ನವದೆಹಲಿ: ಕಾಂಗ್ರೆಸ್ ಸೇರಲು ಸಿದ್ಧತೆ ನಡೆಸಿರುವ ಮಾಜಿ ಕುಸ್ತಿಪಟು ವಿನೇಶ್ ಪೋಗಟ್, ತಾವು ಹೊಂದಿರುವ ಭಾರತೀಯ ರೈಲ್ವೆ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ರಾಜೀನಾಮೆಯಲ್ಲಿ ವೈಯಕ್ತಿಕ ಕಾರಣ ಎಂದು ನಮೂದಿಸಿದ್ದಾರೆ.
कांग्रेस अध्यक्ष श्री @kharge और संगठन महासचिव श्री @kcvenugopalmp से @Phogat_Vinesh जी और @BajrangPunia जी ने मुलाकात की।
— Congress (@INCIndia) September 6, 2024
📍 नई दिल्ली pic.twitter.com/fb0iY39YCs
ರೈಲ್ವೆ ಇಲಾಖೆಯ ಹುದ್ದೆಗೆ ರಾಜೀನಾಮೆ ಸಲ್ಲಿಕೆ ಮಾಡಿರುವ ಪತ್ರವನ್ನು ತಮ್ಮ ಎಕ್ಸ್ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಭಾರತೀಯ ರೈಲ್ವೆಯಲ್ಲಿ ಸೇವೆ ಸಲ್ಲಿಸಿದ್ದು, ನನ್ನ ಜೀವನದ ಸ್ಮರಣೀಯ ಮತ್ತು ಹೆಮ್ಮೆಯ ದಿನ ಎಂದು ಬರೆದಿದ್ದಾರೆ. ಪೋಗಟ್, ಉತ್ತರ ರೈಲ್ವೆಯಲ್ಲಿ ವಿಶೇಷ ಕರ್ತವ್ಯ ಅಧಿಕಾರಿಯಾಗಿದ್ದರು.
ನನ್ನ ಜೀವನದ ಈ ಕ್ಷಣದಲ್ಲಿ ನಾನು ರೈಲ್ವೆ ಸೇವೆಯಿಂದ ನನ್ನನ್ನು ಮುಕ್ತಗೊಳಿಸಲು ನಿರ್ಧರಿಸಿದ್ದೇನೆ. ನನ್ನ ರಾಜೀನಾಮೆ ಪತ್ರವನ್ನು ಭಾರತೀಯ ರೈಲ್ವೆಗೆ ಸಂಬಂಧಿಸಿದ ಅಧಿಕಾರಿಗೆ ಸಲ್ಲಿಸಿದ್ದೇನೆ. ದೇಶ ಸೇವೆಯಲ್ಲಿ ರೈಲ್ವೆ ನೀಡಿದ ಅವಕಾಶಕ್ಕೆ ನಾನು ಸದಾ ಭಾರತೀಯ ರೈಲ್ವೆ ಕುಟುಂಬಕ್ಕೆ ಕೃತಜ್ಞಳಾಗಿರುತ್ತೇನೆ ಎಂದಿದ್ದಾರೆ.
ನನ್ನ ಕುಟುಂಬದ ಪರಿಸ್ಥಿತಿ ಮತ್ತು ವೈಯಕ್ತಿಕ ಕಾರಣಗಳ ದೃಷ್ಟಿಯಿಂದಾಗಿ ನಾನು ಒಸಿಡಿ/ಕ್ರೀಡೆಯ ಹುದ್ದೆ ನಿರ್ವಹಣೆ ಮಾಡಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆ ಯಾವುದೇ ಒತ್ತಡವಿಲ್ಲದೇ, ನಾನು ರಾಜೀನಾಮೆ ಪತ್ರ ಸಲ್ಲಿಸುತ್ತಿದ್ದೇನೆ. ತತ್ಕ್ಷಣಕ್ಕೆ ಜಾರಿಯಾಗುವಂತೆ ನನ್ನ ರಾಜೀನಾಮೆ ಸ್ವೀಕಾರ ಮಾಡುವಂತೆ ವಿನೇಶ್ ಮನವಿ ಸಲ್ಲಿಸಿದ್ದಾರೆ.
ಕಳೆದೆರಡು ದಿನಗಳ ಹಿಂದೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿದ್ದ ಪೋಗಟ್, ಇಂದು ಮಧ್ಯಾಹ್ನ ಕಾಂಗ್ರೆಸ್ ಸೇರ್ಪಡೆ ಆಗಿದ್ದಾರೆ. ರಾಜೀನಾಮೆ ಸಲ್ಲಿಕೆ ಬಳಿಕ ಒಂದು ತಿಂಗಳ ನೋಟಿಸ್ ಅವಧಿ ಪೂರೈಸುವ ಬದಲಾಗಿ ಒಂದು ತಿಂಗಳ ವೇತನವನ್ನು ಠೇವಣಿ ಇಡುವುದಾಗಿ ತಿಳಿಸಿದ್ದಾರೆ.
ಕಾಂಗ್ರೆಸ್ ಸೇರಿದ ಪೋಗಟ್: ಒಲಿಂಪಿಕ್ ಅನರ್ಹತೆ ಬೆನ್ನಲ್ಲೇ ಕುಸ್ತಿಗೆ ವಿದಾಯ ಘೋಷಿಸಿದ್ದ ವಿನೇಶ್ ಪೋಗಟ್ಗೆ ಬುಧವಾರ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿದ್ದರು. ಈ ಬೆನ್ನಲ್ಲೇ ಇಂದು ಅವರು ನವದೆಹಲಿಯಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಅವರನ್ನು ಭೇಟಿಯಾದರು. ಇವರ ಜೊತೆಗೆ ಕುಸ್ತಿಪಟು ಬಜರಂಗ್ ಪೂನಿಯಾ ಕೂಡ ಇಂದು ಅಧಿಕೃತವಾಗಿ ಕಾಂಗ್ರೆಸ್ ಸೇರಿದರು. ಕಾಂಗ್ರೆಸ್ ಉನ್ನತ ಮಟ್ಟದ ನಾಯಕರ ಭೇಟಿಯಾಗಿ, ಪಕ್ಷ ಸೇರಿರುವ ಚಿತ್ರವನ್ನು ಕಾಂಗ್ರೆಸ್ ತನ್ನ ಅಧಿಕೃತ ಎಕ್ಸ್ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಚುನಾವಣಾ ಕಣಕ್ಕೆ?: ಹರಿಯಾಣ ವಿಧಾನಸಭಾ ಚುನಾವಣೆಗೆ ಮಾಜಿ ಕುಸ್ತಿ ಪಟುಗಳು ಕಣಕ್ಕೆ ಇಳಿಯುವ ಸಾಧ್ಯತೆ ಇದೆ. 90 ಕ್ಷೇತ್ರಗಳಿಗೆ ಅಕ್ಟೋಬರ್ 5 ರಂದು ಮತದಾನ ನಡೆಯಲಿದ್ದು, ಅಕ್ಟೋಬರ್ 8ರಂದು ಫಲಿತಾಂಶ ಪ್ರಕಟವಾಗಲಿದೆ.
ಇದನ್ನೂ ಓದಿ: ರಾಹುಲ್ ಗಾಂಧಿ ಭೇಟಿಯಾದ ವಿನೇಶ್ ಫೋಗಟ್; ಹರಿಯಾಣ ಚುನಾವಣೆಯಲ್ಲಿ ಸ್ಪರ್ಧೆ ನಿಶ್ಚಿತ?