೆ ವಸತಿ ಕಲ್ಪಿಸಲು ಹೆಚ್ಚಿನ ಶಿಬಿರಗಳನ್ನು ಸ್ಥಾಪಿಸಲು ಅಧಿಕಾರಿಗಳು ಸಿದ್ಧತೆ ನಡೆಸುತ್ತಿದ್ದಾರೆ.