ಮುಂಬೈ (ಮಹಾರಾಷ್ಟ್ರ): ಭಾರತ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ದೇಶದ ಅತ್ಯಂತ ಮೌಲ್ಯಯುತ ಸೆಲೆಬ್ರಿಟಿ ಎಂಬ ಅಗ್ರ ಪಟ್ಟವನ್ನು ಮರಳಿ ಪಡೆದಿದ್ದಾರೆ. ಅವರ ಬ್ರ್ಯಾಂಡ್ ಮೌಲ್ಯ ಕೊಂಚ ಕುಸಿತ ಕಂಡರೂ ಸಹ ದುಬಾರಿ ತಾರೆ ಎಂದೆನಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಬಾಲಿವುಡ್ ನಟ ರಣವೀರ್ ಸಿಂಗ್ ಮತ್ತು ಶಾರೂಖ್ ಖಾನ್ ನಂತರದ ಸ್ಥಾನದಲ್ಲಿದ್ದಾರೆ.
2023ನೇ ಸಾಲಿನ ಬ್ರ್ಯಾಂಡ್ ಮೌಲ್ಯವನ್ನಾಧರಿಸಿ ಕ್ರೋಲ್ ಕನ್ಸಲ್ಟೆನ್ಸಿ ಸಂಸ್ಥೆ ಬಿಡುಗಡೆ ಮಾಡಿರುವ ವರದಿಯಲ್ಲಿ, ಕ್ರಿಕೆಟಿಗ ವಿರಾಟ್ ಕೊಹ್ಲಿ 2023 ರಲ್ಲಿ 227.9 ಅಮೆರಿಕನ್ ಮಿಲಿಯನ್ ಡಾಲರ್ ಬ್ರ್ಯಾಂಡ್ ಮೌಲ್ಯದೊಂದಿಗೆ ದೇಶದ ಅತಿ ದುಬಾರಿ ಸೆಲೆಬ್ರಿಟಿಯಾಗಿದ್ದಾರೆ. 2022 ರಲ್ಲಿ ಕೊಹ್ಲಿ 176.9 ಮಿಲಿಯನ್ ಡಾಲರ್ ಬ್ರ್ಯಾಂಡ್ ಮೌಲ್ಯ ಹೊಂದಿದ್ದರು. ಒಂದೇ ವರ್ಷದಲ್ಲಿ ಶೇಕಡಾ 29 ರಷ್ಟು ಜಿಗಿತ ಕಂಡು 227.9 ಮಿಲಿಯನ್ ಡಾಲರ್ಗೆ ತಲುಪಿದ್ದಾರೆ.
ಆದರೆ, 2020ಕ್ಕೆ (237.7 ಮಿಲಿಯನ್ ಡಾಲರ್) ಹೋಲಿಸಿದರೆ ಬ್ರ್ಯಾಂಡ್ ಮೌಲ್ಯ 10 ಮಿಲಿಯನ್ ಡಾಲರ್ ಕಡಿಮೆಯಾಗಿದೆ. ಈ ಮೂಲಕ ಬಾಲಿವುಡ್ ನಟ ರಣವೀರ್ ಸಿಂಗ್ ಅವರ 203.1 ಮಿಲಿಯನ್ ಡಾಲರ್ ಬ್ರಾಂಡ್ ಮೌಲ್ಯವನ್ನು ಹಿಂದಿಕ್ಕಿ ಮೊದಲ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಕಳೆದ ವರ್ಷ ಮೊದಲ ಸ್ಥಾನದಲ್ಲಿದ್ದ ರಣವೀರ್ ಸಿಂಗ್ 2023ನೇ ಸಾಲಿನಲ್ಲಿ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ ಎಂದು ಕನ್ಸಲ್ಟೆನ್ಸಿ ಸಂಸ್ಥೆ ವರದಿ ತಿಳಿಸಿದೆ.
ಮೂರನೇ ಸ್ಥಾನದಲ್ಲಿ ಶಾರೂಖ್: ಜವಾನ್ ಮತ್ತು ಪಠಾಣ್ ಸಿನಿಮಾದ ಯಶಸ್ಸಿನಿಂದ ಬಾಲಿವುಡ್ನ ಬಹುಬೇಡಿಕೆಯ ನಟ ಶಾರುಖ್ ಖಾನ್ 120.7 ಮಿಲಿಯನ್ ಡಾಲರ್ ಬ್ರ್ಯಾಂಡ್ ಮೌಲ್ಯದೊಂದಿಗೆ ಮೂರನೇ ಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ. 2022 ರಲ್ಲಿ 55.7 ಮಿಲಿಯನ್ ಡಾಲರ್ ಮೌಲ್ಯದೊಂದಿಗೆ ಹತ್ತನೇ ಸ್ಥಾನದಲ್ಲಿದ್ದ ನಟ, ಒಂದೇ ವರ್ಷದಲ್ಲಿ 7 ಸ್ಥಾನ ಮೇಲೇರಿದ್ದಾರೆ.
ನಟ ಅಕ್ಷಯ್ಕುಮಾರ್ 111.7 ಮಿಲಿಯನ್ ಡಾಲರ್ನೊಂದಿಗೆ 4ನೇ ಸ್ಥಾನ, ನಟಿ ಆಲಿಯಾ ಭಟ್ 101.1 ಮಿಲಿಯನ್ ಡಾಲರ್ ಮೌಲ್ಯದೊಂದಿಗೆ ಐದನೇ ಸ್ಥಾನ, ದೀಪಿಕಾ ಪಡುಕೋಣೆ 96 ಮಿಲಿಯನ್ ಮೌಲ್ಯದೊಂದಿಗೆ ಆರನೇ ಸ್ಥಾನದಲ್ಲಿದ್ದಾರೆ. ಈ ಮೂವರು ಕಳೆದ ವರ್ಷಕ್ಕೆ ಹೋಲಿಸಿದರೆ ತಲಾ ಒಂದೊಂದು ಸ್ಥಾನ ಇಳಿಕೆ ಕಂಡಿದ್ದಾರೆ.
ಮಾಜಿ ಕ್ರಿಕೆಟರ್ ಮಹೇಂದ್ರ ಸಿಂಗ್ ಧೋನಿ 95.8 ಮಿಲಿಯನ್ ಡಾಲರ್ ಬ್ರಾಂಡ್ ಮೌಲ್ಯದೊಂದಿಗೆ 7, ಕ್ರಿಕೆಟ್ ದೇವರಾದ ಸಚಿನ್ ತೆಂಡೂಲ್ಕರ್ 91.3 ಮಿಲಿಯನ್ ಡಾಲರ್ ಬ್ರಾಂಡ್ ಮೌಲ್ಯದೊಂದಿಗೆ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದ್ದಾರೆ. ನಟ ಸಲ್ಮಾನ್ ಖಾನ್ 81.7 ಮಿಲಿಯನ್ ಡಾಲರ್ ಮೌಲ್ಯದೊಂದಿಗೆ ಹತ್ತನೇ ಸ್ಥಾನದಲ್ಲಿದ್ದಾರೆ. ದೇಶದ ಟಾಪ್ 25 ಸೆಲೆಬ್ರಿಟಿಗಳ ಬ್ರ್ಯಾಂಡ್ ಮೌಲ್ಯ 1.9 ಬಿಲಿಯನ್ ಆಗಿದೆ. ಇದು ಕಳೆದ ವರ್ಷಕ್ಕಿಂತ 15.5 ಶೇಕಡಾ ಹೆಚ್ಚಾಗಿದೆ. ಟಾಪ್ 25 ರಲ್ಲಿ ಇರುವ ನಟಿಯರ ಪೈಕಿ ಕಿಯಾರಾ ಅಡ್ವಾಣಿ 12ನೇ ಸ್ಥಾನ, ಕತ್ರಿನಾ ಕೈಫ್ 25ನೇ ಸ್ಥಾನದಲ್ಲಿದ್ದಾರೆ.